ಧಾರವಾಡ: ಕೃಷಿ ಮೇಳ ಆರಂಭ
ಧಾರವಾಡ: ಕೃಷಿ ಸಂಶೋಧನೆಯಲ್ಲಿ ದೇಶಾದ್ಯಂತ ಖ್ಯಾತಿ ಪಡೆದಿರುವ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ಬಾರಿ ನಾಲ್ಕು ದಿನಗಳ ಕೃಷಿ ಮೇಳ ಶನಿವಾರದಿಂದ ಆರಂಭವಾಗಿದೆ. 'ಆಹಾರ ಭದ್ರತೆಗಾಗಿ ಜಲ ಸಂರಕ್ಷಣೆ' ಎಂಬ ಮುಖ್ಯ ಉದ್ದೇಶದೊಂದಿಗೆ ಕೃಷಿ ಮೇಳ ನಡೆಯುತ್ತಿದ್ದು, ಈ ಬಗ್ಗೆ ಹೆಚ್ಚು ಅರಿವು ಮೂಡಿಸುವ ವಸ್ತು ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಕೃಷಿ ಮೇಳವು ಶನಿವಾರದಿಂದ ಆರಂಭವಾಗಿದ್ದರೂ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಬಳಗ್ಗೆ 11ಕ್ಕೆ ಉದ್ಘಾಟನೆಗೊಳ್ಳಲಿದೆ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮೂಲಸೌಕರ್ಯ ಅಭಿವೃದ್ಧಿ ಮತ್ತು ವಾರ್ತಾ ಇಲಾಖೆ ಸಚಿವ ಸಂತೋಷ್ ಲಾಡ್, ಕೃಷಿ ಸಚಿವ ಕೃಷ್ಣ ಬೈರೇಗೌಡ, ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ, ಕಾನೂನು ಸಚಿವ ಟಿ.ಬಿ. ಜಯಚಂದ್ರ, ಅರಣ್ಯ ಹಾಗೂ ಪರಿಸರ ಸಚಿವ ರಮಾನಾಥ ರೈ, ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಸೇರಿದಂತೆ ಅನೇಕ ಸಚಿವರುಗಳು ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.