ಪ್ರತ್ಯೇಕ ಪ್ರಕರಣ: ರು. 4.76 ಲಕ್ಷದ ವಸ್ತು ವಶ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 28
ಕಳ್ಳತನದ ಎರಡು ಪ್ರತ್ಯೇಕ ಪ್ರಕರಣಗಳನ್ನು ಭೇದಿಸಿರುವ ಮಹಾನಗರ ಪೊಲೀಸರು ಸುಮಾರು ರು. 4.76 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ. ಅಲ್ಲದೆ, ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಹಾನಗರ ಪೊಲೀಸ್ ಆಯುಕ್ತ ಬಿ.ಎ. ಪದ್ಮನಯನ ವಿವರ ನೀಡಿದರು.
ಅನಾಮಧೇಯ ವ್ಯಕ್ತಿಗಳು ಎಲ್ಸಿಡಿ ಟಿವಿ ಖರೀದಿಸುವುದಾಗಿ ಹೇಳಿ ಮೋಸದಿಂದ ಟಿವಿ ಎಗರಿಸಿ ಹಣ ಕೊಡದೇ ನಾಪತ್ತೆಯಾಗಿದ್ದರ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಟಿವಿ ಕೊಡಲು ಹೋಗಿದ್ದ ವಾಹನ ಚಾಲಕ ನೀಡಿದ ಮಾಹಿತಿ ಮೇರೆಗೆ ಅನಾಮಧೇಯ ವ್ಯಕ್ತಿಗಳ ಮುಖ ಚಹರೆಯ ಸ್ಕೆಚ್ ತಯಾರಿಸಿ ಅವರನ್ನು ಬಂಧಿಸಲಾಯಿತು ಎಂದು ಪದ್ಮನಯನ ತಿಳಿಸಿದರು.
ಹುಬ್ಬಳ್ಳಿ ಸ್ಟೇಶನ್ ರಸ್ತೆಯಲ್ಲಿರುವ ಯತೀಂದ್ರ ಟೆಲಿ ಮೊಬೈಲ್ಸ್ ಅಂಗಡಿಯ ಮಾಲೀಕ ದಿಲೀಪ ಮೋಹನಲಾಲಜಿ ಎಂಬುವವರಿಗೆ ರಾಖೇಶ ಕೊಠಾರಿಯಾ (ಆಶೀಸ್ ಜೈನ್ ಅಸಲಿ ಹೆಸರು) ಎಂಬ ವ್ಯಕ್ತಿ ಫೋನ್ ಮಾಡಿ ತಾವು ಬಾಗಲಕೋಟೆಯಿಂದ ಮಾತನಾಡುತ್ತಿದ್ದು, ಇಲ್ಲಿನ ಮಹಾವೀರ ಜ್ಯುವೆಲರ್ಸ್ನ ಗ್ರಾಹಕರಿಗೆ ಗಿಫ್ಟ್ ಕೊಡಲು 28 ಎಲ್ಇಡಿ ಟಿವಿ ಬೇಕಾಗಿದೆ. ಕೂಡಲೇ ಹುಬ್ಬಳ್ಳಿಯ ವಾಳ್ವೇಕರ ಗಲ್ಲಿಯ ಜಯಲಕ್ಷ್ಮಿ ಟ್ರಾನ್ಸ್ಪೋರ್ಟ್ ಹತ್ತಿರ ರಮೇಶ ಎಂಬ ವ್ಯಕ್ತಿಗೆ 25 ಟಿವಿ ಹಾಗೂ ರಮೇಶ ಭವನದ ಬಳಿ ನಿಂತಿರುವ ವ್ಯಕ್ತಿಗೆ 3 ಟಿವಿ ಕೊಡಬೇಕು. ರಮೇಶ ಭವನದ ಬಳಿ ಇರುವ ವ್ಯಕ್ತಿ 28 ಟಿವಿಯ ಹಣ ನೀಡುತ್ತಾನೆಂದು ನಂಬಿಸಿದ್ದಾನೆ.
ಟಿವಿ ಅಂಗಡಿಯ ಮಾಲೀಕ ದಿಲೀಪ ಹಿಂದೆ ಮುಂದೆ ಯೋಚಿಸದೆ ತಮ್ಮ ಕೆಲಸಗಾರರಿಗೆ ವಾಳ್ವೇಕರ ಗಲ್ಲಿಯ ಜಯಲಕ್ಷ್ಮಿ ಟ್ರಾನ್ಸ್ಪೋರ್ಟ್ ಹತ್ತಿರವಿರುವ ರಮೇಶ ಎಂಬ ವ್ಯಕ್ತಿಗೆ 25 ಟಿವಿ ಕೊಡಲು ತಿಳಿಸಿದ್ದಾರೆ. ಕೆಲಸಗಾರರು ರಮೇಶ (ಡ್ಯಾನೇಶ ಮುರಡಿ ಅಸಲಿ ಹೆಸರು) ಎಂಬ ವ್ಯಕ್ತಿಗೆ ಟಿವಿ ಕೊಟ್ಟು, ಮುಂದೆ ರಮೇಶ ಭವನದ ಎದುರು ನಿಂತಿರುವ ವ್ಯಕ್ತಿಗೆ 3 ಟಿವಿ ತಲುಪಿಸಲು ಹೋಗಿದ್ದಾರೆ. ಆದರೆ ರಮೇಶ ಭವನದ ಎದುರು ಯಾರೂ ಇಲ್ಲದಿರುವುದನ್ನು ಕಂಡ ಕೆಲಸಗಾರರು ರಮೇಶ ಹಾಗೂ ರಾಖೇಶ ಎಂಬಿಬ್ಬರ ಮೊಬೈಲ್ಗೆ ಕರೆ ಮಾಡಿದ್ದಾರೆ. ಆದರೆ, ಆ ಮೊಬೈಲ್ ಸ್ವಿಚ್ಆಫ್ ಆಗಿತ್ತು. ಆಗ ತಾವು ಮೋಸ ಹೋಗಿದ್ದಾಗಿ ದಿಲೀಪಗೆ ತಿಳಿದಿದೆ.
ತದ ನಂತರ ದಿಲೀಪ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಸಿಪಿಐ ಶ್ಯಾಂರಾಜ ಸಜ್ಜನ್ ತನಿಖೆ ಕೈಗೊಂಡಿದ್ದಾರೆ. ಟಿವಿ ಕೊಡಲು ಹೋಗಿದ್ದ ವಾಹನ ಚಾಲಕನಿಂದ, ಮೊದಲು 25 ಟಿವಿ ಪಡೆದ ರಮೇಶ ಎಂಬ ವ್ಯಕ್ತಿ ಚಹರೆಯ ಸ್ಕೆಚ್ ಸಿದ್ಧಪಡಿಸಿದ್ದಾರೆ. ಇದರಿಂದ ಆರೋಪಿತರ ಬಂಧನದ ಹಾದಿ ಸುಗಮವಾಗಿದೆ.
ಬಂಧಿತ ಆರೋಪಿ ಡ್ಯಾನೇಶ (32) ಹುಬ್ಬಳ್ಳಿಯ ನಿವಾಸಿಯಾಗಿದ್ದು, ಆಶೀಸ್ ಜೈನ್ (27) ಗದಗ ಮೂಲದವನು. ಬಂಧಿತರು ಟಿವಿಯನ್ನು ತೇರದಾಳದ ಸಂಜು ಅಥಣಿ ಎಂಬುವವರಿಗೆ ರು. 2.70 ಲಕ್ಷಕ್ಕೆ ಮಾರಾಟ ಮಾಡಿದ್ದರು. 25 ಟಿವಿಗಳನ್ನೂ ವಶ ಪಡಿಸಿಕೊಳ್ಳಲಾಗಿದೆ.
ಪ್ರಕರಣ ಭೇದಿಸುವಲ್ಲಿ ಸಿಬ್ಬಂದಿ ದೇವೇಂದ್ರ ಭಜಂತ್ರಿ, ಶಿವರಾಜ, ಕೃಷ್ಣಾ ಕಟ್ಟಿಮನಿ, ಪಟ್ಟಣಶೆಟ್ಟಿ, ಸುನೀಲ್ ಪಾಂಡೆ, ತುಂಬಿನವರ ಪ್ರಮುಖ ಪಾತ್ರ ವಹಿಸಿದ್ದಾಗಿ ಪದ್ಮನಯನ ತಿಳಿಸಿದರು.
ಕಳ್ಳರ ಬಂಧನ: ಮತ್ತೊಂದು ಪ್ರಕರಣದಲ್ಲಿ ಮೂವರು ಬಾಲಾಪರಾಧಿಗಳ ಸಹಿತ ನಾಲ್ವರನ್ನು ಹಳೇ ಹುಬ್ಬಳ್ಳಿ ಪೊಲೀಸರು ಬಂಧಿಸಿ, ಚಿನ್ನಾಭರಣ, ಮೊಬೈಲ್ ವಶ ಪಡಿಸಿಕೊಂಡಿದ್ದಾರೆ. ಹಳೇ ಹುಬ್ಬಳ್ಳಿ ಶ್ರೀನಿವಾಸ ನಗರದ ಪ್ರಶಾಂತ ಹುಬ್ಬಳ್ಳಿ ಅವರ ಮನೆಯಲ್ಲಿನ ರು. 1.80 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಅರವಿಂದ ನಗರದ ಪ್ರೇಮಾನಂದ ಕಾಮತ ಎಂಬುವವರ ಮನೆಯಲ್ಲಿನ ರು. 21 ಸಾವಿರ ಮೌಲ್ಯದ ಮೊಬೈಲ್ ಹಾಗೂ ಟ್ಯಾಬ್ ಕಳ್ಳತನವಾಗಿದ್ದರ ಬಗ್ಗೆ ಹಳೇ ಹುಬ್ಬಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದ್ದವು. ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಸಿಪಿಐ ಶಿವಾನಂದ ಚಲವಾದಿ ಆರೋಪಿತರನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಆರೋಪಿತರು ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದರು. ಮಹಿಳೆಯರು ಅಂಗಳದಲ್ಲಿ ರಂಗೋಲಿ ಹಾಕಿ ಒಳ ಹೋಗುತ್ತಿದ್ದಂತೆಯೇ ಮನೆಗೆ ನುಗ್ಗಿ ಕೈಗೆ ಸಿಕ್ಕ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದರು. ಈ ಪೈಕಿ ಹಳೇ ಹುಬ್ಬಳ್ಳಿ ಸಿಕ್ಕಲಿಗಾರ ತಾಂಡಾದ ಕಿಶನ್ ನವನೀತ (20) ಕಳ್ಳತನಕ್ಕೆ ಮಾಸ್ಟರ್ ಮೈಂಡ್ ಆಗಿದ್ದ.
ಈತ 8-10 ವರ್ಷದ 3 ಹುಡುಗರನ್ನಿಟ್ಟುಕೊಂಡು ಕಳ್ಳತನ ಮಾಡಿಸುತ್ತಿದ್ದ. ಹಣ ಕದಿಯುವುದಕ್ಕೆ ಪನ್, ಮೊಬೈಲ್ ಕದಿಯಲು ಕಿರಿಕ್, ಪಿಕ್ಪಾಕೆಟ್ ಮಾಡಲು ಶೇಂಗಾ ಎನ್ನುವ ಕೋಡ್ ವರ್ಡ್ನ್ನು ಬಳಸುತ್ತಿದ್ದರು. ಪೊಲೀಸರು ನಾಲ್ವರನ್ನು ವಶಕ್ಕೆ ತೆಗೆದುಕೊಂಡಿದ್ದು ಮೂವರು ಬಾಲಾಪರಾಧಿಗಳನ್ನು ರಿಮ್ಯಾಂಡ್ ಹೋಮ್ಗೆ ಕಳುಹಿಸಿದ್ದಾಗಿ ಪದ್ಮನಯನ ತಿಳಿಸಿದರು.
ಡಿಸಿಪಿಗಳಾದ ಸುಭಾಷ ಗುಡಿಮನಿ, ಶ್ರೀನಾಥ ಜೋಶಿ, ಎಸಿಪಿ ಎನ್.ಡಿ. ಬಿರ್ಜೆ, ಸಿಪಿಐ ಶ್ಯಾಂರಾಜ್ ಸಜ್ಜನ, ಶಿವಾನಂದ ಚಲವಾದಿ ಗೋಷ್ಠಿಯಲ್ಲಿದ್ದರು.