ಮುನೇನಕೊಪ್ಪಗೆ ತೀವ್ರ ಹಿನ್ನಡೆ...
ನವಲಗುಂದ ಮತ್ತು ಅಣ್ಣಿಗೇರಿ ಪುರಸಭೆಯ ಚುನಾವಣಾ ಫಲಿತಾಂಶ ಸೂಕ್ಷ್ಮವಾಗಿ ಗಮನಿಸಿದರೆ ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ಮಂದಿನ ವಿಧಾನಸಭಾ ಚುನಾವಣೆಗೆ ಇದು ಎಚ್ಚರಿಕೆ ಗಂಟೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಈ ಎರಡು ಪುರಸಭೆಗಳಲ್ಲಿ ಸಾಕಷ್ಟು ಕೆಲಸಗಳಾದರೂ ಸಹ ಬಿಜೆಪಿ ಮುಗ್ಗರಿಸಿದ್ದು, ಶಾಸಕರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಈ ಎರಡು ಪುರಸಭೆಯ 46 ಸದಸ್ಯ ಸ್ಥಾನಗಳ ಪೈಕಿ ಬಿಜೆಪಿ ಬರೀ 11 ಸ್ಥಾನಗಳಲ್ಲಿ ಮಾತ್ರ ಗೆಲವು ಸಾಧಿಸಿದ್ದು ಬಿಜೆಪಿಗೆ ತೀರಾ ಮುಖಭಂಗವಾಗಿದೆ. ಇನ್ನು, ಜೆಡಿಎಸ್ನ ಸಾಧನೆ ಹೆಚ್ಚೇನು ಹೇಳಿಕೊಳ್ಳುವಂತಿಲ್ಲ. ಆದರೆ, ಕಾಂಗ್ರೆಸ್ಗೆ ಮಾತ್ರ ಈ ಎರಡು ಪುರಸಭೆಗಳ ಫಲಿತಾಂಶ, ಬಯಸದೇ ಬಂದ ಭಾಗ್ಯ.
ಬಲ ತೋರದ ಕೆಜೆಪಿ: ಕುಂದಗೋಳ ಪಟ್ಟಣ ಪಂಚಾಯ್ತಿಯು ಶಾಸಕ ಎಸ್.ಐ. ಚಿಕ್ಕನಗೌಡ್ರ ಕೈಯಲ್ಲಿದ್ದರೂ ಸಹ ತಮ್ಮ ಬಲಾಬಲ ತೋರಲಾಗಲಿಲ್ಲ. ಕೆಜೆಪಿಯಿಂದ ಬರೀ ಎರಡು ಸ್ಥಾನಗಳು ಬಂದರೂ ಚಿಕ್ಕನಗೌಡ್ರು ಬಿಜೆಪಿಯು ಹೆಚ್ಚಿನ ಸ್ಥಾನಗಳನ್ನು ಪಡೆಯುವಲ್ಲಿ ಅಡ್ಡಗಾಲು ಹಾಕಿದ್ದು ಮಾತ್ರ ನಿಜ. ಈ ಪಟ್ಟಣ ಪಂಚಾಯ್ತಿಯಲ್ಲೂ ಕಾಂಗ್ರೆಸ್ ಕೈ ಚಳಕ ತೋರಿದ್ದು, ಕೆಜೆಪಿ ಮುಖಂಡ ಚಿಕ್ಕನಗೌಡ್ರ ಮುಂದಿನ ಎಂಎಲ್ಎ ಚುನಾವಣೆಗೆ ಸಾಕಷ್ಟು ಕಸರತ್ತು ಮಾಡುವ ಅಗತ್ಯವಿದೆ.
ಮಣ್ಣು ಮುಕ್ಕಿದ ಬಿಜೆಪಿ: ಶಾಸಕ ಸಂತೋಷ ಲಾಡ್ ಅವರ ಕ್ಷೇತ್ರ ಕಲಘಟಗಿ ಹಾಗೂ ಅಳ್ನಾವರದಲ್ಲಿ ಬಿಜೆಪಿ ಮಣ್ಣು ಮುಕ್ಕಿದೆ. ಒಟ್ಟು 28 ಸ್ಥಾನಗಳಲ್ಲಿ ಎರಡು ಸ್ಥಾನಗಳಲ್ಲಿ ಮಾತ್ರ ಗುದ್ದಾಡಿ ಗೆದ್ದಿದ್ದು, ಲಾಡ್ ಸಾಹೇಬ್ರು ಎರಡು ಕಡೆ ಕೈ ಚಳಕ ತೋರಿದ್ದಾರೆ. ಬಿಜೆಪಿ ಈ ಹಿಂದಿನಿಂದಲೂ ಈ ಎರಡು ಕ್ಷೇತ್ರಗಳಲ್ಲಿ ತೀರಾ ದುರ್ಬಲವಾಗಿದ್ದು, ಈ ಚುನಾವಣೆ ಫಲಿತಾಂಶ ನೋಡಿದರೆ ಇನ್ನೂ ದುರ್ಬಲವಾಗಿದೆ ಎನ್ನುವಂತಿದೆ. ಒಟ್ಟಿನಲ್ಲಿ ಜಿಲ್ಲೆಯ ಎರಡು ಪುರಸಭೆ ಹಾಗೂ ಮೂರು ಪಟ್ಟಣ ಪಂಚಾಯ್ತಿಗಳಲ್ಲಿ ಬಿಜೆಪಿ ಕಳಪೆ ಸಾಧನೆ ತೋರಿದ್ದು, ಜೆಡಿಎಸ್ ಸಮಾಧಾನ ಹಾಗೂ ಕಾಂಗ್ರೆಸ್ ಭರ್ಜರಿ ಬ್ಯಾಟಿಂಗ್ ಮಾಡಿದೆ.