ಸೈನಿಕ ಮೂರ್ತಿಯ ದಾನಪತ್ರ ಪಡೆಯಲು ಪಾಲಿಕೆ ವಿಳಂಬ
- ಬಸವರಾಜ ಹಿರೇಮಠ
ಕ.ಪ್ರ. ವಾರ್ತೆ ಧಾರವಾಡ ಜು. 26
ಸಾಮಾನ್ಯ ವ್ಯಕ್ತಿಯೊಬ್ಬ ಸೈನಿಕನಿಗೆ ಹೂವು ಕೊಡುವ ಮೂಲಕ ಗೌರವಿಸುವ ಸಂದರ್ಭವನ್ನು ಮೂರ್ತಿ ರೂಪದಲ್ಲಿ ಸ್ಥಾಪಿಸಿ ಅದನ್ನು ಅಧಿಕೃತವಾಗಿ ದಾನವಾಗಿ ಕೊಡಬೇಕೆಂದು ಕಳೆದೈದು ತಿಂಗಳಿಂದ ನಿವೃತ್ತ ಸೇನಾಧಿಕಾರಿಯೊಬ್ಬರು ಪಾಲಿಕೆಗೆ ಅಲೆದಾಡುತ್ತಿದ್ದರೂ ದಾನಪತ್ರ ಸ್ವೀಕರಿಸಲು ಪಾಲಿಕೆ ವಿಳಂಬ ನೀತಿ ತೋರುತ್ತಿದೆ.
ನಿವೃತ್ತ ಲೆಫ್ಟಿನಂಟ್ ಜನರಲ್ ಎಸ್.ಸಿ. ಸರದೇಶಪಾಂಡೆ ದೇಶ ಕಾಯುವ ಸೈನಿಕನಿಗೆ ಗೌರವ ಸಲ್ಲಿಸುವ ಉದ್ದೇಶದಿಂದ, ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ ಬರೆದ ಚಿತ್ರವೊಂದರ ಮಾದರಿಯಂತೆ ಸ್ವತಃ 2.25 ಲಕ್ಷ ಖರ್ಚಿನಲ್ಲಿ ಮೂರ್ತಿಯೊಂದನ್ನು ನಿರ್ಮಿಸಿದ್ದರು. ಇಲ್ಲಿನ ಕಿತ್ತೂರು ಚೆನ್ನಮ್ಮ ಉದ್ಯಾನವನದಲ್ಲಿ ಕಳೆದ ಜನವರಿ 15ರಂದು ಸ್ಥಾಪಿಸಲಾಗಿದೆ. ಕಳೆದ ಮಾರ್ಚ್ನಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬೆನ್ನು ಹತ್ತಿದರೂ ಅಧಿಕೃತವಾಗಿ ದಾನಪತ್ರ ಸ್ವೀಕರಿಸಲು ಪಾಲಿಕೆ ಮುಂದೆ ಬಂದಿಲ್ಲ. ಜಿಲ್ಲಾಡಳಿತದ ನಿಯಮದಂತೆ ಮೂರ್ತಿ ಸ್ಥಾಪನೆಯಂದೇ ಸರದೇಶಪಾಂಡೆ ಅವರು ದಾನಪತ್ರವನ್ನೂ ಸಿದ್ಧಪಡಿಸಿದ್ದಾರೆ. ಒಂದು ಚಿಕ್ಕ ಸಮಾರಂಭ ಮಾಡುವ ಮೂಲಕ ದಾನಪತ್ರವನ್ನು ಅಧಿಕೃತವಾಗಿ ಪಾಲಿಕೆಗೆ ಹಸ್ತಾಂತರಿಸಬೇಕೆಂಬುದು ಸರದೇಶಪಾಂಡೆ ಅವರ ಆಶಯ.
ಪಾರ್ಕ್ನಲ್ಲಿ ಏನೇನಿವೆ?: ಸಾಮಾನ್ಯ ವ್ಯಕ್ತಿಯ ಹಾಗೂ ಸೈನಿಕನ ಮೂರ್ತಿ ಮಾತ್ರ ಅಲ್ಲಿಲ್ಲ. ಜೊತೆಗೆ ಭಾರತೀಯ ರಕ್ಷಣಾ ಪಡೆಗಳಾದ ಭೂ ಸೇನೆ (ಇಜ್ಜತ್ ಔರ್ ಇಕ್ಬಾಲ್), ವಾಯು ಸೇನೆ (ನಭ-ಸ್ಪರ್ಶ ದೀಪ್ತಂ) ಹಾಗೂ ನೌಕಾ ಸೇನೆ (ನಮೋ ಶ ವರಣಾ) ಧ್ಯೇಯ ವಾಕ್ಯಗಳನ್ನು ಕಲ್ಲಿನಲ್ಲಿ ಕೆತ್ತಲಾಗಿದೆ. ಮಾತೆಯ ಮಮತೆಯಾಗಲಿ ಕರಳು ಬಳ್ಳಿಯ ಕರೆಯಾಗಲಿ, ನನ್ನನ್ನು ಕಟ್ಟಿ ಹಾಕಲಿಲ್ಲ. ಖ್ಯಾತಿ, ಸುಯಶ, ಸನ್ಮಾನ ಇವುಗಳ ಮೋಹ ನನಗಿಲ್ಲ. ಮುಂದಿನ ಯುಗದ ಯುದ್ಧದಂದು ಎಂದು ಕಪಿಧ್ವಜ ಹಾರಾಡುವುದೋ, ಅಂದು ನಾನು ಆ ಧ್ವಜ ಶೃಂಗದಿಂದ ಗರ್ಜಿಸುತ್ತೇನೆ. ಆಗ ನನ್ನ ಹಡದವ್ವ ಕೂಡಾ ಗುರುತಿಸಲಾರಳು... ಕವಿ ರಾಮಧಾರಿ ಸಿಂಹ ಅವರು ಸೈನಿಕನ ಕುರಿತಾಗಿ ಬರೆದ ವಾಕ್ಯಗಳನ್ನೂ ಇಲ್ಲಿ ಕೆತ್ತಲಾಗಿದೆ. ಒಬ್ಬ ಸೈನಿಕನ ಕುರಿತಾಗಿ ಮನಪೂರ್ವಕ ಗೌರವ ಬರುವಂತೆ ಈ ಮೂರ್ತಿಯನ್ನು ಉದ್ಯಾನವನದಲ್ಲಿ ನಿಲ್ಲಿಸಲಾಗಿದೆ.
ಬೇಸರ ತಂದಿದೆ: ಕಳೆದ ನಾಲ್ಕು ತಿಂಗಳ ಹಿಂದೆ ಪಾಲಿಕೆ ಆಯುಕ್ತ ವೈ.ಎಸ್. ಪಾಟೀಲ್ ಅವರನ್ನು ಭೇಟಿ ಮಾಡಿ ದಾನಪತ್ರ ಸ್ವೀಕರಿಸಲು ತಿಳಿಸಿದ್ದೇನೆ. ನಂತರ ಡಿಸಿಗೂ ಈ ಕುರಿತಾಗಿ ತಿಳಿಸಿದೆ. ಪಾಲಿಕೆಯ ವಲಯ ಅಧಿಕಾರಿ ಮರಳಿಹಳ್ಳಿ ಅವರಲ್ಲಿಯೂ ಕೇಳಿಕೊಂಡೆ. ಸ್ವಂತ ಖರ್ಚಿನಿಂದಲೇ ಮೂರ್ತಿ ಸ್ಥಾಪಿಸಿ ಉದ್ಯಾನವನದಲ್ಲಿ ಸ್ಥಾಪಿಸಿದರೂ ಪಾಲಿಕೆ ದಾನಪತ್ರ ಪಡೆಯಲು ಇಷ್ಟೊಂದು ವಿಳಂಬ ನೀತಿ ಅನುಸರಿಸುತ್ತಿರುವುದು ನನಗೆ ತೀವ್ರ ಬೇಸರ ತಂದಿದೆ. ಚುನಾವಣೆ, ವರ್ಗಾವಣೆ ನೆಪ ಹೇಳುವ ಅಧಿಕಾರಿಗಳಿಂದ ಬೇಸತ್ತು ಇತ್ತೀಚೆಗೆ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರಿಗೂ ಮನವಿ ಮಾಡಿದ್ದೇನೆ. ಈ ಕೆಲಸಕ್ಕೆ ಇನ್ನೆಷ್ಟು ಪ್ರಯತ್ನ ಮಾಡಬೇಕು ಎಂಬುದು ಗೊತ್ತಿಲ್ಲ ಎಂದು ಪ್ರಶ್ನಿಸುತ್ತಾರೆ ನಿವೃತ್ತ ಲೆ.ಜ. ಸರದೇಶಪಾಂಡೆ.
ಸೈನಿಕನ ಮೂರ್ತಿ ಕುರಿತಾದ ದಾನಪತ್ರ ಪಾಲಿಕೆಗೆ ಹಸ್ತಾಂತರಿಸಬೇಕಿದ್ದು, ಪಾಲಿಕೆ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆಂದು ಎಸ್.ಸಿ. ಸರದೇಶಪಾಂಡೆ ಅವರು ನನ್ನನ್ನು ಭೇಟಿಯಾಗಿದ್ದರು. ಆಗ ದೂರವಾಣಿ ಮೂಲಕ ಪಾಲಿಕೆ ಆಯುಕ್ತ ವೈ.ಎಸ್. ಪಾಟೀಲರಿಗೆ ಸೂಚಿಸಿದ್ದೆ. ಆದರೆ, ಚುನಾವಣೆ ನಿಮಿತ್ತ ತಡವಾಗಿದೆ. ಕೂಡಲೇ ಅವರಿಂದ ದಾನಪತ್ರ ಪಡೆಯಲು ನೂತನ ಆಯುಕ್ತರಿಗೆ ತಿಳಿಸುತ್ತೇನೆ.
-ಸಮೀರ ಶುಕ್ಲ, ಜಿಲ್ಲಾಧಿಕಾರಿಗಳು