ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕೆಎಲ್‌ಇ ಎಫ್‌ಎಂ ರೇಡಿಯೋ 21ರಂದು ಕಾರ್ಯಾರಂಭ: ಕೋರೆ

Srinivasa Murthy VN
Updated On : 18 Sept 2013, 1:21 am

ಹುಬ್ಬಳ್ಳಿ: ಕೆಎಲ್‌ಇ ಸಂಸ್ಥೆಯ ಮಹತ್ವಾಕಾಂಕ್ಷಿಯ ಸಮುದಾಯ ಬಾನುಲಿ ಕೇಂದ್ರ (ಕಮ್ಯುನಿಟಿ ರೇಡಿಯೋ ಸ್ಟೇಶನ್) ಕೆಎಲ್‌ಇ ಧ್ವನಿ - ಬಿವಿಬಿ ಎಫ್‌ಎಂ 90.4 ಉದ್ಘಾಟನೆ ಸೆ.21ರಂದು ಸಂಜೆ 4ಕ್ಕೆ ನಗರದ ಬಿವಿಬಿ ಕಾಲೇಜು ಆವರಣದ ಬಯೋಟೆಕ್ನಾಲಜಿ ಆಡಿಟೋರಿಯಂನಲ್ಲಿ ನೆರವೇರಲಿದೆ.
ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ರಾಜ್ಯಸಭಾ ಸದಸ್ಯ ಹಾಗೂ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, 'ಸೋನಿ ಎಂಟರ್‌ಟೈನಮೆಂಟ್‌ನ ರಿಯಾಲಿಟಿ ಶೋ ಇಂಡಿಯನ್ ಐಡಿಯಲ್ ಜೂನಿಯರ್ ಸ್ಪರ್ಧೆಯಲ್ಲಿ ವಿಜೇತ ಬೆಂಗಳೂರಿನ 10 ವರ್ಷದ ಬಾಲಕಿ ಅಂಜನಾ ಪದ್ಮನಾಭನ್ ಈ ಬಾನುಲಿ ಕೇಂದ್ರ ಉದ್ಘಾಟಿಸಲಿದ್ದಾರೆ' ಎಂದು ಹೇಳಿದರು. ಈ ಸಮುದಾಯ ಬಾನುಲಿ ಕೇಂದ್ರದ ಮೂಲಕ ಕೃಷಿ, ವಿಜ್ಞಾನ, ಆರೋಗ್ಯ, ಇಂಗ್ಲಿಷ್ ಭಾಷೆಯನ್ನು ಸುಲಲಿತವಾಗಿ ಮಾತನಾಡುವ ಕಲೆ, ಮನರಂಜನೆ, ಶಿಕ್ಷಣದ ಮಾರ್ಗದರ್ಶನ, ಹಣ ಉಳಿತಾಯ ಹಾಗೂ ಗಳಿಕೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಬಿತ್ತರಿಸಲಾಗುವುದು. ಆಕಾಶ ಹಾಗೂ ಲಹರಿ ಆಡಿಯೋ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಈ ಸಂಸ್ಥೆಗಳ 20 ಸಾವಿರ ಹಾಡುಗಳು ಬಿತ್ತರಗೊಳ್ಳಲಿವೆ. ಚಲನಚಿತ್ರ ಗೀತೆಗಳಷ್ಟೇ ಅಲ್ಲದೇ ಜಾನಪದ, ಲಾವಣಿ ಗೀತೆಗಳೂ ಪ್ರಸಾರಗೊಳ್ಳಲಿವೆ. ಬೆಳಗಾವಿಯಲ್ಲಿ ಮುಂದಿನ ವರ್ಷ ಆರೋಗ್ಯಕ್ಕೆ ಸಂಬಂಧಿಸಿದ ಬಾನುಲಿ ಕೇಂದ್ರ 'ಕೆಎಲ್‌ಇ ಹೆಲ್ತ್ ಧ್ವನಿ' ಪ್ರಾರಂಭಿಸುವ ಯೋಜನೆ ಇದೆ. ಅಥಣಿಯಲ್ಲಿಯೂ ಕೇವಲ ಕೃಷಿ ವಿಷಯಕ್ಕೆ ಸಂಬಂಧಿಸಿದ ಬಾನುಲಿ ಕೇಂದ್ರ ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದರು. ಬಿವಿಬಿ ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಶೆಟ್ಟರ, ಬಾನುಲಿ ಕೇಂದ್ರದ ಮುಖ್ಯಸ್ಥ ರಾಘವೇಂದ್ರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement