ಸುವರ್ಣ ವಿಧಾನಸೌಧಕ್ಕೆ ಲಕ್ಷ ರೈತರ ಮುತ್ತಿಗೆ: ರೈತ ನಾಯಕ ಕೋಡಿಹಳ್ಳಿ
ಹುಬ್ಬಳ್ಳಿ: ನ.25ರಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನಕ್ಕೆ 1 ಲಕ್ಷ ರೈತರು ಮುತ್ತಿಗೆ ಹಾಕಿ, ಕಳಸಾ-ಬಂಡೂರಿ ಯೋಜನೆ ಕುರಿತು ಸರ್ಕಾರದ ಸ್ಪಷ್ಟ ನಿಲುವಿಗೆ ಆಗ್ರಹಿಸಿ ಪ್ರತಿಭಟಿಸಲಿದ್ದಾರೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.
ಚಳಿಗಾಲ ಅಧಿವೇಶನ ನಡೆಸುವುದಕ್ಕೆ ಸರ್ಕಾರ ಯಾವುದೇ ದಿನಾಂಕ ನಿಗದಿಪಡಿಸಿದರೂ ಅಂದು ರೈತರ ಪ್ರತಿಭಟನೆ ಶತಸ್ಸಿದ್ಧ. ಒಂದು ವೇಳೆ ಸರ್ಕಾರ ಅಧಿವೇಶನಕ್ಕೆ ಮುನ್ನ ಪ್ರತಿಭಟನೆ ಬೇಡ ಎಂದು ಮಾತುಕತೆಗೆ ಮುಂದಾದರೂ ಅದಕ್ಕೂ ನಾವು ಸಿದ್ಧ. ಆದರೆ, ಮಾತುಕತೆಯಲ್ಲಿ ಸರ್ಕಾರ ಭವಿಷ್ಯದಲ್ಲಿ ಯೋಜನೆ ಕುರಿತು ತೆಗೆದುಕೊಳ್ಳಬೇಕಿರುವ ಕ್ರಮಗಳ ಕುರಿತು ಸ್ಪಷ್ಟ ಭರವಸೆ ನೀಡಬೇಕು ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಅ.14ರಂದು ನಾಲ್ಕು ಜಿಲ್ಲೆಗಳ 9 ತಾಲೂಕು ಕೇಂದ್ರಗಳಲ್ಲಿ ಕಳಸಾ ಯೋಜನೆ ಜಾರಿಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಬಂದ್ನಲ್ಲಿ ಪಾಲ್ಗೊಂಡಿದ್ದ ಜನಪರ ಸಂಘಟನೆಗಳು ಮತ್ತು ರೈತರು ಮುತ್ತಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರ ಜೊತೆಗೆ ಹುಬ್ಬಳ್ಳಿ-ಧಾರವಾಡ ನಾಗರಿಕರು ಮತ್ತು ಇಲ್ಲಿನ ಸಂಘಟನೆಗಳು ಪಾಲ್ಗೊಳ್ಳಲಿವೆ' ಎಂದು ತಿಳಿಸಿದರು.
ಚಳಿಗಾಲ ಅಧಿವೇಶನದ ಮೊದಲನೇ ದಿನ ಬೆಳಗಾವಿಯ ಕಿತ್ತೂರು ಚನ್ನಮ್ಮ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದ್ದು, ನಂತರ ಸುವರ್ಣ ವಿಧಾನಸೌಧದ ಎದುರು ರೈತರ ಸಮಾವೇಶ ನಡೆಯಲಿದೆ.
ಸುವರ್ಣಸೌಧ ಚಲೋ ಪ್ರತಿಭಟನೆಗೆ ಈಗಾಗಲೇ ಸಿದ್ಧತೆ ಆರಂಭವಾಗಿದ್ದು, ಗೋಕಾಕ ಸೇರಿದಂತೆ ಮತ್ತಿತರ ತಾಲೂಕುಗಳಲ್ಲಿ ರೈತರ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ, ಸಂಯೋಜಕ ವಿಕಾಸ ಸೊಪ್ಪಿನ, ಕರವೇ ಅಧ್ಯಕ್ಷ ಅಮೃತ ಇಜಾರಿ ಮತ್ತಿತರರು ಇದ್ದರು.