ಕ್ಷೀರಭಾಗ್ಯ ಹಾಲು ಕುಡಿದು ಮಕ್ಕಳು ಅಸ್ವಸ್ಥ
ಕ.ಪ್ರ.ವಾರ್ತೆ ಹುಬ್ಬಳ್ಳಿ ಸೆ. 16
ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ಸೋಮವಾರ ಕ್ಷೀರಭಾಗ್ಯ ಯೋಜನೆಯಡಿ ಪೂರೈಸಲಾಗಿದ್ದ ಹಾಲು ಕುಡಿದು ಅಸ್ವಸ್ಥರಾಗಿದ್ದಾರೆ.
ಒಟ್ಟು 312 ವಿದ್ಯಾರ್ಥಿನಿಯರು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ತೀವ್ರ ಅಸ್ವಸ್ಥಗೊಂಡ 14 ವಿದ್ಯಾರ್ಥಿನಿಯರನ್ನು ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಿಸಲಾಗಿದೆ.
ಹುಬ್ಬಳ್ಳಿ ಆನಂದ ನಗರದ ಸರ್ಕಾರೇತರ ಸಂಸ್ಥೆಯೊಂದು ಕುಸುಗಲ್ ಗ್ರಾಮದ ಬಾಲಕರ ಮತ್ತು ಬಾಲಕಿಯರ ಶಾಲೆಗೆ ಸರ್ಕಾರದ ಕ್ಷೀರಭಾಗ್ಯ ಯೋಜನೆಯಡಿ ಹಾಲು ವಿತರಿಸುವ ಜವಾಬ್ದಾರಿ ವಹಿಸಿಕೊಂಡಿದೆ. ವಿಚಿತ್ರವೆಂದರೆ ಕುಸುಗಲ್ನ ಬಾಲಕಿಯರ ಸರ್ಕಾರಿ ಹಿರಿಯ ಪ್ರಥಮ ಶಾಲೆಯ ವಿದ್ಯಾರ್ಥಿನಿಯರಿಗೆ ಸೋಮವಾರದಿಂದ ಸಂಸ್ಥೆ ಹಾಲು ವಿತರಿಸಲು ಆರಂಭಿಸಿದ್ದು, ಮೊದಲನೇ ದಿನವೇ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ನಡೆದಿದ್ದೇನು?: ಶಾಲಾ ಶಿಕ್ಷಕರ ಉಸ್ತುವಾರಿಯಲ್ಲಿ ಕೆಲವು ಹಿರಿಯ ವಿದ್ಯಾರ್ಥಿನಿಯರು ಬೆಳಗ್ಗೆ ಹಾಲು ವಿತರಿಸಿದ್ದಾರೆ. ಬೆಳಗ್ಗೆ 11.30ರ ಸುಮಾರಿಗೆ ಕೆಲವು ವಿದ್ಯಾರ್ಥಿನಿಯರು ಹೊಟ್ಟೆನೋವು ಮತ್ತು ಕೈಕಾಲು ಸೋತು ಹೋದಂತೆ ಆಗುತ್ತಿದೆ ಎಂದು ಶಿಕ್ಷಕರಲ್ಲಿ ಸಂಕಟ ತೋಡಿಕೊಂಡಿದ್ದಾರೆ.
ನಂತರ ಈ ರೀತಿ ಸಮಸ್ಯೆ ಎದುರಿಸುತ್ತಿದ್ದ ಇನ್ನೂ 13 ವಿದ್ಯಾರ್ಥಿನಿಯರನ್ನು ತಕ್ಷಣ ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಿಸಲಾಯಿತು.
ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಕಿಮ್ಸ್ ಚಿಕ್ಕಮಕ್ಕಳ ತಜ್ಞ ವಿಭಾಗದ ಮುಖ್ಯಸ್ಥ ಡಾ. ಟಿ.ಎ. ಶೇಫೂರ ಅವರು, ಕಿಮ್ಸ್ಗೆ ದಾಖಲಿಸಲಾಗಿರುವ ವಿದ್ಯಾರ್ಥಿನಿಯರ ಆರೋಗ್ಯ ಸ್ಥಿತಿಯಲ್ಲಿ ಸ್ಥಿರತೆ ಇದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ. ಕಿಮ್ಸ್ ನಿರ್ದೇಶಕಿ ಡಾ. ವಸಂತಾ ಕಾಮತ್ ಅವರು ಕೂಡ ಮಕ್ಕಳ ಆರೋಗ್ಯ ಪರಿಶೀಲಿಸಿ ಹೆದರಬೇಕಾದ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.
ಹುಬ್ಬಳ್ಳಿ ಗ್ರಾಮೀಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಹಂಚಾಟೆ, ಹುಬ್ಬಳ್ಳಿ ಗ್ರಾಮೀಣ ವಲಯದ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಕ್ಷೀರಭಾಗ್ಯ ಯೋಜನೆಯಡಿ ಇಸ್ಕಾನ್ ಮತ್ತು ಹುಬ್ಬಳ್ಳಿಯ ಅದಮ್ಯ ಚೇತನ ಸಂಸ್ಥೆ ಹಾಲು ಪೂರೈಸುತ್ತಿದೆ. ಅದಮ್ಯ ಚೇತನ ಸಂಸ್ಥೆ ಸೋಮವಾರದಿಂದ ಬಾಲಕಿಯರ ಪ್ರಾಥಮಿಕ ಶಾಲೆಗೆ ಹಾಲು ಪೂರೈಸಲು ಆರಂಭಿಸಿತ್ತು. ಕೆಲವು ವಿದ್ಯಾರ್ಥಿನಿಯರಿಗೆ ಮಾತ್ರ ಅಸ್ವಸ್ಥತೆ ಕಾಡಿದೆ. ಹೆದರಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.