ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸ್ಲಂಗಳ ಅಭಿವೃದ್ಧಿಗೆ ಅನುದಾನ ಮೀಸಲಿಡಿ: ಪ್ರತಿಭಟನೆ

Srinivasa Murthy VN
Updated On : 29 Oct 2013, 11:08 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ, 28
ರಾಜೀವ್ ಆವಾಸ್ ಯೋಜನೆಯಡಿ ಸ್ಥಳೀಯ ಸಂಸ್ಥೆಗಳ ಬಜೆಟ್ನಲ್ಲಿ ಶೇ. 25ರಷ್ಟು ಮೊತ್ತವನ್ನು ಸ್ಲಂಗಳ ಅಭಿವೃದ್ಧಿಗೆ ಮೀಸಲಿಡಬೇಕು ಎಂದು ಆಗ್ರಹಿಸಿ ಸೋಮವಾರ ಸಾವಿತ್ರಿ ಬಾಪುಲೆ ಮಹಿಳಾ ಜಾಗೃತಿ ಸಂಘಟನೆ ಸದಸ್ಯರು ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಸ್ಲಂ ನಿವಾಸಿಗಳ ಜನಸಂಖ್ಯೆಗೆ ಅನುಗುಣವಾಗಿ ರಾಜ್ಯದಲ್ಲಿ ನಗರ ಭೂಮಿ ಹಂಚಿಕೆ ನೀತಿಯನ್ನು ಸರ್ಕಾರ ಜಾರಿಗೆ ತರಬೇಕು. ಗುಡಿಸಲು ಮತ್ತು ಸ್ಲಂ ಮುಕ್ತ ರಾಜ್ಯ ನಿರ್ಮಾಣಕ್ಕೆ ಸರ್ಕಾರ ಸಂಕಲ್ಪ ಮಾಡಿದೆ. ಈ ನಿಟ್ಟಿನಲ್ಲಿ ಸಮರ್ಪಕ ವಸತಿ ನೀತಿ ಜಾರಿಗೊಳಿಸಿ ಸರ್ಕಾರದ ಮುಖಾಂತರ ಮನೆಗಳ ನಿರ್ಮಾಣ ನಡೆಯಬೇಕು ಎಂದು ಆಗ್ರಹಿಸಿದರು. ಅಘೋಷಿತ ಸ್ಲಂಗಳನ್ನು ತಕ್ಷಣ ಘೋಷಿತ ಕೊಳಚೆ ಪ್ರದೇಶಗಳು ಎಂದು ಘೋಷಿಸುವಂತೆ ಜಿಲ್ಲಾಧಿಕಾರಿಗೆ ಸರ್ಕಾರ ಸೂಚಿಸಬೇಕೆಂಬುದ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗೆ ಸಲ್ಲಿಸಿರುವ ಮನವಿಯಲ್ಲಿ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಮಹಿಳಾ ಜಾಗೃತಿ ಸಂಘಟನೆಯ ಶೋಭಾ ಕಮತರ, ಗೀತಾ ಕಟಗಿ ಸೇರಿದಂತೆ ಹಲವಾರು ಮಹಿಳಾ ಸದಸ್ಯರು ಇದ್ದರು.

ಸೂಕ್ತ ಪರಿಹಾರ ಒದಗಿಸಲು ಆಗ್ರಹಿಸಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 28
ವೈದ್ಯರ ಮತ್ತು ರಕ್ತ ಭಂಡಾರದ ನಿರ್ಲಕ್ಷ್ಯದಿಂದ ಏಡ್ಸ್ ಕಾಯಿಲೆ ತಗುಲಿಸಿಕೊಂಡ ಆಟೋ ರಿಕ್ಷಾ ಚಾಲಕನ ಸಹೋದರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಹುಬ್ಬಳ್ಳಿ ಆಟೋ ರಿಕ್ಷಾ ಮಾಲೀಕರ ಹಾಗೂ ಚಾಲಕರ ಸಂಘದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಕಿಮ್ಸ್ ವೈದ್ಯರ ಮತ್ತು ರಾಷ್ಟ್ರೋತ್ಥಾನ ರಕ್ತ ಭಂಡಾರದ ನಿರ್ಲಕ್ಷ್ಯದಿಂದಾಗಿ ಆಟೋ ಚಾಲಕನ ಸಹೋದರಿಗೆ ಏಡ್ಸ್ ಕಾಯಿಲೆ ಬಂದಿದ್ದು, ಈ ಕುರಿತು ಸೂಕ್ತ ತನಿಖೆ ನಡೆಸಿ ವೈದ್ಯರು ಮತ್ತು ರಾಷ್ಟ್ರೋತ್ಥಾನ ರಕ್ತ ಭಂಡಾರದ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡಿಲ್ಲ. ವೈದ್ಯರ ನಿರ್ಲಕ್ಷ್ಯದ ಪರಿಣಾಮ ಭಯಂಕರ ಕಾಯಿಲೆಗೆ ತುತ್ತಾಗಿರುವ ಗಾಯತ್ರಿಗೆ ಸರ್ಕಾರ ಪರಿಹಾರ ಕೂಡ ನೀಡಿಲ್ಲ. ಪರಿಹಾರ ನೀಡುವಂತೆ ಧಾರವಾಡ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಹೊನಕೇರಿ ಅವರಿಗೆ ಮನವಿ ಸಲ್ಲಿಸಿದ್ದರೂ ಕ್ರಮ ತೆಗೆದುಕೊಳ್ಳದೆ ರಾಷ್ಟ್ರೋತ್ಥಾನ ರಕ್ತಭಂಡಾರದೊಂದಿಗೆ ಸೇರಿ ಪ್ರಕರಣ ಮುಚ್ಚಿ ಹಾಕುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಆಟೋ ರಿಕ್ಷಾ ಮಾಲೀಕರ ಮತ್ತು ಚಾಲಕರ ಸಂಘದ ಗೌರವಾಧ್ಯಕ್ಷ ಮುಷ್ತಾಕ್ ಕರಜರಿ, ಅಧ್ಯಕ್ಷ ಶೇಖರಯ್ಯ ಮಠಪತಿ, ಪ್ರಧಾನ ಕಾರ್ಯದರ್ಶಿ ಪುಂಡಲೀಕ ಬಡಿಗೇರ, ಚಿದಾನಂದ ಸವದತ್ತಿ, ಇಮ್ತಿಯಾಜ್ ಜಮಾದಾರ, ಬಸವರಾಜ ಉಣಕಲ್ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement