ಆಡಳಿತದಲ್ಲಿ ಕನ್ನಡ ಜಾರಿಗೆ ಕಟ್ಟುನಿಟ್ಟಿನ ಕ್ರಮ: ಸಿಎಂ
ಹುಬ್ಬಳ್ಳಿ: ಕನ್ನಡ ಆಡಳಿತ ಭಾಷೆಯಾಗಿದ್ದರೂ ಸಂಪೂರ್ಣವಾಗಿ ಅನುಷ್ಠಾನಗೊಂಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಖೇದ ವ್ಯಕ್ತಪಡಿಸಿದ್ದಾರೆ.
ಇಲ್ಲಿಯ ಆದರ್ಶನಗರದಲ್ಲಿ ರಾಜ್ಯ ಸರ್ಕಾರದ ವಿಶೇಷ ಅನುದಾನ 100 ಕೋಟಿ ಯೋಜನೆಯಲ್ಲಿ ನಿರ್ಮಿಸಿರುವ ಕನ್ನಡ ಭವನವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 'ರಾಜ್ಯದಲ್ಲಿ ಕನ್ನಡದ ವಾತಾವರಣ ಹಾಗೂ ಅನಿವಾರ್ಯತೆ ನಿರ್ಮಾಣವಾಗಬೇಕು. ಆಡಳಿತದಲ್ಲಿ ಕನ್ನಡ ಕಟ್ಟುನಿಟ್ಟಾಗಿ ಜಾರಿಗೆ ತರಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಇದಕ್ಕೆ ಪ್ರತಿಯೊಬ್ಬ ಕನ್ನಡಿಗ ಕೈ ಜೋಡಿಸಬೇಕು' ಎಂದರು.
ಡಾ. ಸರೋಜಿನಿ ಮಹಿಷಿ ವರದಿಯನ್ನು ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡುವ ಮೂಲಕ ಕನ್ನಡಿಗರಿಗೆ ಸೌಲಭ್ಯ, ಹೆಚ್ಚು ಉದ್ಯೋಗ ಒದಗಿಸುವ ಅವಶ್ಯಕತೆ ಇದೆ. ಸ್ಥಳೀಯ ಉದ್ಯೋಗಗಳು ಕನ್ನಡಿಗರಿಗೇ ದೊರಕಬೇಕೆಂಬ ಈ ವರದಿಯನ್ನು ಅನುಷ್ಠಾನಕ್ಕೆ ತರಬೇಕಿದೆ. ಚೀನಾ ಪ್ರವಾಸದಿಂದ ಹಿಂದಿರುಗಿದ ಮೇಲೆ ಎಲ್ಲ ಜಿಲ್ಲೆಗಳ ಪ್ರವಾಸ ಕೈಗೊಂಡಿರುವ ತಾವು ಜನರ ಅಹವಾಲುಗಳನ್ನು ಸ್ವೀಕರಿಸಿ, ಅವರ ಆಶೋತ್ತರಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜನರ ವಿಶ್ವಾಸಕ್ಕೆ ಧಕ್ಕೆ ಬರುವ ಕೆಲಸಗಳನ್ನು ಮಾಡುವುದಿಲ್ಲವೆಂದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, 'ಬಿ.ಎಸ್.ಯಡಿಯೂರಪ್ಪ ಹಾಗೂ ಡಿ. ವಿ. ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳಿಗೆ 200 ಕೋಟಿಯ ವಿಶೇಷ ಅನುದಾನ ನೀಡಿದ್ದರು. ಆದರೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಬಳಿಕ ಕೇವಲ ತಮ್ಮ ತವರು ಜಿಲ್ಲೆಯಾದ ಮೈಸೂರಿಗೆ 100 ಕೋಟಿಯ ವಿಶೇಷ ಅನುದಾನ ನೀಡಿದ್ದಾರೆ. ಮೈಸೂರಿಗೆ ಅನುದಾನ ನೀಡಿದ್ದಕ್ಕೆ ತಮ್ಮ ಅಭ್ಯಂತರವಿಲ್ಲ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಇನ್ನಿತರ ಪಾಲಿಕೆಗೂ ವಿಶೇಷ ಅನುದಾನ ನೀಡುವ ಉದಾರತೆಯನ್ನು ಸಿದ್ದರಾಮಯ್ಯ ತೋರಲಿ' ಎಂದರು. ಸಚಿವರಾದ ಸಂತೋಷ್ ಲಾಡ್, ಎಚ್.ಕೆ. ಪಾಟೀಲ, ಶಾಸಕರಾದ ಪ್ರಸಾದ ಅಬ್ಬಯ್ಯ, ವಿನಯ ಕುಲಕರ್ಣಿ, ಎನ್.ಎಚ್. ಕೋನರಡ್ಡಿ, ವೀರಣ್ಣ ಮತ್ತಿಕಟ್ಟಿ, ಬಸವರಾಜ ಹೊರಟ್ಟಿ, ನಾಗರಾಜ ಛಬ್ಬಿ, ಸಂಸದ ಪ್ರಹ್ಲಾದ ಜೋಶಿ, ಹಿರಿಯ ಪತ್ರಕರ್ತ, ನಾಡೋಜ ಡಾ. ಪಾಟೀಲ ಪುಟ್ಟಪ್ಪ, ಹಿರಿಯ ಕವಿ ನಾಡೋಜ ಡಾ. ಚನ್ನವೀರ ಕಣವಿ ಮತ್ತಿತರರು ಉಪಸ್ಥಿತರಿದ್ದರು.
ಅಕ್ರಮ ಮರಳು ಕೇಂದ್ರ ಮೇಲೆ ದಾಳಿ
ಮುಳಬಾಗಲು: ತಾಲೂಕಿನ ಭೀಮನತ್ತ, ಪುಲಿಓಬಿರೆಡ್ಡಿಹಳ್ಳಿ, ನಂಗಲಿ ಗ್ರಾಮದ ಸುತ್ತಮುತ್ತ ಕಂದಾಯ ಇಲಾಖೆ ಅಧಿಕಾರಿಗಳು ಶನಿವಾರ ದಾಳಿ ನಡೆಸಿ 4 ಇಂಜಿನ್ ನಾಶಪಡಿಸಿದರು.
ಅಲ್ಲದೆ, ಒಂದು ಇಂಜಿನ್ ವಶಪಡಿಸಿಕೊಳ್ಳಲಾಯಿತು. ವ್ಯಕ್ತಿಯೊಬ್ಬರು ಅಕ್ರಮ ಮರಳು ದಾಳಿ ಸಮಯದಲ್ಲಿ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಅವರ ಮೇಲೆ ಕೇಸು ದಾಖಲು ಮಾಡಲಾಗಿದೆ ಎಂದು ತಹಸೀಲ್ದಾರ್ ಡಿ.ವಿ. ರಾಮಮೂರ್ತಿ ತಿಳಿಸಿದ್ದಾರೆ. ಅಕ್ರಮ ಮರಳು ಲಾರಿಯವರು ದಂಡವನ್ನು ಡಿಡಿ ಮೂಲಕ ಪೊಲೀಸರಿಗೆ ನೀಡಿದರು. ನಂತರ ಅಕ್ರಮ ಮರಳನ್ನು ಮುಳಬಾಗಲು ಪ್ರವಾಸಿ ಮಂದಿರದಲ್ಲಿ ಇಳಿಸಲಾಗಿದೆ. ಮರಳನ್ನು ಹರಾಜು ಮೂಲಕ ವಿಲೇವಾರಿ ಮಾಡಲಾಗುವುದೆಂದು ತಹಸೀಲ್ದಾರ್ ಡಿ.ವಿ.ರಾಮಮೂರ್ತಿ ತಿಳಿಸಿದ್ದಾರೆ. ದಾಳಿಯಲ್ಲಿ ರಾಜಸ್ವ ನಿರೀಕ್ಷಕ ಬಿ.ವಿ. ರೆಡ್ಡಪ್ಪ ಗುಪ್ತ, ಕೃಷ್ಣಪ್ಪ, ಸುರೇಶ್ ಮುಂತಾದವರು ಭಾಗವಹಿಸಿದ್ದರು.