ಇಂದು ಧಾರವಾಡ ಹೈಕೋರ್ಟ್ ಪೂರ್ಣ ಪೀಠ ಉದ್ಘಾಟನೆ
ಧಾರವಾಡ: 2008ರ ಜುಲೈ 4ರಿಂದ ಕಾರ್ಯಾರಂಭ ಮಾಡಿದ ಇಲ್ಲಿನ ಹೈಕೋರ್ಟ್ ಸಂಚಾರಿ ಪೀಠವು ಪೂರ್ಣ ಪೀಠವೆಂದು ಘೋಷಣೆಯಾಗಿದ್ದು, ಶನಿವಾರ ಇದರ ಉದ್ಘಾಟನೆಯಾಗಲಿದೆ.
ಶನಿವಾರ ಬೆಳಿಗ್ಗೆ 11.30ಕ್ಕೆ ಪೀಠದ ಆವರಣದಲ್ಲಿ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಎಚ್.ಎಲ್. ದತ್ತು ಪೂರ್ಣ ಪೀಠವನ್ನು ಉದ್ಘಾಟಿಸುತ್ತಾರೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಅಧ್ಯಕ್ಷತೆ ವಹಿಸುತ್ತಾರೆ. ಅತಿಥಿಗಳಾಗಿ ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ. ಜಯಚಂದ್ರ, ಹೈಕೋರ್ಟ್ ನ್ಯಾಯಮೂರ್ತಿಗಳಾದ ಕೆ.ಎಲ್. ಮಂಜುನಾಥ, ಎನ್.ಕೆ. ಪಾಟೀಲ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ, ಅಡ್ವೋಕೇಟ್ ಜನರಲ್ ರವಿವರ್ಮಕುಮಾರ್, ರಾಜ್ಯ ವಕೀಲರ ಸಂಘದ ಅಧ್ಯಕ್ಷ ಮುನಿಯಪ್ಪ ಹಾಗೂ ಧಾರವಾಡ ಸಂಚಾರಿ ಪೀಠದ ವಕೀಲರ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ ಸಮಾರಂಭದಲ್ಲಿ ಪಾಲ್ಗೊಳ್ಳುವರು.
ಸುಮಾರು ಮೂರು ದಶಕಗಳ ನಿರಂತರ ಹೋರಾಟದ ಹಿನ್ನೆಲೆಯಲ್ಲಿ ಧಾರವಾಡ ಹಾಗೂ ಗುಲ್ಬರ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠಗಳನ್ನು ಆರಂಭಿಸಲಾಗಿದ್ದು, ಉತ್ತರ ಕರ್ನಾಟಕದ ಕಕ್ಷಿದಾರರಿಗೆ, ವಕೀಲ ಸಮುದಾಯಕ್ಕೆ ತುಂಬ ಅನುಕೂಲಕಾರಿಯಾಗಿತ್ತು. ಆದರೆ, ಇವೆರಡು ಬರೀ ಸಂಚಾರಿ ಪೀಠಗಳಾಗಿದ್ದರಿಂದ ನ್ಯಾಯಮೂರ್ತಿಗಳು ಪ್ರತಿ ತಿಂಗಳೂ ಬದಲಾಗುತ್ತಿದ್ದರು. ಈ ಪೀಠಗಳಲ್ಲಿ ದಾಖಲಾಗುವ ಹಾಗೂ ವಿಲೇವಾರಿಯಾಗುವ ಪ್ರಕರಣಗಳು ಜಾಸ್ತಿ ಇರುವ ಹಿನ್ನೆಲೆಯಲ್ಲಿ ಇತ್ತೀಚಿಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪೂರ್ಣ ಪೀಠ ಮಾಡಲು ಒಪ್ಪಿಗೆ ಸಿಕ್ಕಿತ್ತು. ಇದಕ್ಕೆ ರಾಷ್ಟ್ರಪತಿ ಅಂಕಿತವೂ ಬಿದ್ದಿತು.