ಚೆಂಬೆಳಕಿನ ಕವಿ @85
ತಮ್ಮ ಬಾಲ್ಯದ ಅನುಭವ, ಕಾವ್ಯದ ಪ್ರೇರಣೆಗಳ ಜತೆಗೆ ಸಾಹಿತ್ಯದ ನಂಟಿನ ಕುರಿತು 'ಕನ್ನಡಪ್ರಭ' ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತಾಡಿದ್ದಾರೆ.
ಕ.ಪ್ರ. ವಾರ್ತೆ ಧಾರವಾಡ ಜೂ.27-
'ಚೆಂಬಳಕಿನ ಕವಿ' ಚನ್ನವೀರ ಕಣವಿಯವರಿಗೆ ಜೂ.28ಕ್ಕೆ 85ರ ಹರೆಯ. ಗದಗ ಜಿಲ್ಲೆಯ ಹೊಂಬಳದಲ್ಲಿ 1928ರ ಜೂನ್ 28ರಂದು ಜನಿಸಿರುವ ಅವರು ತಮ್ಮ ಬಾಲ್ಯದ ಅನುಭವ, ಕಾವ್ಯದ ಪ್ರೇರಣೆಗಳ ಜತೆಗೆ ಸಾಹಿತ್ಯದ ನಂಟಿನ ಕುರಿತು 'ಕನ್ನಡಪ್ರಭ' ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತಾಡಿದ್ದಾರೆ.
- ಕ.ಪ್ರ.- ತಮ್ಮ ಬಾಲ್ಯದ ಕುರಿತು ಹೇಳಿ?
ಕಣವಿ: ನಾನು ಹುಟ್ಟಿದ ಊರಿನ ಸುತ್ತಮುತ್ತಲಿನ ವಾತಾವರಣವೇ ಹಾಗಿತ್ತು. ಆಗಿನ ಅನುಭಗಳೇ ಕವಿತೆ ಹುಟ್ಟಲು, ಕಟ್ಟಲು ನನಗೆ ಪ್ರೇರಣೆಗಳಾಗಿವೆ. ನಮ್ಮೂರಲ್ಲಿ ಜಾನಪದ, ತತ್ವ ಪದಗಳ ಹಾಡುಗಾರಿಕೆ, ಅಲ್ಲಿನ ಗ್ರಾಮದೇವತೆ ಜಾತ್ರೆ, ಪಲ್ಲಕ್ಕಿ ಉತ್ಸವ, ಡೊಳ್ಳು, ಮಜಲು ಹಾಗೂ ಅಲ್ಲಿನ ಸಾಂಸ್ಕೃತಿಕ ಪರಿಸರ ನನ್ನನ್ನು ಕವಿಯಾಗಿ ಮಾಡಿದವು. ನಂತರ ಪ್ರಾಥಮಿಕ ಶಿಕ್ಷಣಕ್ಕಾಗಿ ನಮ್ಮೂರು ಹೊಂಬಳದಿಂದ ಧಾರವಾಡ ಜಿಲ್ಲೆಯ ಗರಗದಲ್ಲಿನ ಸಂಬಂಧಿಕರ ಮನೆಗೆ ಬಂದೆ. ಅಲ್ಲಿಂದ ಮುರುಘಾಮಠದಲ್ಲಿದ್ದ ನನ್ನ ಮೇಲೆ ಮೃತ್ಯುಂಜಯ ಅಪ್ಪಗಳ ಸಂಸ್ಕಾರಭರಿತ ನಡೆ, ಅಲ್ಲಿ ನಡೆಯುತ್ತಿದ್ದ ಶಿವಾನುಭವ, ವಚನ ಸಂಗೀತ, ಉಪನ್ಯಾಸಗಳು ಅಗಾಧ ಪರಿಣಾಮ ಬೀರಿದವು. ಮಠದ ಪರಿಸರ ನಮಗೆ ಸಮಯ ನಿಷ್ಠೆ ಮತ್ತು ಸ್ವಾವಲಂಬನೆ ಜೀವನ ಕಲಿಸಿತು. ಧಾರವಾಡಕ್ಕೆ ಬರುವ ಸಾಹಿತಿಗಳು ಮುರುಘಾಮಠ ಮತ್ತು ವಿದ್ಯಾವರ್ಧಕ ಸಂಘಕ್ಕೆ ಭೇಟಿ ನೀಡುತ್ತಿದ್ದರು. ಹೀಗಾಗಿ ಅವರ ಪಾಂಡಿತ್ಯಪೂರ್ಣ ಮಾತುಗಳು ನಮಗೆ ಒಂದು ಪುಸ್ತಕ ಓದಿದ ಅನುಭವ ನೀಡುತ್ತಿದ್ದವು. ಇವು ಸಹಜ ಸಾಹಿತ್ಯದತ್ತ ಒಲವು ಮೂಡಿಸಿದವು. ಆರ್ಎಲ್ಎಸ್ ಪ್ರೌಢಶಾಲೆಯಲ್ಲಿದ್ದಾಗ ಬರವಣಿಗೆ ಆರಂಭಿಸಿದೆ. ಮುಖ್ಯಾಧ್ಯಾಪಕ ವೀರೂ ಕೊಪ್ಪಳ ಮಾರ್ಗದರ್ಶನ ನೀಡಿದರು. ಮಧುರ ಚನ್ನ, ಬೇಂದ್ರೆ, ಕುವೆಂಪು, ಗಳಗನಾಥರ ಸಾಹಿತ್ಯ ಕೃತಿಗಳನ್ನು ಬಾಲ್ಯದಲ್ಲೇ ಓದಿಕೊಂಡಿದ್ದೆ.
- ಕ.ಪ್ರ.- ನಿಮ್ಮ ಮೊದಲ ಕವಿತೆ ಪ್ರಕಟವಾಗಿದ್ದು ಯಾವಾಗ? ಪ್ರಕಟವಾದಾಗಿನ ಅನುಭವ ಹೇಗಿತ್ತು?
ಕಣವಿ- ಪ್ರತಿಯೊಬ್ಬ ಕವಿಯಲ್ಲಿ ಸ್ವತಃ ವಿಮರ್ಶಕ ಇರುತ್ತಾನೆ ಎಂಬುದನ್ನು ಅರಿತಿದ್ದೆ. ಹಾಗಾಗಿ ಪ್ರೌಢಶಾಲೆ ಬರವಣಿಗೆಗಿಂತ ಕಾಲೇಜು ದಿನಗಳ ಬರವಣಿಗೆ ಪ್ರೌಢತೆ ಸಾಧಿಸಿದೆ ಎನಿಸಿತು. ಈ ದಿನಗಳಲ್ಲೇ ಆಗಿನ ಜಯಂತಿ, ಜಯ ಕರ್ನಾಟಕ, ಜೀವನ ಎಂಬ ಸಾಹಿತ್ಯ ಪತ್ರಿಕೆಗಳಲ್ಲಿ ನನ್ನ ಪದ್ಯಗಳು ಪ್ರಕಟವಾದವು. ನವೋದಯ ಹಿರಿಯ ಸಾಹಿತಿಗಳು ಈ ಪತ್ರಿಕೆಗಳಲ್ಲಿ ಪ್ರಕಟವಾಗುವ ನನ್ನ ಕವಿತೆಗಳನ್ನು ಓದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜೂನಿಯರ್ ಬಿಎ ಪದವಿಯಲ್ಲಿದ್ದಾಗಲೇ ಮೊದಲ ಪದ್ಯ 'ಕಾವ್ಯಾಕ್ಷಿ' ಕವನ ಸಂಕಲನ ಪ್ರಕಟವಾಯಿತು. ವಿಶೇಷವೆಂದರೆ, ಮುಖ ಪರಿಚಯವಿಲ್ಲದ, ಆದರೂ ನನ್ನ ಕವಿತೆಗಳನ್ನು ಓದಿ ಮೆಚ್ಚಿಕೊಂಡಿದ್ದ ಬೇಂದ್ರೆಯವರು ಮೌಲಿಕ ಮುನ್ನುಡಿ ಬರೆದಿದ್ದರು. 'ನಿನ್ನ ಪದ್ಯಗಳಲ್ಲಿ ಜೀವಂತಿಕೆ ಇದೆ' ಎಂದು ಶಹಬ್ಬಾಸ್ಗಿರಿ ನೀಡಿದ್ದರು.
ಕ.ಪ್ರ.- ನಿಮ್ಮ ಆರಂಭದ ಸಾಹಿತ್ಯದ ಒಡನಾಟ ಹೇಗಿತ್ತು?
ಕಣವಿ- ಕಾಲೇಜು ದಿನಗಳಲ್ಲಿ ಧಾರವಾಡದ ಮಾಳಮಡ್ಡಿಯಲ್ಲಿ ಬಾಡಿಗೆ ರೂಮಿನಲ್ಲಿದ್ದೆ. ಅಲ್ಲಿ ಸಮಾನಮನಸ್ಕ ಗೆಳೆಯರನ್ನೊಳಗೊಂಡ ಕಾವ್ಯಾನುಭವ ಮಂಟಪವನ್ನು ಕಟ್ಟಿಕೊಂಡು ಅಲ್ಲಿ ಕಾವ್ಯದ ಚರ್ಚೆಗಳನ್ನು ಏರ್ಪಡಿಸುತ್ತಿದ್ದೆವು. 1950ರಲ್ಲಿ ಈ ಮಂಟಪಕ್ಕೆ ವಿ.ಕೃ. ಗೋಕಾಕ, ಬೇಂದ್ರೆಯವರನ್ನು ಆಹ್ವಾನಿಸಿದ್ದೆವು. ಕಿರಿಯರಾದ ನಮ್ಮ ಜತೆ ಅವರು ಸುದೀರ್ಘ ಎರಡು ತಾಸು ಸಾಹಿತ್ಯಿಕ ಚರ್ಚೆ ನಡೆಸಿದ್ದರು. ಅದೇ ವರ್ಷ ಗೋಕಾಕರು ಮುನ್ನುಡಿ ಬರೆದ 'ಭಾವಜೀವಿ' ಕವನ ಸಂಕಲನ ಪ್ರಕಟಗೊಂಡಿತು. ಮುನ್ನುಡಿಯಲ್ಲಿ ಗೋಕಾಕರು ತಾವು ಕಾವ್ಯಾನುಮಂಟಪದಲ್ಲಿ ಕಳೆದ ಕ್ಷಣಗಳನ್ನು ಸ್ಮರಿಸಿದ್ದರು.
ಸ್ವಾತಂತ್ರ್ಯ ಲಭಿಸಿದ ಸಂಭ್ರಮದಲ್ಲಿ ಪ್ರತಿಷ್ಠಿತ ಕರ್ನಾಟಕ ಕಾಲೇಜು ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ನಾನು ಆಗಸ್ಟ್ 15ರ ಕುರಿತು ಓದಿದ ಮೊದಲ ಪದ್ಯ ನನ್ನಲ್ಲಿ ಆತ್ಮ ವಿಶ್ವಾಸ ಬೆಳೆಸಿತು. ಸಾಹಿತ್ಯದ ಅಭಿರುಚಿ ಕಾಪಿಟ್ಟುಕೊಂಡೇ ಪದವಿಯಲ್ಲಿ ಮೊದಲ ರ್ಯಾಂಕ್ ಗಳಿಸಿದೆ. ಕರ್ನಾಟಕ ವಿಶ್ವವಿದ್ಯಾಲಯ ಪ್ರಸಾರಂಗದಲ್ಲಿ ನಿರ್ದೇಶಕನಾಗಿ ಸೇವೆ ಸಲ್ಲಿಸುತ್ತಿದ್ದ ದಿನಗಳಲ್ಲೇ ಡಾ. ಪಾವಟೆಯರ ಒತ್ತಾಸೆ ಮೇರೆಗೆ 'ವಿಶ್ವ ವಿನೂತನ ವಿದ್ಯಾಚೇತನ' ಪದ್ಯವನ್ನು ಎರಡೇ ದಿನದಲ್ಲಿ ಬರೆದೆ. ಅವರು ಘಟಿಕೋತ್ಸವದ ಆರಂಭಕ್ಕೆ ಈ ಕವಿತೆಯನ್ನು ಹಾಡಿಸಲು ಸೂಚಿಸಿದರು. ತದನಂತರ ಈ ಪದ್ಯ ಖ್ಯಾತಿ ಗಳಿಸಿತು. ಇದು ಕೂಡ ನನ್ನ ಕಾವ್ಯೊದ್ಯೋಗಕ್ಕೆ ಹುರುಪು ತಂದಿತು.
- ಕ.ಪ್ರ.- ಕಾವ್ಯ ಕ್ಷೇತ್ರ ನಿಮ್ಮ ಆಸಕ್ತಿ ಕ್ಷೇತ್ರವಾ?
ಕಣವಿ- ಹಾಗೇನಿಲ್ಲ. ನಾನು ಗದ್ಯವನ್ನೂ ಬರೆದಿದ್ದೇನೆ. ಕಾವ್ಯ ನನ್ನ ಆದ್ಯತೆ. ಗದ್ಯ ಕೂಡ ಆಗಾಗ ಬರೆದಿದ್ದೇನೆ. ಪ್ರಬಂಧ, ವಿಮರ್ಶೆ, ವೈಚಾರಿಕ ಲೇಖನಗಳನ್ನು ಸಾಂದರ್ಭಿಕವಾಗಿ ಬರೆದಿದ್ದೇನೆ. ಎರಡು ಗದ್ಯ ಸಂಪುಟಗಳು ಪ್ರಕಟವಾಗಿವೆ. ಸಾಹಿತ್ಯದ ಜತೆಗೆ ಸ್ವಾತಂತ್ರ್ಯ ಚಳವಳಿ ಭಾಗವಾಗಿ ನಡೆಯುತ್ತಿದ್ದ ಪ್ರಭಾತಪೇರಿ, ಗೋಕಾಕ ಚಳವಳಿಯಲ್ಲಿ ಪಾಲ್ಗೊಂಡಿದ್ದೆ. ಎರಡು ವರ್ಷ ಕರ್ನಾಟಕ ವಿವಿಯಲ್ಲಿ ಪಾವಟೆಯವರ ಮನವಿ ಮೇರೆಗೆ ಅತಿಥಿ ಉಪನ್ಯಾಸಕನಾಗಿ ಕಾರ್ಯ ನಿರ್ವಹಿಸಿದ್ದೇನೆ.
1983ರಲ್ಲಿ ಕರ್ನಾಟಕ ವಿವಿಯಿಂದ ನಿವೃತ್ತಿಯಾಗಿದ್ದು, ಈಗ ಬದುಕಿನ ಇಳಿಸಂಜೆಯ ಹೊತ್ತು. ಹಾಗಾಗಿ ಕಾವ್ಯ ಬರೆಯುವ ಉತ್ಸಾಹವಿದ್ದರೂ ಮೊದಲಿನ ಹಾಗೆ ಬರೆಯಲಾಗುತ್ತಿಲ್ಲ. ಆದರೂ ನಮಗೆ ಹಿರಿಯರಿಂದ ದೊರೆತ ಉತ್ತೇಜನವನ್ನು ಹೊಸ ಬರಹಗಾರರಿಗೆ ಮುನ್ನುಡಿ ಬರೆದು ಕೊಡುವ ಮೂಲಕ ನೀಡುತ್ತಿದ್ದೇನೆ.
ನಾನು ಗದ್ಯವನ್ನೂ ಬರೆದಿದ್ದೇನೆ. ಕಾವ್ಯ ನನ್ನ ಆದ್ಯತೆ. ಗದ್ಯ ಕೂಡ ಆಗಾಗ ಬರೆದಿದ್ದೇನೆ. ಪ್ರಬಂಧ, ವಿಮರ್ಶೆ, ವೈಚಾರಿಕ ಲೇಖನಗಳನ್ನು ಸಾಂದರ್ಭಿಕವಾಗಿ ಬರೆದಿದ್ದೇನೆ. ಎರಡು ಗದ್ಯ ಸಂಪುಟಗಳು ಪ್ರಕಟವಾಗಿವೆ. ಸಾಹಿತ್ಯದ ಜತೆಗೆ ಸ್ವಾತಂತ್ರ್ಯ ಚಳವಳಿ ಭಾಗವಾಗಿ ನಡೆಯುತ್ತಿದ್ದ ಪ್ರಭಾತಪೇರಿ, ಗೋಕಾಕ ಚಳವಳಿಯಲ್ಲಿ ಪಾಲ್ಗೊಂಡಿದ್ದೆ.
- ಬಸವರಾಜ ಹಿರೇಮಠ