ಬಾಸೆಲ್ ಮಿಷನ್ ಪ್ರೌಢಶಾಲೆಗೆ 150ರ ಸಂಭ್ರಮ
-ಬಸವರಾಜ ಹಿರೇಮಠ
ಧಾರವಾಡ: ವಿದ್ಯಾನಗರಿ ಖ್ಯಾತಿ ಧಾರವಾಡದಲ್ಲಿ ಮೊಟ್ಟಮೊದಲ ಬಾರಿಗೆ ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾದ ಬಾಸೆಲ್ ಮಿಷನ್ ಬಾಲಕರ ಪ್ರೌಢಶಾಲೆಗೀಗ 150 ವಸಂತಗಳ ಸಂಭ್ರಮ.
ಕ್ರೈಸ್ತ ಧರ್ಮೋಪದೇಶ ಮಾಡಲು ಧಾರವಾಡಕ್ಕೆ ಬಂದ ಬಾಸೆಲ್ ಮಿಷನರಿಗಳಿಂದ 1863ರಲ್ಲಿ ಆರಂಭವಾದ ಈ ಶಾಲೆ 2013ನೇ ವರ್ಷಕ್ಕೆ ಶತಮಾನೋತ್ತರ ಸುವರ್ಣ ಮಹೋತ್ಸವ ಆಚರಿಸಿಕೊಳ್ಳಲು ಸಜ್ಜಾಗಿದೆ. ನೂರೈವತ್ತು ವರ್ಷಗಳ ಸುದೀರ್ಘ ಹಾದಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಇಲ್ಲಿ ಅಭ್ಯಸಿಸಿದ್ದು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಗಿರೀಶ್ ಕಾರ್ನಾಡ್, ಪರಿಸರವಾದಿ ಹಾಗೂ ಚಿತ್ರನಟ ಸುರೇಶ ಹೆಬ್ಳೀಕರ, ರಂಗತಜ್ಞ ಸುಬ್ಬರಾಯ್ ಭಟ್, ವಂಕಟೇಶ ಗೋಡಖಿಂಡಿ ಈ ಶಾಲೆಯ ವಿದ್ಯಾರ್ಥಿಗಳು.
1838ರಲ್ಲಿ ಮಂಗಳೂರಿನಿಂದ ಧಾರವಾಡಕ್ಕೆ ಧರ್ಮೋಪದೇಶ ಮಾಡಲು ಬಂದಿದ್ದ ಹರ್ಮನ್ ಮೊಗ್ಲಿಂಗ್, ಲೈಯರ್ ಹಾಗೂ ಪ್ರೈ ಎಂಬ ಮಿಷನರಿಗಳು 1838ರಲ್ಲಿ ಇಂಗ್ಲಿಷ್ ಶಾಲೆಗಾಗಿ ಒಂದು ಕಟ್ಟಡ ಕಟ್ಟಿಕೊಂಡರು. ಇದೇ ಸಮಯದಲ್ಲಿ ಕನ್ನಡ ಶಾಲೆಯೊಂದು ಹೆಸರಿಗೆ ಮಾತ್ರ ಆರಂಭವಾಗಿತ್ತು. ನಂತರ 1963ರಲ್ಲಿ ಇದು ಸಂಪೂರ್ಣ ಬಾಸೆಲ್ ಮಿಷನ್ ಮಾಧ್ಯಮಿಕ ಶಾಲೆಯಾಗಿ ಸರ್ಕಾರದ ಮಾನ್ಯತೆ ಪಡೆಯಿತು. ಪ್ರಥಮ ಕನ್ನಡ ದಿನಪತ್ರಿಕೆ ಮಂಗಳೂರು ಸಮಾಚಾರ ಹೊರತಂದ ಹರ್ಮನ್ ಮೊಗ್ಲಿಂಗ್ ಈ ಬಾಸೆಲ್ ಮಿಷನ್ ಶಾಲೆಯ ಪ್ರಧಾನ ಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ. ಶಾಲೆಗೆ ಉತ್ತಮ ಸ್ಥಾನ ದೊರಕಿಸಿ ಕೊಟ್ಟವರು ಫರ್ಡಿನಂಡ್ ಜಿಗ್ಲರ್. 1870ರಿಂದ 1895ರ ವರೆಗೆ ಮುಖ್ಯೋಪಾಧ್ಯಾಯರಾಗಿ ಕೆಲಸ ನಿರ್ವಹಿಸಿದರು. ಕನ್ನಡ ಪುಸ್ತಕಗಳಿಲ್ಲದ ಆ ಕಾಲದಲ್ಲಿ ಶಾಲೆಗೆ ಉಪಯುಕ್ತ ಪುಸ್ತಕಗಳನ್ನು ಕನ್ನಡದಲ್ಲಿ ಬರೆದರು.
ಜಿಗ್ಲರ್ ಕಾಲದಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಏರಿತು. ಜಾತಿ-ಮತ-ಪಂಥ ಎನ್ನದೇ ಎಲ್ಲರಿಗೂ ವಿದ್ಯಾದಾನ ಮಾಡಿದರು. ಇವರ ಸತತ ಪ್ರಯತ್ನದ ಫಲವಾಗಿ ಬ್ರಿಟಿಷ್ ಸರ್ಕಾರದಿಂದ 6.14 ಎಕರೆ ಭೂಮಿ ಪಡೆದುಕೊಂಡು ಅಲ್ಲಿ ಹೊಸ ಕಟ್ಟಡ ಸಹ ಕಟ್ಟಿದರು. ಕನ್ನಡ ನಾಡಿನ ಸುಪ್ರಿಸಿದ್ಧ ಮುಂದಾಳುಗಳಾದ ರೊದ್ದ ಶ್ರೀನಿವಾಸರಾಯರು, ಕಡಪಾ ರಾಘವೇಂದ್ರರಾಯರು ಜಿಗ್ಲರ್ ಪ್ರಾಚಾರ್ಯರಾಗಿದ್ದಾಗ ವಿದ್ಯಾರ್ಥಿಗಳಿದ್ದರು. ಇದೇ ಸಂದರ್ಭ ಫರ್ಡಿನಂಡ್ ಕಿಟೆಲ್ ಅವರೂ ಈ ಶಾಲೆಯ ಪೋಷಣೆಗಾಗಿ ದುಡಿದರು. ಮುಂಬೈ ಪ್ರಾಂತದಲ್ಲಿ ಧಾರವಾಡದ ಬಾಸೆಲ್ ಮಿಷನ್ ಮಾಧ್ಯಮಿಕ ಶಾಲೆ ಅತ್ಯುತ್ತಮ ಎಂದೇ ಪರಿಗಣಿಸಲ್ಪಟ್ಟಿತ್ತು.
ಜಿಗ್ಲರ್ ನಂತರ ಅನೇಕ ಪ್ರಾಚಾರ್ಯರು ಆಡಳಿತ ನಡೆಸಿದರು. ಈ ಪೈಕಿ 1934ರಲ್ಲಿ ಬಂದ ಆರ್.ಎಸ್. ಬಂಗೇರಾ ಅವರ ಹಿರಿತನದಲ್ಲಿ ಶಾಲೆಯು ಉತ್ತುಂಗಕ್ಕೇರಿತು. ಮತ ಭೇದ ಮಾಡದೆ ನುರಿತ ಶಿಕ್ಷಕರನ್ನು ನೇಮಿಸಿಕೊಂಡರು. 1945ರಲ್ಲಿ ವಿದ್ಯಾರ್ಥಿನಿಯರಿಗಾಗಿಯೇ ಬಾಸೆಲ್ ಮಿಷನ್ ವಿದ್ಯಾರ್ಥಿನಿಯರ ಶಾಲೆಯನ್ನೂ ಆರಂಭಿಸಿದರು. ಇವರ ಆಸಕ್ತಿಯಿಂದ ಬರೀ ಬಾಸೆಲ್ ಮಿಷನ್ ಅಷ್ಟೇ ಅಲ್ಲ ಪ್ರಾಥಮಿಕ ಶಿಕ್ಷಕರ ತರಬೇತಿ ಕಾಲೇಜು ಸಹ ಆರಂಭವಾಯಿತು. ಇವರ ಶ್ರಮದ ಫಲವಾಗಿ ಬಾಸೆಲ್ ಮಿಷನ್ ಶಾಲೆಗಳಲ್ಲಿ ಕನ್ನಡ ಮಾತ್ರವಲ್ಲದೆ, ಜರ್ಮನ್, ಫ್ರೆಂಚ್, ಪರ್ಷಿಯನ್, ಉರ್ದು ಹಾಗೂ ಮರಾಠಿ ಸಹ ಕಲಿಸುತ್ತಿದ್ದರು. ಹೀಗೆ 150 ವರ್ಷಗಳಲ್ಲಿ ಬಾಸೆಲ್ ಮಿಷನ್ ಮಾಧ್ಯಮಿಕ ಶಾಲೆಯು ಒಟ್ಟು 30 ಪ್ರಧಾನ ಗುರುಗಳನ್ನು ಕಂಡಿದ್ದು, ಸದ್ಯ 31ನೇ ಪ್ರಧಾನ ಗುರುಗಳಾಗಿ ಎಸ್.ಜೆ. ಕುರಿ ಅವರ ಮುಖಂಡತ್ವದಲ್ಲಿ ಶತಮಾನೋತ್ತರ ಸುವರ್ಣ ಮಹತ್ಸವ ಸಮಾರಂಭವನ್ನು ಅ.29,30 ಹಾಗೂ 31ರಂದು ಹಮ್ಮಿಕೊಳ್ಳಲಾಗಿದೆ.