ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮಹದಾಯಿಯಿಂದ ಸರ್ಕಾರಕ್ಕೆ ಪೆಟ್ಟು

Srinivasa Murthy VN
Updated On : 20 Apr 2014, 12:25 pm

ಹುಬ್ಬಳ್ಳಿ: ಜೂನ್ ಹೊತ್ತಿಗೆ ಕಳಸಾ ನಾಲೆಯಿಂದ ಕನಿಷ್ಠ 1.5 ಟಿಎಂಸಿ ನೀರನ್ನು ಮಲಪ್ರಭೆಗೆ ಹರಿಸಿಯೇ ಸಿದ್ಧ ಎಂದು ಕೊಚ್ಚಿಕೊಂಡಿದ್ದ ರಾಜ್ಯ ಸರ್ಕಾರಕ್ಕೆ ಮಹದಾಯಿ ನ್ಯಾಯಾಧೀಕರಣದ ಆದೇಶ ಸದ್ಯದ ಮಟ್ಟಿಗೆ ಭಾರಿ ಪೆಟ್ಟು ನೀಡಿದೆ.
ಈಗಾಗಲೇ ಶೇ. 85ರಷ್ಟು ಕಾಮಗಾರಿ ಪೂರ್ಣಗೊಂಡಿರುವ ಕಳಸಾ ನಾಲೆಯಿಂದ ಮಲಪ್ರಭಾ ನದಿಗೆ ಸ್ವಾಭಾವಿಕವಾಗಿ ಕನಿಷ್ಠ 1.5 ಟಿಎಂಸಿ ನೀರು ಹರಿದು ಬರುತ್ತಿತ್ತು. ನ್ಯಾಯಾಧೀಕರಣದಲ್ಲಿ ಕನಿಷ್ಠ ತಡೆಗೊಡೆ ಬೇಡ ಎಂದು ಹೇಳುವಷ್ಟರ ಮಟ್ಟಿಗೆ ವಾದ ಮಂಡಿಸಿಲ್ಲ. ವಾರ್ಷಿಕ 3000 ಮಿ.ಮೀ. ಮಳೆ ಬೀಳುವ ಮಲಪ್ರಭಾ ನದಿ ಅಚ್ಚುಕಟ್ಟು ಪ್ರದೇಶದ ಭೌಗೋಳಿಕ ಪರಿಸ್ಥಿತಿ ವಿಚಿತ್ರವಾಗಿದ್ದು, ಸಡಿಲ ಮಣ್ಣಿನ ಕಾರಣ ಇಲ್ಲಿ ತಡೆಗೋಡೆ ನಿರ್ಮಿಸಲು ಅಸಾಧ್ಯ ಎಂಬ ಸಂಗತಿಯನ್ನು ನ್ಯಾಯಾಧೀಕರಣಕ್ಕೆ ಮನದಟ್ಟು ಮಾಡಿಕೊಡುವಲ್ಲಿ ಸರ್ಕಾರ ವಿಫಲವಾಗಿದೆ ಎನ್ನುವುದು ಕಳಸಾ ಬಂಡೂರಿಗಾಗಿ ಹೋರಾಟ ನಡೆಸಿದವರ ಅಸಮಾಧಾನ.
ಕೈ ಹಿಸುಕಿಕೊಳ್ಳುವ ಪರಿಸ್ಥಿತಿ: ಮಳೆಗಾಲದಲ್ಲಿ ಪ್ರವಾಹ ಸ್ವರೂಪದಲ್ಲಿ ಹರಿಯುವ ಕಳಸಾ ನಾಲೆಯ ಹೆಚ್ಚುವರಿ ನೀರನ್ನಾದರೂ ಈ ಬಾರಿ ಮಲಪ್ರಭೆಗೆ ಹರಿಸಲಾಗುವುದು ಎಂದು ಬಿಜೆಪಿ, ಕಾಂಗ್ರೆಸ್‌ನ ರಾಜಕಾರಣಿಗಳು ಜನರಿಗೆ ಭರವಸೆ ನೀಡಿದ್ದರು. ಆದರೆ ನ್ಯಾಯಾಧೀಕರಣದ ಸಭೆಯಲ್ಲಿ ಕಳಸಾ ನಾಲೆಯುದ್ದಕ್ಕೂ ತಡೆಗೋಡೆ ನಿರ್ಮಿಸಿ ಹೆಚ್ಚುವರಿ ನೀರನ್ನು ಕೂಡ ಕರ್ನಾಟಕ ಬಳಸಿಕೊಳ್ಳಕೂಡದು ಎಂಬ ಆದೇಶ ಹೊರಬಿದ್ದಿದೆ. ಮುಂದಿನ ನ್ಯಾಯಾಧೀಕರಣ ಸಭೆ ಸೆಪ್ಟಂಬರ್‌ನಲ್ಲಿ ನಡೆಯಲಿದ್ದು, ಅಲ್ಲಿಯವರೆಗೆ ರಾಜ್ಯ ಸರ್ಕಾರ ನ್ಯಾಯಾಧೀಕರಣ ಆದೇಶ ಪಾಲಿಸಲೇಬೇಕು ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಾರಿ ಮಲಪ್ರಭೆಯ ಒಡಲಿಗೆ ಕನಿಷ್ಠ 1.5 ಟಿಎಂಸಿ ನೀರಾದರೂ ಹೆಚ್ಚುವರಿಯಾಗಿ ಬರುತ್ತದೆ ಎಂದು ಆಸೆಗಣ್ಣಿನಿಂದ ನೋಡುತ್ತಿದ್ದ ಹುಬ್ಬಳ್ಳಿ-ಧಾರವಾಡ ನಾಗರಿಕರು ಮತ್ತು ಮಲಪ್ರಭಾ ನದಿ ತೀರದ ಕೆಳ ಭಾಗದ ಗ್ರಾಮಗಳಿಗೆ ಈಗ ಅದೂ ಕೂಡ ದಕ್ಕಲಾರದಂತಹ ವಿಷಮ ಪರಿಸ್ಥಿತಿಯಲ್ಲಿದ್ದಾರೆ. ಇದಕ್ಕೆ ನೇರ ಕಾರಣ ರಾಜ್ಯ ಸರ್ಕಾರವೇ ವಿನಃ ಮತ್ತಾರು ಅಲ್ಲ ಎನ್ನುತ್ತಾರೆ ಕಳಸಾ ಬಂಡೂರಿ ನಾಲಾ ಹೋರಾಟ ಸಮಿತಿ ಪದಾಧಿಕಾರಿಗಳು.  ಈ ಕುರಿತು 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಕಳಸಾ ಬಂಡೂರಿ ಕೇಂದ್ರ ಹೋರಾಟ ಸಮಿತಿ ಸಂಚಾಲಕ ವಿಕಾಸ ಸೊಪ್ಪಿನ, ರಾಜ್ಯ ಸರ್ಕಾರ ಮೊದಲು ಕಳಸಾ ಮತ್ತು ಬಂಡೂರಿ ನಾಲೆಯಿಂದ 7.56 ಟಿಎಂಸಿ ನೀರು ಪಡೆಯುವ ಪ್ರಯತ್ನ ಮಾಡಬೇಕಿತ್ತು ಎಂದು ಹೇಳಿದ್ದಾರೆ.  

ಸದ್ಯಕ್ಕೆ ಪ್ರವಾಹದ ನೀರನ್ನು ಬಳಸಿಕೊಳ್ಳಬಾರದು ಎಂದು ನ್ಯಾಯಾಧೀಕರಣ ತೀರ್ಪು ನೀಡಿದೆ. ಅಲ್ಲದೇ 2006ರಲ್ಲಿಯೇ ರಾಜ್ಯ ಸರ್ಕಾರ ನ್ಯಾಯಾಧೀಕರಣ ತೀರ್ಪು ನೀಡುವವರೆಗೆ ನೀರನ್ನು ಬಳಸಿಕೊಳ್ಳುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದೇವೆ. ಕಳಸಾ ಬಳಿ ಬ್ಯಾರೇಜ್ ನಿರ್ಮಿಸಿದ ಅನಂತರವೇ ನಮಗೆ 1.5 ಟಿಎಂಸಿ ನೀರು ಲಭಿಸುತ್ತದೆ.
- ಎಂ.ಬಿ. ಪಾಟೀಲ್, ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement