ಬೆಲ್ಲದ, ಹಾಲಹರವಿ ಕ್ಷೇತ್ರದಲ್ಲಿ ಬಿದ್ದ ಬಿಜೆಪಿ
-ಪ್ರಕಾಶ ಎಸ್. ಶೇಟ್
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 12
ಹು-ಧಾ ಪಾಲಿಕೆಯ ಗದ್ದುಗೆ ಗುದ್ದಾಟದಲ್ಲಿ ಬಿಜೆಪಿಗೆ ಜಯವೇನೋ ಸಿಕ್ಕಿದೆ. ಆದರೆ ನಿರೀಕ್ಷಿತ ಫಲಿತಾಂಶ ಬರದಿರಲು ಕಾರಣವೇನು? ಯಾವ ಶಾಸಕರ ಕ್ಷೇತ್ರದಲ್ಲಿ ಬಿಜೆಪಿ ಕಳಪೆ ಪ್ರದರ್ಶನ ಮಾಡಿದೆ ಎಂಬ ಸಂಗತಿಯ ಮೇಲೆ ಕಣ್ಣು ಹಾಯಿಸಿದಾಗ ಶಾಸಕ ಚಂದ್ರಕಾಂತ ಬೆಲ್ಲದ, ಹಾಲಹರವಿ ಕ್ಷೇತ್ರದಲ್ಲಿ ಇಬ್ಬಿಬ್ಬರು ಬಿಜೆಪಿ ಸದಸ್ಯರ ಸಂಖ್ಯೆ ಕುಗ್ಗಿದೆ. ಸೀಮಾ ಮಸೂತಿ ಕ್ಷೇತ್ರದಲ್ಲಿ ಕಳೆದ ಬಾರಿಯಂತೆ ಮೂವರು ಮಾತ್ರ ಗೆದ್ದಿದ್ದರೆ, ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕ್ಷೇತ್ರದಲ್ಲಿ ಕಳೆದ ಬಾರಿಗಿಂತ ಓರ್ವ ಸದಸ್ಯರ ಸಂಖ್ಯೆ ಹೆಚ್ಚಿದೆ. ಅಂದರೆ 12 ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಸುವಲ್ಲಿ ಶೆಟ್ಟರ್ ಸಫಲರಾಗಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಗದ್ದುಗೆ ಗುದ್ದಾಟದಲ್ಲಿ ಬಿಜೆಪಿಗೆ ಜಯವೇನೋ ಸಿಕ್ಕಿದೆ. ಆದರೆ ನಿರೀಕ್ಷಿತ ಫಲಿತಾಂಶ ಬರದಿರಲು ಕಾರಣವೇನು ಎಂಬ ಬಗ್ಗೆ ಕಳೆದು ಕೂಡಿಸುವ ಲೆಕ್ಕಾಚಾರ ಬಿಜೆಪಿಯಲ್ಲಿ ನಡೆದಿದೆ.
ಪಾಲಿಕೆಯ ಒಟ್ಟು 67 ಸ್ಥಾನಗಳ ಪೈಕಿ ಬಿಜೆಪಿ 33ರಲ್ಲಿ ಜಯ ಗಳಿಸಿದೆ. ಆದರೆ, ಲೆಕ್ಕಾಚಾರದ ಪ್ರಕಾರ 40ರಿಂದ 45 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದೇವೆಂದು ಬಿಜೆಪಿ ವಿಶ್ವಾಸ ಹೊಂದಿತ್ತು. ಈ ಹಿಂದಿನ ಯಾವುದೇ ಅವಧಿಯಲ್ಲಾಗದಂತಹ ಅಭಿವೃದ್ಧಿ ಕಾರ್ಯಗಳು ಬಿಜೆಪಿ ಅಧಿಕಾರಾವಧಿಯಲ್ಲಿ ಆಗಿವೆ. ಇದೇ ಅಭಿವೃದ್ಧಿಯ ಮಂತ್ರ ಗೆಲುವಿಗೆ ಪೂರಕವಾಗಲಿದೆ ಎಂಬ ಲೆಕ್ಕಾಚಾರ ಬಿಜೆಪಿಯದ್ದಾಗಿತ್ತು. ಸಾಲದ್ದಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಲ್ವರು ಬಿಜೆಪಿ ಶಾಸಕರಿರುವುದರಿಂದ ಸಹಜವಾಗಿ ಇಲ್ಲಿ ತಮ್ಮದೇ ಪ್ರಾಬಲ್ಯವಿದೆ ಎಂದು ಬಿಜೆಪಿ ಎಣಿಸಿತ್ತು. ಇವೆಲ್ಲದರ ಜತೆಗೆ ನಿರ್ಗಮಿತ ಬಿಜೆಪಿ ಸದಸ್ಯರ ಸಂಖ್ಯೆಯೇ (ಜೆಡಿಯುನಿಂದ ಬಂದವರು ಸೇರಿ) 36 ಇರುವಾಗ ಇದಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ತಮಗೆ ಗೆಲುವು ಸಿಗಲಿದೆ ಎನ್ನುವ ಆತ್ಮ ವಿಶ್ವಾಸ ಬಿಜೆಪಿಗಿತ್ತು. ಆದರೆ, ಫಲಿತಾಂಶ ಬಿಜೆಪಿ ಲೆಕ್ಕಾಚಾರ ತಲೆ ಕೆಳಗಾಗಿದೆ. ಪಾಲಿಕೆಯಲ್ಲಿ ಅಧಿಕಾರಕ್ಕೆ ಬರಲು ಸ್ಪಷ್ಟ ಬಹುಮತ ಸಿಗದಾಗಿ 33 ಸ್ಥಾನಗಳಿಗೆ ಬಿಜೆಪಿ ತೃಪ್ತಿ ಪಡಬೇಕಾಗಿದೆ. ಮುಖ್ಯಮಂತ್ರಿಗಳ ತವರು ಕ್ಷೇತ್ರವಾಗಿದ್ದುಕೊಂಡು ಸ್ಪಷ್ಟ ಬಹುಮತ ಸಿಗದಾಗಿ ಬಿಜೆಪಿಗೆ ಇರಿಸುಮುರುಸಾಗಿದೆ. ಸಾಲದ್ದಕ್ಕೆ ಇದಕ್ಕೆ ಕಾರಣವೂ ಹುಡುಕಲಾಗುತ್ತಿದೆ.
ಈ ನಡುವೆ ಯಾವ ಯಾವ ಶಾಸಕರ ಕ್ಷೇತ್ರದಲ್ಲಿ ಬಿಜೆಪಿ ಕಳಪೆ ಪ್ರದರ್ಶನ ಮಾಡಿದೆ, ಹೀಗಾಗಲು ಕಾರಣವೇನು ಎಂಬ ಸಂಗತಿಯ ಮೇಲೆ ಕಣ್ಣು ಹಾಯಿಸಿದಾಗ ಕಂಡದ್ದು ಇದು.
ಬೆಲ್ಲದ ದ್ವಂದ್ವ ನೀತಿ: ಶಾಸಕ ಚಂದ್ರಕಾಂತ ಬೆಲ್ಲದ ಪ್ರತಿನಿಧಿಸುತ್ತಿರುವುದು ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಒಟ್ಟು 20 ವಾರ್ಡ್ಗಳಲ್ಲಿ ಬಿಜೆಪಿಯ 12 ( ಓರ್ವ ಜೆಡಿಯು) ಸದಸ್ಯರಿದ್ದರು. ಆದರೆ, ಪ್ರಸಕ್ತ ಚುನಾವಣಾ ಫಲಿತಾಂಶದ ಪ್ರಕಾರ ಬೆಲ್ಲದ ಪ್ರತಿನಿಧಿಸುತ್ತಿರುವ ವಾರ್ಡ್ನಲ್ಲಿ ಇಬ್ಬರು ಬಿಜೆಪಿ ಸದಸ್ಯರ ಸಂಖ್ಯೆ ಕುಸಿದು 10ಕ್ಕೆ ಇಳಿದಿದೆ. ಸಾಲದ್ದಕ್ಕೆ ಬೆಲ್ಲದ ಇರುವ ವಾರ್ಡ್ನಲ್ಲಿಯೇ ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರಕಾಶ ಗೋಡಬೋಲೆ ಸೋತಿದ್ದಾರೆ. ಇದು ಬೆಲ್ಲದ ಪಾಲಿಗಷ್ಟೇ ಅಲ್ಲ ಬಿಜೆಪಿಗೂ ಮುಖಭಂಗವೇ ಸರಿ. ಇನ್ನು ಬೆಲ್ಲದ ಆಪ್ತರಾದ ಭಾರತಿ ಪಾಟೀಲ, ಶಾಂತಪ್ಪ ದೇವಕ್ಕಿ ಸೋತು ಸುಣ್ಣವಾಗಿದ್ದಾರೆ.
ಈ ಸೋಲಿಗೆ ಹಾಗೂ ಬಿಜೆಪಿ ಸಂಖ್ಯಾ ಬಲ ತಗ್ಗಲು ಕಾರಣ ಹುಡುಕ ಹೋದರೆ ಗೊತ್ತಾಗಿದ್ದು ಬೆಲ್ಲದ ಅವರ ದ್ವಂದ್ವ ನೀತಿ. 'ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ' ಎನ್ನುವ ಮಾತಿನಂತೆ ಬೆಲ್ಲದ ಕೆಜೆಪಿ-ಬಿಜೆಪಿಯ ಮಧ್ಯೆ ಓಡಾಡಿಕೊಂಡಿದ್ದೆ ಫಲಿತಾಂಶ ಕೈಕೊಡಲು ಕಾರಣ. ಬೆಲ್ಲದ ಒಂದೇ ಪಕ್ಷದಲ್ಲಿ ಇದ್ದಿದ್ದರೆ ಮತದಾರರೂ ಸ್ಪಷ್ಟವಾಗಿ ಮತದಾನ ಮಾಡುತ್ತಿದ್ದರು ಎಂದು ಬಿಜೆಪಿ ಕಾರ್ಯಕರ್ತರು ದೂರುತ್ತಿದ್ದಾರೆ.
ಹಾಲಹರವಿಗೆ 'ಹಾರ್': ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಶಾಸಕ ವೀರಭದ್ರಪ್ಪ ಹಾಲಹರವಿ ಅವರಿಗೆ ಸೇರಿದ ವ್ಯಾಪ್ತಿಯಲ್ಲಿ 20 ವಾರ್ಡ್ಗಳು ಬರುತ್ತವೆ. ಈ ಪೈಕಿ ಕಳೆದ ಬಾರಿ 10 ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದರು. ಆದರೆ ಈ ಬಾರಿ ಎರಡು ಸ್ಥಾನಗಳನ್ನು ಕಳೆದುಕೊಳ್ಳುವ ಮೂಲಕ ಬಿಜೆಪಿ ಬಲ 8ಕ್ಕೆ ಇಳಿದಿದೆ.
ಸಂಘಟನೆಯ ಕೊರತೆ ಬಿಜೆಪಿಯನ್ನು ಬಹುವಾಗಿ ಕಾಡಿದೆ. ಸಾಲದ್ದಕ್ಕೆ ಕಾಂಗ್ರೆಸ್-ಜೆಡಿಎಸ್ ಪ್ರಬಲ ಪೈಪೋಟಿ ಶಾಸಕ ಹಾಲಹರವಿಯವರಿಗೆ ಹಿನ್ನಡೆ ತಂದೊಡ್ಡಿದೆ. ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಶಾಸಕರ ಸಹೋದರ ಮಾರುತಿ ಸೋಲು. ಸಹೋದರನನ್ನೇ ಶಾಸಕ ಹಾಲಹರವಿ ಗೆಲ್ಲಿಸಲಾಗದಿರುವುದು ಮುಖಭಂಗವೇ ಸರಿ.
ಸೀಮಾ ಸಮಾಧಾನ: ಈ ಎರಡೂ ಕ್ಷೇತ್ರಗಳ ಪೈಕಿ ಸೀಮಾ ಮಸೂತಿ ಪ್ರತಿನಿಧಿಸುತ್ತಿರುವ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಸ್ವಲ್ಪ ತೃಪ್ತಿ ಪಟ್ಟುಕೊಳ್ಳುವಂತಾಗಿದೆ. ಈ ಕ್ಷೇತ್ರದ ವ್ಯಾಪ್ತಿಗೆ 8 ವಾರ್ಡ್ಗಳು ಬರುತ್ತವೆ. ಕಳೆದ ಬಾರಿ ಈ ಕ್ಷೇತ್ರದಿಂದ 3 ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದರು. ಈ ಬಾರಿಯೂ 3 ಮಾತ್ರ ಆಯ್ಕೆಯಾಗಿದ್ದಾರೆ. ಹೆಚ್ಚಿನ ಸ್ಥಾನದಲ್ಲಿ ತಮ್ಮವರನ್ನು ಗೆಲ್ಲಿಸುವಲ್ಲಿ ಸೀಮಾ ಮಸೂತಿ ವಿಫಲರಾಗಿದ್ದರೂ ಇದ್ದವರನ್ನೂ ಕಳೆದುಕೊಳ್ಳುವ ಕೊರಗು ಅವರಿಗಿಲ್ಲ.
ಶೆಟ್ಟರ್ ಗೆದ್ದರು: ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಪ್ರತಿನಿಧಿಸುತ್ತಿರುವ ಕ್ಷೇತ್ರ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್. ಈ ಕ್ಷೇತ್ರದಲ್ಲಿರುವ ಒಟ್ಟು ವಾರ್ಡ್ಗಳ ಸಂಖ್ಯೆ 19. ಈ ಪೈಕಿ ಕಳೆದ ಬಾರಿ ಬಿಜೆಪಿ ಸದಸ್ಯರ ಸಂಖ್ಯೆ 11 ಇತ್ತು. ಈ ಬಾರಿ ಓರ್ವ ಬಿಜೆಪಿ ಅಭ್ಯರ್ಥಿಯ ಸಂಖ್ಯೆ ಹೆಚ್ಚಾಗಿ 12 ಆಗಿದೆ. ತನ್ಮೂಲಕ ಎಲ್ಲರಿಗಿಂತ ಜಗದೀಶ ಶೆಟ್ಟರ್ ಸಾಧನೆ ಕೊಂಚ ಖುಷಿ ಕೊಟ್ಟಿದೆ. ಆದಾಗ್ಯೂ ಮುಖ್ಯಮಂತ್ರಿ ತವರು ಕ್ಷೇತ್ರದಲ್ಲಿ ಅಂದುಕೊಂಡಷ್ಟರ ಮಟ್ಟಿಗೆ ಬಿಜೆಪಿ ಸಾಧನೆ ಮಾಡಿಲ್ಲ ಎಂಬುದು ನಿಜ. ಈ ಕುರಿತು ಪಕ್ಷದ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ. ಇದೇ ಸ್ಥಿತಿ ಮುಂದುವರಿದರೆ ಮುಂಬರುವ ವಿಧಾನಸಭೆ ಕಥೆ ಏನು ಎಂಬ ಚಿಂತೆ ಬಿಜೆಪಿಗರನ್ನು ಕಾಡಿದೆ.