ಸೇಲ್ಸ್ ಗರ್ಲ್ ಮೇಲೆ ಅತ್ಯಾಚಾರ: ಇಬ್ಬರ ಬಂಧನ
ಕ.ಪ್ರ. ವಾರ್ತೆ ಹುಬ್ಬಳ್ಳಿ ಮೇ 26
ಆರ್ಯುವೇದ ಔಷಧಿ ಉತ್ಪನ್ನಗಳನ್ನು ಹಳ್ಳಿಹಳ್ಳಿಗೆ ತೆರಳಿ ಮಾರುತ್ತಿದ್ದ ಸೇಲ್ಸ್ ಗರ್ಲ್ ಮೇಲೆ ಮೂವರು ಅತ್ಯಾಚಾರ ನಡೆಸಿದ ಘಟನೆ ಕಲಘಟಗಿ ತಾಲೂಕಿನ ಜೋಡಳ್ಳಿಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
28 ವರ್ಷದ ಬೀದರ್ ಜಿಲ್ಲೆಯ ಬಸವಕಲ್ಯಾಣದ ಅಂಜುಶ್ರೀ (ಹೆಸರು ಬದಲಾಯಿಸಲಾಗಿದೆ) ಎಂಬಾಕೆ ಅತ್ಯಾಚಾರಕ್ಕೊಳಗಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸೂರಜ್ ವಿಲಾಸ ಗಾಯಕವಾಡ ಹಾಗೂ ಅಜಯ್ ಹಿರೇಮಠ ಎಂಬಿಬ್ಬರನ್ನು ಬಂಧಿಸಿದ್ದಾರೆ.
ಇದೇ ಪ್ರಕರಣದ ಪ್ರಮುಖ ಆರೋಪಿ ದೇವರಲಿಂಗನಕೊಪ್ಪದ ಕೋಳಿಫಾರಂ ಮಾಲೀಕ ಉಮೇಶ ಬಸಪ್ಪ ಕೋಟಿ ಎಂಬುವ ತಲೆಮರೆಸಿಕೊಂಡಿದ್ದು ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಅತ್ಯಾಚಾರಕ್ಕೊಳಗಾದ ಯುವತಿಯನ್ನು ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ ಪೊಲೀಸರು ಸುರಕ್ಷಿತವಾಗಿ ಆಕೆಯನ್ನು ಮನೆಗೆ ತಲುಪಿಸಿದ್ದಾರೆ.
ಘಟನೆ ಹಿನ್ನೆಲೆ: ಆರ್ಯುವೇದ ಔಷಧಿ ಉತ್ಪನ್ನಗಳ ಮಾರಾಟ ಕಂಪನಿಯಲ್ಲಿ ಸೂಪ್ರವೈಸರ್ ಆಗಿದ್ದ ಅಂಜುಶ್ರೀ, ಕೆಲವು ವರ್ಷಗಳಿಂದ ಅದೇ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದ ಬಂಧಿತ ಆರೋಪಿ ಸೂರಜ್ ಗಾಯಕವಾಡನೊಂದಿಗೆ ವಾಸವಾಗಿದ್ದಳು ಎನ್ನಲಾಗಿದೆ.
ಹಳ್ಳಿಯ ಮನೆ-ಮನೆಗೆ ತೆರಳಿ ತಮ್ಮ ಕಂಪನಿ ಉತ್ಪನ್ನಗಳನ್ನು ಪ್ರಚಾರಪಡಿಸಿ ಮಾರುತ್ತಿದ್ದ ಅಂಜುಶ್ರೀಯನ್ನು ಜೋಡಳ್ಳಿಯವನೇ ಆದ ಬಂಧಿತ ಅಜಯ ಹಿರೇಮಠ, ಔಷಧಿ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವವರಿದ್ದಾರೆ ಎಂದು ಆಕೆಯನ್ನು ನಂಬಿಸಿ ಉಮೇಶನ ಬಳಿ ಕರೆದ್ಯೊಯ್ದಿದ್ದ.
ಬಂಧಿತರು ಹಾಗೂ ಉಮೇಶ ಕೂಡಿಕೊಂಡು ಯುವತಿಯನ್ನು ಧುಮ್ಮವಾಡ-ಜೋಡಳ್ಳಿ ಮಧ್ಯೆ ಇರುವ ಎಂಡಿಆರ್ ಕಾನ್ವೆಂಟ್ ಶಾಲೆ ಆವರಣಕ್ಕೆ ಕರೆದೊಯ್ದು ಮೂವರು ಕೂಡಿಕೊಂಡು ಅತ್ಯಾಚಾರವೆಸಗಿದ್ದಾರೆ ಎಂದು ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಅಂಜುಶ್ರೀ ತಿಳಿಸಿದ್ದಾರೆ.
ದೂರು ದಾಖಲಿಸಿಕೊಂಡು ಕಾರ್ಯ ತತ್ಪರರಾದ ಕಲಘಟಗಿ ಠಾಣೆ ಇನ್ಸ್ಪೆಕ್ಟರ್ ಕೆ.ಡಿ. ಪುಟ್ಟಯ್ಯ, ಪಿಎಸ್ಐ ಶಿವಾನಂದ ಗಾಣಿಗೇರ, ಎಎಸ್ಐ ಸಿ.ವಿ. ವಡ್ಡರ ಅವರ ತಂಡ, ಅಂಜುಶ್ರೀಯೊಂದಿಗೆ ಕೆಲಸ ನಿರ್ವಹಿಸುತ್ತಿದ್ದ ಸಹದ್ಯೋಗಿ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
ಘಟನಾ ಸ್ಥಳಕ್ಕೆ ಡಿಎಸ್ಪಿ ರಾಜೀವ ಬನಹಟ್ಟಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಘಟನೆಯ ಮತ್ತೊಬ್ಬ ಪ್ರಮುಖ ಆರೋಪಿ ಉಮೇಶ ಕೋಟಿ ಎಂಬುವ ತಲೆಮರೆಸಿಕೊಂಡಿದ್ದು ಆತನ ಬಂಧನಕ್ಕೆ ಜಾಲ ಬೀಸಲಾಗಿದೆ.
-ರಾಜೀವ ಬನಹಟ್ಟಿ, ಡಿಎಸ್ಪಿ