ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಹಳ್ಳ ಹಿಡಿದ ಉಪ್ಪಿನ ಬೆಟಗೇರಿ ಆರೋಗ್ಯ ಕೇಂದ್ರ

Srinivasa Murthy VN
Updated On : 9 Mar 2013, 11:45 am

ಜಿಲ್ಲೆಯ ಕೆಲವೇ ಕೆಲವು ಉತ್ತಮ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಂದಾಗಿದ್ದ ಉಪ್ಪಿನ ಬೆಟಗೇರಿ ಆರೋಗ್ಯ ಕೇಂದ್ರವೂ ದಿನದಿಂದ ದಿನಕ್ಕೆ ಹಳ್ಳ ಹಿಡಿಯುತ್ತಿದೆ.
ಆಸ್ಪತ್ರೆ ಕಳೆದ ವರ್ಷದಿಂದ ಹಲವಾರು ಮೂಲಸಮಸ್ಯೆಗಳಿಂದ ನರಳುತ್ತಿದ್ದು, ಆರೋಗ್ಯ ಇಲಾಖೆಯ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಹದಿನೇಳು ಗ್ರಾಮಗಳ ಸುಮಾರು 40 ಸಾವಿರಕ್ಕೂ ಅಧಿಕ ಜನರ ಆರೋಗ್ಯ ಕಾಪಾಡಬೇಕಿದ್ದ ಈ ಪ್ರಾಥಮಿಕ ಆರೋಗ್ಯ ಕೇಂದ್ರ ಅನಾರೋಗ್ಯ ಪೀಡಿತವಾಗಿದೆ. ಆಸ್ಪತ್ರೆಯ ಹೆಂಚುಗಳು ಸೋರಿ, ಕೊಳಚೆ ನೀರು ದವಾಖಾನೆಯ ಆವರಣದೊಳಗೆ ಹರಿಯುತ್ತಿದ್ದು ರೋಗಗಳ ಆಶ್ರಯ ತಾಣವಾಗಿದೆ. ಮಳೆಗಾಲದಲ್ಲಂತೂ ರೋಗಿಗಳ ಕೋಣೆಗಳಿಗೂ ನೀರು ನುಗುತ್ತೆ. ಆರೋಗ್ಯ ಕೇಂದ್ರಕ್ಕೆ ಕಾಂಪೌಂಡ್ ಇಲ್ಲದ ಕಾರಣ ಕುಡುಕರು, ಪುಂಡ, ಪೋಕರಿಗಳಿಗೆ ಆಸ್ಪತ್ರೆಯ ಆವರಣ ಮುಕ್ತ ಆಹ್ವಾನ ನೀಡಿದಂತಾಗಿದೆ.
ಅಲ್ಲದೇ ಬಿಡಾಡಿ ದನಗಳ ದೊಡ್ಡಿಯಂತಾಗಿದೆ. ಸಿಬ್ಬಂದಿ ವಸತಿ ಗೃಹಗಳು ಪಾಳು ಬಿದ್ದಿದ್ದು ಕಿಟಕಿ, ಬಾಗಿಲು, ಹೆಂಚುಗಳು ಕಾಣೆಯಾಗಿವೆ. ಮೂಲ ಸೌಕರ್ಯಗಳು, ಶಸ್ತ್ರಚಿಕಿತ್ಸಾ ತಜ್ಞರ ಕೊರತೆಯಿಂದ ಆಪರೇಷನ್ ಥಿಯೇಟರ್ ಅನಾಥವಾಗಿದೆ. ಹೆರಿಗೆ ಕೋಣೆಗೆ ವಿದ್ಯುತ್ ದೀಪಗಳಿಲ್ಲ, ಸ್ಕ್ಯಾನಿಂಗ್ ಸೌಲಭ್ಯವಿಲ್ಲ. ಆಸ್ಪತ್ರೆಯ ದುಸ್ಥಿತಿ ಆರೋಗ್ಯ ಇಲಾಖೆ, ಗ್ರಾಪಂ ಮತ್ತು ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎನ್ನುತ್ತಾರೆ ಹಳ್ಳಿಗಳ ರೋಗಿಗಳು.  ಸದ್ಯ ಒಬ್ಬ ಆಯುಷ್ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದು ಇವರು ರೋಗಿಗಳಿಗೆ ಅಲೋಪಥಿ ಔಷಧಿ ಸೂಚಿಸಲು ಅನುಮತಿಯಿಲ್ಲ. ಆದ್ದರಿಂದ ದೇವರಿಲ್ಲದ ದೇಗುಲ, ವೈದ್ಯರಿಲ್ಲದ ಆಸ್ಪತ್ರೆಗೆ ಹೋದರೇನು ಪ್ರಯೋಜನ ಎಂದು ಅನೇಕರು ನಿರಾಶೆಗೊಂಡಿದ್ದಾರೆ. ಭೀಕರ ಬರಗಾಲದಿಂದ ತತ್ತರಿಸಿರುವ ಜನ ಸಾಲ ಮಾಡಿ ಖಾಸಗಿ ಕ್ಲಿನಿಕ್‌ಗಳಿಗೆ ಹಣ ಸುರಿಯಬೇಕಾಗಿದೆ. ಉಪ್ಪಿನ ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಬ್ಬರು ಎಂ.ಬಿ.ಬಿ.ಎಸ್. ವೈದ್ಯಾಧಿಕಾರಿಗಳ ಅವಶ್ಯಕತೆಯಿದೆ. ಆದರೆ, ಇಲ್ಲಿ ವೈದ್ಯರಿಲ್ಲದೇ ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಈ ಕೇಂದ್ರದ ಆರೋಗ್ಯವನ್ನು ವಿಚಾರಿಸುವ ಗೋಜಿಗೆ ಇಲಾಖೆ ಹೋಗುತ್ತಿಲ್ಲ. ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೂಕ್ತ ರಕ್ಷಣಾ ಗೋಡೆ ನಿರ್ಮಾಣ, ಗೇಟುಗಳನ್ನು ಅಳವಡಿಸುವುದು, ಪಾಳು ಬಿದ್ದಿರುವ ಸಿಬ್ಬಂದಿ ವಸತಿ ಗೃಹಗಳು ಮತ್ತು ಸೆಪ್ಟಿಕ್ ಟ್ಯಾಂಕ್‌ಗಳ ದುರಸ್ತಿ, ಸೋಲಾರ್ ವ್ಯವಸ್ಥೆ ಅಳವಡಿಕೆ, ಆರೋಗ್ಯ ಕೇಂದ್ರಕ್ಕೆ ಅವಶ್ಯವಿರುವ ಕೊಳವೆ ಬಾವಿ ಕೊರೆಸುವುದು, ಮುಖ್ಯ ರಸ್ತೆಯಿಂದ ಆಸ್ಪತ್ರೆಯವರೆಗೂ ಡಾಂಬರೀಕರಣದಂತಹ ಅಭಿವೃದ್ಧಿ ಕೆಲಸಗಳಾಗಬೇಕಿದೆ. ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ನೀಡಿ ಐದು ತಿಂಗಳುಗಳೇ ಕಳೆದರೂ ಏನೂ ಪ್ರಯೋಜವಾಗಿಲ್ಲ ಎಂದು ಸಿಬ್ಬಂದಿ ಬೇಸರ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement