ಲೆಕ್ಕಕ್ಕೇ ಇಲ್ಲ ಅಭ್ಯರ್ಥಿಗಳ ಅಕ್ರಮ ಖರ್ಚು
ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 3
ರಾಜ್ಯ ಚುನಾವಣೆ ಆಯೋಗದ ನಿರ್ದೇಶನದಂತೆ ವಿಧಾನಸಭಾ ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳು ತೆರೆದ ಹೊಸ ಬ್ಯಾಂಕ್ ಅಕೌಂಟ್ ಮೇಲ್ನೋಟಕ್ಕೆ ಅಕ್ರಮ ಚಟುವಟಿಕೆಗೆ ತಡೆವೊಡ್ಡಿದೆ. ಆದರೆ, ಅಭ್ಯರ್ಥಿಗಳಿಗೆ ಮಾತ್ರ ಇದು ಆಟಕುಂಟು ಲೆಕ್ಕಕ್ಕಿಲ್ಲ.
ವಿಧಾನಸಭಾ ಚುನಾವಣೆ ಪ್ರಚಾರ ಮತ್ತು ಇನ್ನಿತರೆ ಖರ್ಚುನ್ನು ಪ್ರತಿ ಅಭ್ಯರ್ಥಿ ರು. 16 ಲಕ್ಷ ಮೀರಬಾರದೆಂಬ ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಆದೇಶಿಸಿದೆ. ಆದರೆ, ರು. 16 ಲಕ್ಷದಲ್ಲಿ ಅಭ್ಯಥಿಗೆ ಖರ್ಚು ನಿರ್ವಹಣೆ ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಕಷ್ಟಸಾಧ್ಯ. ಅಲ್ಲದೇ, ಸಾಕಷ್ಟು ಅಭ್ಯರ್ಥಿಗಳು ಲೆಕ್ಕದಲ್ಲಿ ಮಾತ್ರ ರು. 16 ಲಕ್ಷದೊಳಗೆ ಖರ್ಚು ತೋರಿಸಿ, ಅನಿವಾರ್ಯವಾಗಿ ಕೋಟಿಗಟ್ಟಲೇ ಹಣ ವ್ಯಯಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಆಯೋಗದ ನಿರ್ದೇಶನ ಪರಿಪಾಲನೆ ಎಲ್ಲ ಅಭ್ಯರ್ಥಿಗಳ ಕರ್ತವ್ಯ. ಹೀಗಾಗಿ ಎಲ್ಲ ಅಭ್ಯರ್ಥಿಗಳು ಆಯೋಗಕ್ಕೆ ಚಾಚೂ ತಪ್ಪದೇ ಲೆಕ್ಕ ನೀಡುತ್ತಿದ್ದಾರೆ. ಹಾಗಂತ ಅಭ್ಯರ್ಥಿಗಳು ತಾವು ಮಾಡಿದ ಎಲ್ಲ ವೆಚ್ಚದ ಲೆಕ್ಕಪತ್ರ ಆಯೋಗಕ್ಕೆ ಒಪ್ಪಿಸುತ್ತಿಲ್ಲ. ಮತದಾರರನ್ನು ಓಲೈಸಲು ಎಷ್ಟು ಬೇಕಾದರೂ ಖರ್ಚು ಮಾಡಲು ಸಿದ್ಧರಾಗಿದ್ದಾರೆ. ಆಯೋಗದ ಸಾಕಷ್ಟು ಭದ್ರತೆ ಮಧ್ಯೆ ಹಣ-ಹೆಂಡ ಹಂಚಿಕೆ ಸಾಗಿದೆ ಎನ್ನಲಾಗುತ್ತಿದ್ದು, ಇದರ ಲೆಕ್ಕಾಚಾರವನ್ನು ಅಭ್ಯರ್ಥಿಗಳು ಚುನಾವಣೆ ವಿಕ್ಷಕರಿಗೆ ಒಪ್ಪಿಸುತ್ತಿದ್ದಾರೇ? ಆಯೋಗ ಇದನ್ನು ಅಭ್ಯರ್ಥಿಗಳ ಖಾತೆ ಲೆಕ್ಕಕ್ಕೆ ಹಚ್ಚಿಕೊಂಡಿದೆಯಾ ಎಂಬ ಪ್ರಶ್ನೆಗಳು ಜನಸಾಮಾನ್ಯರಲ್ಲಿ ಮೂಡಿವೆ.
ಆಪ್ತರಿಂದ ಹಣ...
ಗೆಲ್ಲ ಬಯಸಿದ ಅಭ್ಯರ್ಥಿಗಳು ಮಾತ್ರ ಚುನಾವಣೆಯಲ್ಲಿ ಕೋಟಿಗಟ್ಟಲೇ ಹಣ ಖರ್ಚು ಮಾಡುತ್ತಿದ್ದಾರೆ. ಚುನಾವಣಾ ಆಯೋಗ ಅಭ್ಯರ್ಥಿಗಳ ಹೊಸ ಬ್ಯಾಂಕ್ ಅಕೌಂಟ್ ಕಡೆ ಮಾತ್ರ ಗಮನ ಹರಿಸುತ್ತಿದೆ. ಅಭ್ಯರ್ಥಿಗಳು ಆಪ್ತರ ಬಳಿ ಚುನಾವಣೆಗೆ ಸಾಕಷ್ಟು ಹಣ ತರಿಸಿಕೊಳ್ಳುತ್ತಿದ್ದಾರೆ. ಇತ್ತ ಆಯೋಗ ರಾಜ್ಯದಲ್ಲಿನ ಪ್ರಮುಖ ರಸ್ತೆಗಳಲ್ಲಿ ಎಲ್ಲ ವಾಹನಗಳನ್ನು ಜಪ್ತಿ ಮಾಡಲು ಪೊಲೀಸ್ ಹಾಗೂ ಅರೆಸೇನಾ ಪಡೆಯನ್ನು ನಿಯೋಜಿಸಿದೆ. ಇವರು ಕೆಲಕಡೆಗಳಲ್ಲಿ ಅಕ್ರಮವಾಗಿ ಸಾಗುತ್ತಿದ್ದ ಹಣ ಹಿಡಿಯುವಲ್ಲಿ ಯಶಸ್ವಿಯಾದರೆ, ಇನ್ನು ಅಭ್ಯರ್ಥಿಗಳ ಹಾಗೂ ಹಣ ಸಾಗಿಸುವವರ ಬುದ್ಧಿವಂತಿಕೆಯಿಂದ ಹಣ ಸೇಫ್ ಆಗಿ ಚುನಾವಣೆಗೆ ಖರ್ಚಾಗುತ್ತಿದೆ.
ಬಹಿರಂಗ ಪ್ರಚಾರಕ್ಕೆ ಒಂದು ದಿನ ಬಾಕಿ ಉಳಿದಿದೆ. ಅಭ್ಯರ್ಥಿಗಳು ಮತದಾರರ ಓಲೈಕೆಗೆ ಶತಾಯ-ಗತಾಯ ಪ್ರಯತ್ನ ನಡೆಸಿದ್ದಾರೆ. ಮತದಾರರನ್ನು ಓಲಿಸಿಕೊಳ್ಳುಲು ಹತ್ತಾರು ಅಕ್ರಮ ರಣತಂತ್ರ ರೂಪಿಸುತ್ತಿದ್ದಾರೆ. ಹೇಗಾದರೂ ಮಾಡಿ ಗೆಲ್ಲಲೇಬೇಕು ಎಂಬ ಹಠ ತೊಟ್ಟಿರುವ ಅಭ್ಯರ್ಥಿಗಳು ಕೊನೆ ಕ್ಷಣದಲ್ಲೂ ಕೋಟಿಗಟ್ಟಲೇ ಹಣ ಖರ್ಚು ಮಾಡಲು ತುದಿಗಾಲಿನ ಮೇಲಿದ್ದಾರೆ. ಆಯೋಗದ ಲೆಕ್ಕಕ್ಕೆ ಮಾತ್ರ ಇದು ಸೇರ್ಪಡೆಯಾಗುತ್ತಿಲ್ಲ ಎನ್ನುವುದು ಹೊಸದೇನಲ್ಲ.
ರಣತಂತ್ರ...
ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವುದಷ್ಟೇ ತಡ ಅಭ್ಯರ್ಥಿಗಳು, ಬೆಂಬಲಿಗರು ರಾತ್ರಿವಿಡೀ ಗಸ್ತು ಹೊಡೆಯುವ ಯೋಜನೆ ಹಾಕಿಕೊಂಡಿದ್ದಾರೆ. ಅಲ್ಲದೇ, ಒಂದೇ ರಾತ್ರಿಯಲ್ಲಿ ಇಡೀ ಮತದಾರರ ದಿಕ್ಕನ್ನೆ ಬದಲಿಸುವ ರಣತಂತ್ರ ರೂಪಿಸುತ್ತಿದ್ದಾರೆ. ಆಯೋಗ ಎಲ್ಲ ರೀತಿಯ ನಿಯಮಗಳನ್ನು ಹಾಕಿದ್ದರೂ ಸಹ ಅಭ್ಯರ್ಥಿಗಳು ಯಾವುದಕ್ಕೂ ಕಣ್ಣು ತೆರೆಯುತ್ತಿಲ್ಲ. ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತಿದ್ದಂತೆ ಮತದಾರರ ಓಲೈಸಿಕೊಳ್ಳಲು ಅಭ್ಯರ್ಥಿಗಳು ರಾತ್ರಿವಿಡೀ ಆಮಿಷಗಳನ್ನೊಡ್ಡುವ ಆತುರದಲ್ಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಇನ್ನು, ಸಿಬ್ಬಂದಿ ಕೊರತೆಯಿಂದ ಗ್ರಾಮೀಣ ಪ್ರದೇಶಗಳತ್ತ ಚುನಾವಣೆ ಆಯೋಗ ಅಷ್ಟೊಂದು ಗಂಭೀರವಾಗಿ ಕಾರ್ಯಾಚರಣೆ ನಡೆಸುತ್ತಿಲ್ಲ. ಹೀಗಾಗಿ ಸಾಕಷ್ಟು ಅಭ್ಯರ್ಥಿಗಳು ಗ್ರಾಮೀಣ ಪ್ರದೇಶದಲ್ಲಿ ತಮ್ಮ ಅಕ್ರಮದ ಪರಾಕ್ರಮ ತೋರಿಸುತ್ತಿದಂತೂ ಸುಳ್ಳಲ್ಲ.
-ಕಲ್ಮೇಶ ಪಟ್ಟಣದವರ