ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

Srinivasa Murthy VN
Updated On : 2 Aug 2013, 11:15 am

ಕ.ಪ್ರ.ವಾರ್ತೆ ಹುಬ್ಬಳ್ಳಿ ಆ. 2
ರೇಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಹುಬ್ಬಳ್ಳಿಯ ಚಾಲುಕ್ಯ ನಗರದ ಮಹಿಳೆಯೊಬ್ಬರ ಮೇಲೆ ಸುಮಾರು 4-5 ದುಷ್ಕರ್ಮಿಗಳು ಗುರುವಾರ ತಡರಾತ್ರಿ ಸಾಮೂಹಿಕ ಅತ್ಯಾಚಾರ ಎಸಗಿದ್ದು, ಪ್ರಕರಣದಲ್ಲಿ ಅಳಿಯನೇ ಭಾಗಿಯಾಗಿರಬಹುದು ಎಂದು ಶಂಕಿಸಲಾಗಿದೆ.
ತಡ ರಾತ್ರಿ ಏಕಾಏಕಿ 43 ವರ್ಷದ ಮಹಿಳೆ ಮನೆಗೆ ಮುಸುಕು ಹಾಕಿಕೊಂಡಿದ್ದ ದುಷ್ಕರ್ಮಿಗಳು ನುಗ್ಗಿ, ಮಹಿಳೆಯ ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ ಎಸಗಿದ್ದಾರೆ. ಅಲ್ಲದೆ, ಘಟನೆ ಬಗ್ಗೆ ಮಾಧ್ಯಮ ಅಥವಾ ಪೊಲೀಸರಿಗೆ ಮಾಹಿತಿ ನೀಡಿದರೆ ನಿನ್ನ ಮಗನ ಜೀವ ಉಳಿಸುವುದಿಲ್ಲ ಎಂದು ಬೆದರಿಸಿ, ಹೋಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹಲವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ. ಆಂಧ್ರ ಮೂಲದ ಈ ಮಹಿಳೆ ಪತಿಯ ನಿಧನ ನಂತರ ಹುಬ್ಬಳ್ಳಿ ನೈಋತ್ಯ ರೇಲ್ವೆಯಲ್ಲಿ 'ಡಿ' ದರ್ಜೆ ಉದ್ಯೋಗಿಯಾಗಿ ಸೇವೆ ಸಲ್ಲಿಸುತ್ತಿದ್ದರು.ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಮಗ ಬುಧವಾರ ಬೆಳಗ್ಗೆ ರೇಲ್ವೆ ಇಲಾಖೆ ನಡೆಸುವ ವೈದ್ಯಕೀಯ ಪರೀಕ್ಷೆಗೆ ಹಾಜರಾಗಲು ಮೈಸೂರಿಗೆ ಹೋಗಿದ್ದ. ಶುಕ್ರವಾರ ಬೆಳಗ್ಗೆ ತಾಯಿಯ ಯೋಗಕ್ಷೇವು ವಿಚಾರಿಸಲು ಪೋನ್ ಮಾಡಿದಾಗ, ಅರೆ ಪ್ರಜ್ಞಾವಸ್ಥೆಯಲ್ಲಿದ್ದ ತಾಯಿ ತನಗಾದ ಅವಮಾನವನ್ನು ಮಗನಿಗೆ ವಿವರಿಸಿ, ನನ್ನ ಜೀವನ ಅಂತ್ಯಗೊಳಿಸುತ್ತಿದ್ದೇನೆ ಎಂದೂ ಹೇಳಿದ್ದರು.
ನೆರೆಯವರಿಂದ ಆಸ್ಪತ್ರೆಗೆ ದಾಖಲು: ಮಗ ತಕ್ಷಣವೇ ತಾಯಿಯನ್ನು ತುಸು ವಿಚಾರಿಸಿಕೊಳ್ಳಲು ನೆರೆಯವರಿಗೆ ಹೇಳಿದ್ದಾನೆ. ಅವರು ಮಹಿಳೆಯ ಸ್ಥಿತಿ ನೋಡಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರು ಮಹಿಳೆ ಮೇಲೆ ಕನಿಷ್ಠ ನಾಲ್ಕರಿಂದ ಐದು ಮಂದಿ ಲೈಂಗಿಕ ದೌರ್ಜನ್ಯ ಎಸಗಿರುವುದು ಚಿಕಿತ್ಸೆಯಿಂದ ದೃಢಪಟ್ಟಿದೆ ಎಂದು ಖಚಿತಪಡಿಸಿದ್ದಾರೆ. ಅತ್ಯಾಚಾರ ನಡೆದಿರುವ ಕುರಿತು ಖಾತ್ರಿ ಪಡಿಸಿಕೊಳ್ಳಲು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ವಿವಿಧ ಮಾದರಿಗಳನ್ನು ಕಳುಹಿಸಿಕೊಡಲಾಗಿದೆ.  
ಈ ಕುರಿತು ಕೇಶ್ವಾಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಳಿಯ ರಾಜಶೇಖರ್ ಸೇರಿದಂತೆ ಇನ್ನಿತರರನ್ನು ವಿಚಾರಣೆಗೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಆಸ್ತಿ ಲಪಟಾಯಿಸಲು ಬೆದರಿಕೆವೊಡ್ಡುವ ಹಿನ್ನೆಲೆಯಿಂದ ಈ ಅತ್ಯಾಚಾರವೆಸಗಲಾಗಿದೆ ಎನ್ನಲಾಗುತ್ತಿದೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಕಮಿಷನರ್ ಬಿ.ಎ. ಪದ್ಮನಯನ ಅವರು, ಅತ್ಯಾಚಾರಕ್ಕೆ ಒಳಗಾದ ಮಹಿಳೆ ಅರೆಪ್ರಜ್ಞಾವಸ್ಥೆಯಲ್ಲಿರುವ ಕಾರಣ ಪೂರ್ಣ ಪ್ರಮಾಣದ ಹೇಳಿಕೆ ಪಡೆಯಲು ಆಗಿಲ್ಲ. ಆಘಾತದಿಂದ ಮಹಿಳೆ ಚೇತರಿಸಿಕೊಂಡ ನಂತರ ಘಟನೆಯ ಕುರಿತು ಪೂರ್ಣ ಮಾಹಿತಿ ಪಡೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.  

ಬಾಲಕಿಯ ಮೇಲೆ ಅತ್ಯಾಚಾರ
ಆಳಂದ: ಗುಲ್ಬರ್ಗ ಜಿಲ್ಲೆಯ ಆಳಂದ ತಾಲೂಕಿನ ಹಿರೋಳಿ ಗ್ರಾಮದಲ್ಲಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ಬೆಳಕಿಗೆ ಬಂದಿದೆ.  15 ವರ್ಷದ ಬಾಲಕಿಯನ್ನು ಅದೇ ಗ್ರಾಮದ ಶರಣು ಸೋಮಲಿಂಗ ಪಾಲಾಪುರೆ ಎಂಬಾತ ಪುಸಲಾಯಿಸಿ ಸರ್ಕಾರಿ ಶಾಲೆಯ ಹತ್ತಿರ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆ.  ನಂತರ ಬಾಲಕಿಯನ್ನು ಹೊಲದ ಮೆಟಗಿಯಲ್ಲಿ ಕೂಡಿ ಹಾಕಿ ಈ ವಿಷಯ ಯಾರಿಗಾದರು ಹೇಳಿದರೆ ಜೀವ ತಗೆಯುವುದಾಗಿ ಬೆದರಿಸಿದ್ದಾನೆ. ಹೆದರಿದ ಬಾಲಕಿ ತಡವಾಗಿ ಮನೆಯಲ್ಲಿ ವಿಷಯ ತಿಳಿಸಿದ್ದಾಳೆ. ನಂತರ ಬಾಲಕಿಯ ಪೋಷಕರು ಆರೋಪಿಯ ವಿರುದ್ಧ ದೂರು ಸಲ್ಲಿಸಿದ್ದಾರೆ. ಮಾದನಹಿಪ್ಪರ್ಗಾ ಪಿಎಸ್ಐ ಆರ್.ಎಚ್. ಬಾಗವಾನ್ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು, ಆರೋಪಿ ಪತ್ತೆಗಾಗಿ ವ್ಯಾಪಕ ಜಾಲ ಬೀಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement