ಅನಂತಮೂರ್ತಿಯಿಂದ ಜ್ಞಾನಪೀಠ ಪ್ರಶಸ್ತಿ ಹಿಂಪಡೆಯಲಿ
ಕ.ಪ್ರ.ವಾರ್ತೆ ಹುಬ್ಬಳ್ಳಿ ಸೆ. 26
ಭಾರತದ ಅನ್ನ ತಿಂದು ಭಾರತದಿಂದಲೇ ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡು ಇದೀಗ ನರೇಂದ್ರ ಮೋದಿ ಪ್ರಧಾನಿಯಾದರೆ ದೇಶಬಿಟ್ಟು ಹೋಗುವ ಹೇಳಿಕೆ ನೀಡಿರುವ ಹಿರಿಯ ಸಾಹಿತಿ ಪ್ರೊ. ಅನಂತಮೂರ್ತಿ ಅವರಿಂದ ಸರ್ಕಾರ ಪ್ರಶಸ್ತಿ ವಾಪಸ್ಸು ಪಡೆದುಕೊಳ್ಳಬೇಕು ಎಂದು ರಾಣೆಬೆನ್ನೂರು ತಾಲೂಕು ಅರೆಗೇರಿಯ ಶ್ರೀ ಚನ್ನಬಸವೇಶ್ವರ ಆಶ್ರಮದ ಶ್ರೀ ಪ್ರಣವಾನಂದ ಸ್ವಾಮೀಜಿ ಒತ್ತಾಯಿಸಿದರು.
ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಮೋದಿ-ಮುತಾಲಿಕ್ ಅಭಿಮಾನಿ ಬ್ರಿಗೇಡ್ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಸ್ವಾಮೀಜಿ, ಮತ್ತೊಬ್ಬ ಸಾಹಿತಿ ಗಿರೀಶ್ ಕಾರ್ನಾಡ್ ಸಹ ದೇಶದ್ರೋಹದ ಹೇಳಿಕೆ ನೀಡುತ್ತಿದ್ದು, ಅವರಿಗೂ ಸರ್ಕಾರ ನೀಡಿರುವ ಪ್ರಶಸ್ತಿಗಳನ್ನು ವಾಪಸ್ಸು ಪಡೆದುಕೊಳ್ಳಬೇಕೆಂದರು.
ಡಾ. ಅನಂತಮೂರ್ತಿ ಹಾಗೂ ಗಿರೀಶ್ ಕಾರ್ನಾಡ್ ಅವರಿಗೆ ವಯಸ್ಸಾಗಿದ್ದು, ಸಮಾಜದ ಸ್ವಾಸ್ಥ್ಯ ಕೆಡಿಸುವ ಬದಲು ವಯಸ್ಸಿಗನುಗುಣವಾಗಿ ರಾಮನಾಮ ಜಪಿಸುತ್ತ ಕೂರುವುದು ಒಳಿತು ಎಂದು ಸಲಹೆ ನೀಡಿದರು.
ನರೇಂದ್ರ ಮೋದಿ ಪ್ರಧಾನಿಯಾದಲ್ಲಿ ಪ್ರೊ. ಅನಂತಮೂರ್ತಿ ತಮ್ಮ ಹೇಳಿಕೆಯಂತೆ ದೇಶಬಿಟ್ಟು ಹೋಗಬೇಕು. ಅವರು ದೇಶ ಬಿಟ್ಟರೆ ಎಲ್ಲ ದೇವಸ್ಥಾನಗಳಲ್ಲಿ ಪೂಜೆ ಮಾಡುವುದಾಗಿ ಹೇಳಿದರು.
ಮಠಾಧೀಶರಿಗೆ ಟಿಕೆಟ್ ನೀಡಲು ಆಗ್ರಹ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 12 ಕ್ಷೇತ್ರಗಳಿಂದ ಮಠಾಧೀಶರಿಗೆ ಬಿಜೆಪಿ ಟಿಕೆಟ್ ನೀಡುವಂತೆ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಅವರೊಂದಿಗೆ ಮಾತುಕತೆ ನಡೆಸಲಾಗಿದ ಎಂದರು.
ಮಾಜಿ ಪ್ರಧಾನಿ ದೇವೆಗೌಡರ ವಿರುದ್ಧ ಹಾಸನ ಲೋಕಸಭೆ ಕ್ಷೇತ್ರದಿಂದ ಧಾರವಾಡದ ಬಸವಾನಂದ ಸ್ವಾಮೀಜಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತವಾಗಿದ್ದು, ಇನ್ನುಳಿದ ಕೆಲವು ಕ್ಷೇತ್ರಗಳಲ್ಲಿಯೂ ಮಠಾಧೀಶರನ್ನು ಕಣಕ್ಕಿಳಿಸುವ ಭರವಸೆಯನ್ನು ಪ್ರಹ್ಲಾದ ಜೋಶಿ ನೀಡಿದ್ದಾರೆಂದು ಹೇಳಿದರು.
ಅಸಂಬದ್ಧ ಹೇಳಿಕೆ ನೀಡುವ ಯುಆರ್ಎ ಸರ್ವಜ್ಞರಲ್ಲ
ಮಂಗಳೂರು: 'ಬ್ರಾಹ್ಮಣರು ಗೋಮಾಂಸ ಸೇವಿಸುವ ಪರಿಪಾಠವಿತ್ತು' ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಸಾಹಿತಿ ಯು.ಆರ್. ಅನಂತಮೂರ್ತಿಯವರಿಗೆ ಕನ್ನಡ ಸಾಹಿತ್ಯದ ಜ್ಞಾನಪೀಠ ಪ್ರಶಸ್ತಿ ನೀಡಿದ್ದೇ ಹೊರತು 'ಸರ್ವಜ್ಞ' ಪ್ರಶಸ್ತಿಯಲ್ಲ ಎಂದು ಮಂಗಳೂರಿನಲ್ಲಿ ನಡೆದ ತಂತ್ರಿಗಳ ಸಭೆಯಲ್ಲಿ ಅವರ ಹೇಳಿಕೆಯನ್ನು ಖಂಡಿಸಲಾಯಿತು. ಅನಂತಮೂರ್ತಿ ಅವರ ಅಸಂಬದ್ಧ ಹೇಳಿಕೆ ಹಿಂದೂ ಸಮಾಜದ ಸಾಮರಸ್ಯ ಕದಡುವ ಹುನ್ನಾರ. ಸನಾತನ ಹಿಂದೂ ಅನುಯಾಯಿಗಳಿಗೆ ಈ ಹೇಳಿಕೆ ನೋವು ತಂದಿದೆ ಎಂದರು. ಸಭೆಯಲ್ಲಿ ಪಂಡಿತ್ ನರಸಿಂಹ ಆಚಾರ್ಯ, ತಂತ್ರಿಗಳಾದ ಡಾ. ಶಿವಪ್ರಸಾದ್ ತಂತ್ರಿ, ಅನಂತ ಅಸ್ರಣ್ಣ, ಸುಕುಮಾರ ಶಾಸ್ತ್ರಿ, ಚೆಂಪಿ ರಾಮಚಂದ್ರ ಭಟ್ ಇತರರು ಹಾಜರಿದ್ದರು.
ಕಾನೂನು ಕ್ರಮಕ್ಕೆ ಆಗ್ರಹ
ಮಂಗಳೂರು: 'ಹಿಂದೂ ಧರ್ಮದಲ್ಲಿ ಯಜ್ಞ ಯಾಗಾದಿಗಳಿಗೆ ಗೋವು ಮತ್ತು ಪ್ರಾಣಿಗಳನ್ನು ಆಹುತಿ ನೀಡುತ್ತಿದ್ದರು' ಎಂದು ಹೇಳಿಕೆ ನೀಡಿ, ಹಿಂದೂ ಧರ್ಮವನ್ನು ಅವಹೇಳನ ಮಾಡುತ್ತಿರುವ ಸಾಹಿತಿ ಯು.ಆರ್. ಅನಂತಮೂರ್ತಿಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ರಾಮ್ಸೇನೆ ಜಿಲ್ಲಾ ಸಂಚಾಲಕ ಮಧುಸೂದನ್ ಉರ್ವಸ್ಟೋರ್ ಆಗ್ರಹಿಸಿದ್ದಾರೆ. ಅನಂತಮೂರ್ತಿಯವರ ಹೇಳಿಕೆ ಸತ್ಯಕ್ಕೆ ದೂರವಾಗಿದ್ದು, ಈ ರೀತಿ ಬಲಿ ಕೊಡುತ್ತಿದ್ದವರು ರಾಕ್ಷಸರು. ರಾಮಾಯಣ ಮತ್ತು ಮಹಾಭಾರತದಲ್ಲಿ ಉಲ್ಲೇಖವಿಲ್ಲದ ಹೇಳಿಕೆ ನೀಡಿ ಹಿಂದೂ ಧರ್ಮಕ್ಕೆ ಘಾಸಿಯುಂಟು ಮಾಡುತ್ತಿದ್ದಾರೆ. ಬೇರೆ ಧರ್ಮಗಳಲ್ಲಿ ನಡೆಯುತ್ತಿರುವ ಅನಾಚಾರಗಳನ್ನು ಪತ್ರಿಕಾಗೋಷ್ಠಿಯಲ್ಲಿ ಹೇಳಲಿ. ಇದು ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.