ಬಾಂಬ್ ಸ್ಫೋಟ: ಇಂದು ಧರಣಿ
ಕಲಘಟಗಿ: ಬಿಹಾರ ರಾಜ್ಯದ ಪಟನಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಖಂಡಿಸಿ ತಾಲೂಕು ಬಿಜೆಪಿ ಯುವ ಮೋರ್ಚಾ, ಯುವಮೋರ್ಚಾ ಘಟಕವು ಅಕ್ಟೋಬರ್ 29ರಂದು ಮಧ್ಯಾಹ್ನ 12 ಗಂಟೆಗೆ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಂದು ಈ ಪ್ರತಿಭಟನೆ ಮೆರವಣಿಗೆಯು ತಹಸೀಲ್ದಾರ್ ಕಚೇರಿವರೆಗೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅಶೋಕ ಕಶಿಬಡಿಗೆರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಧಾರವಾಡ: ಪತಂಜಲಿ ಯೋಗ ಶಿಬಿರ ಸಮಾರೋಪ ಇಂದು
ಧಾರವಾಡ: ಇಲ್ಲಿನ ಲಕ್ಷ್ಮೀನಗರದ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಪತಂಜಲಿ ಯೋಗ ಶಿಬಿರದ ಸಮಾರೋಪ ಅ. 29ರ ಬೆಳಗ್ಗೆ 7ಕ್ಕೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಪಿ.ಎಚ್. ನೀರಲಕೇರಿ, ಡಾ. ಎಚ್.ಡಿ. ದೇಸಾಯಿ, ಡಾ. ಜಯಶ್ರೀ ಪಾಟೀಲ ಡಾ. ಚಾರುಲತಾ ಮೆಳವಣಕಿ ಭಾಗವಹಿಸುತ್ತಾರೆ. ಅಶೋಕ ಅವಲಕ್ಕಿ ಅಧ್ಯಕ್ಷತೆ ವಹಿಸುವರು ಎಂದು ಹಿತರಕ್ಷಕ ಸಂಘದ ಬಿ.ಎಸ್. ತಾಳಿಕೋಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಘಟಗಿ ಬಂಜಾರಾ ಸಮಾವೇಶಕ್ಕೆ ಸರ್ಕಾರದ ನೆರವಿನ ಚೆಕ್ ವಿತರಣೆ
ಧಾರವಾಡ: ಕಲಘಟಗಿ ತಾಲೂಕಿನ ಸೇವಾಲಾಲ (ಲಂಬಾಣಿ) ಬಂಜಾರಾ ಸಮಾಜದ ಸಮಾವೇಶ ಸಂಘಟನೆಗಾಗಿ ಸರ್ಕಾರದಿಂದ ಒಂದು ಲಕ್ಷ ರು. ನೆರವು ಮಂಜೂರಾಗಿದ್ದು, ಸಂಸದ ಪ್ರಹ್ಲಾದ ಜೋಶಿ ಸೋಮವಾರ ಸಮಾಜದ ಅಧ್ಯಕ್ಷ ಅರ್ಜುನ ಲಮಾಣಿ ಅವರಿಗೆ ನೆರವಿನ ಚೆಕ್ ಹಸ್ತಾಂತರಿಸಿದರು. ಜಿಲ್ಲಾಧಿಕಾರಿ ಸಮೀರ ಶುಕ್ಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಡಿ. ಹಿರೇಗೌಡರ ಇದ್ದರು.
ಚಿಕಿತ್ಸೆಗೆ ರಿಯಾಯಿತಿ ದರ
ಹುಬ್ಬಳ್ಳಿ: ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಹುಬ್ಬಳ್ಳಿಯ ಉಣಕಲ್ ಕ್ರಾಸ್ನಲ್ಲಿರುವ ದಿವ್ಯಜ್ಯೋತಿ ಕಣ್ಣಿನ ಆಸ್ಪತ್ರೆ ವತಿಯಿಂದ ವಿಶೇಷ ರಿಯಾಯಿತಿ ನೀಡಲಾಗುವುದು ಎಂದು ಡಾ. ಶ್ರೀಧರ ಅಮೀನ್ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಲೆನ್ಸ್, ಕನ್ನಡಕ ಸೇರಿದಂತೆ ಇನ್ನಿತರ ಉಪಕರಣಗಳ ಮೇಲೆ ರಿಯಾಯಿತಿ ಘೋಷಿಸಲಾಗಿದ್ದು, ಈ ರಿಯಾಯಿತಿ ಕೊಡುಗೆ ನವೆಂಬರ್ ಒಂದರಿಂದ 10ರ ವರೆಗೆ ಚಾಲ್ತಿಯಲ್ಲಿರುತ್ತದೆ ಎಂದಿದ್ದಾರೆ.
ಜೀವ ಬೆದರಿಕೆ: ದೂರು
ಹುಬ್ಬಳ್ಳಿ: ಖೊಟ್ಟಿ ದಾಖಲೆ ಸೃಷ್ಟಿಸಿ ಫೈನಾನ್ಸ್ ಕಂಪನಿಯಿಂದ ಸಾಲ ಪಡೆದ ವ್ಯಕ್ತಿಗಳಿಬ್ಬರು ಫೈನಾನ್ಸ್ ಕಂಪನಿ ಮಾಲೀಕರಿಗೆ ಜೀವ ಬೆದರಿಕೆ ಹಾಕಿದ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನರಗುಂದ ಪಟ್ಟಣದ ತಿಪ್ಪಣ್ಣ ರಾಜಮನಿ ಮತ್ತು ಪರಶುರಾಮ ಹಿರೇಮನಿ ಎಂಬ ಇಬ್ಬರು ವ್ಯಕ್ತಿಗಳು ಟ್ರ್ಯಾಕ್ಟರ್ಗೆ ಸಂಬಂಧಿಸಿದ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಪ್ರವೀಣ ಶೆಟ್ಟಿ ಎನ್ನುವವರು ಫೈನಾನ್ಸ್ ಕಂಪನಿಯಿಂದ ರು. 1.50 ಲಕ್ಷ ಸಾಲ ಪಡೆದಿದ್ದರು. ಸಾಲ ಮರುಪಾವತಿ ಮಾಡುವಂತೆ ತಿಪ್ಪಣ್ಣ ಮತ್ತು ಪರಶುರಾಮ ಅವರನ್ನು ಕೇಳಿದ್ದಕ್ಕೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರವೀಣ ಶೆಟ್ಟಿ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾರು ಡಿಕ್ಕಿ: ಸವಾರ ಸಾವು
ಶಿಗ್ಗಾಂವಿ: ಪಟ್ಟಣದ ಹೊರವಲಯದಲ್ಲಿರುವ ಅರಳಿ ಪೆಟ್ರೋಲ್ ಬಂಕ್ ಹತ್ತಿರ ಭಾನುವಾರ ರಾತ್ರಿ ಸಂಭವಿಸಿದ ಬೈಕ್ ಅಪಘಾತದಲ್ಲಿ, ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹುಬ್ಬಳ್ಳಿಯ ಗಿರಣಿ ಚಾಳ್ ನಿವಾಸಿ ಕೃಷ್ಣಪ್ಪ ಯಲ್ಲಪ್ಪ ಪೂಜಾರ (28 ) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಈತ ಬಂಕ್ಗೆ ಹೋಗಿ ಪೆಟ್ರೋಲ್ ಹಾಕಿಸಿಕೊಂಡು ಬರುವಾಗ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಈ ಕಾರು ಹುಬ್ಬಳ್ಳಿಯಿಂದ ಬೆಂಗಳೂರಿನತ್ತ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ಶಿಗ್ಗಾಂವಿ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ, ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದ್ದಾರೆ.
ಬಸ್- ಬೈಕ್ ಡಿಕ್ಕಿ: ಸಾವು
ಕಲಘಟಗಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹಾಗೂ ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಸವಾರನೊಬ್ಬ ಮೃತಪಟ್ಟಿರುವ ಘಟನೆ ಇಲ್ಲಿನ ಧಾರವಾಡ-ಕಲಘಟಗಿ ರಸ್ತೆಯ ಜೋಡಳ್ಳಿ ಕ್ರಾಸ್ ಬಳಿ ಭಾನುವಾರ ತಡರಾತ್ರಿ ನಡೆದಿದೆ. ನರಗುಂದ ತಾಲೂಕಿನ ಸಿದ್ದಾಪುರ ಗ್ರಾಮದ ಚನಬಸಪ್ಪ ಮಲ್ಲೇಶಪ್ಪ ಸಾತಣ್ಣವರ(24) ಎಂಬಾತನೇ ಅಪಘಾತದಲ್ಲಿ ಸಾವನ್ನಪ್ಪಿದ ನತದೃಷ್ಟ ಬೈಕ್ ಸವಾರ. ತಾಲೂಕಿನ ಗಂಗಾಪುರದಿಂದ ಧಾರವಾಡಕ್ಕೆ ಹೊರಟಿದ್ದ ಬಸ್ ೆಹಾಗೂ ಧಾರವಾಡದಿಂದ ಜೋಡಳ್ಳಿಗೆ ಬರುತ್ತಿದ್ದ ಹಿರೋ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತ ವೇಳೆ ಗಾಯಗೊಂಡಿದ್ದ ಬೈಕ್ ಸವಾರ ಚನಬಸಪ್ಪನನ್ನು ಎಸ್ಡಿಎಂ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಕಲಘಟಗಿ ಇನ್ಸ್ಪೆಕ್ಟರ್ ಮಂಜುನಾಥ ನಡುವಿನಮನಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.