ಹದ್ದು ಡಿಕ್ಕಿ: ಸ್ಪೈಸ್ ಜೆಟ್‌ಗೆ ಧಕ್ಕೆ
ಹುಬ್ಬಳ್ಳಿ: ಮುಂಬಯಿಯಿಂದ ಬಂದಿಳಿದು ರನ್‌ವೇಯಲ್ಲಿ ಸಂಚರಿಸುತ್ತಿದ್ದ ಸ್ಪೈಸ್ ಜೆಟ್ ವಿಮಾನಕ್ಕೆ ಹದ್ದು ಡಿಕ್ಕಿ ಹೊಡೆದ ಪರಿಣಾಮ ವಿಮಾನದ ಮುಂಭಾಗಕ್ಕೆ ಧಕ್ಕೆಯಾದ ಘಟನೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.
ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದು, ಮುಂಬಯಿಗೆ ಹೊರಟಿದ್ದ ಪ್ರಯಾಣಿಕರು ಸುಮಾರು ಮೂರು ತಾಸು ತಡವಾಗಿ ಗೋವಾದಿಂದ ಬಂದ ಸ್ಪೈಸ್ ಜೆಟ್‌ನ ಮತ್ತೊಂದು ವಿಮಾನದಲ್ಲಿ ಪ್ರಯಾಣ ಬೆಳೆಸಿದರು.
ಘಟನೆಯ ವಿವರ: ದಿಲ್ಲಿ-ಜಬಲಪುರ-ಮುಂಬಯಿ-ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸುತ್ತಿದ್ದ ಸ್ಪೈಸ್ ಜೆಟ್ ವಿಮಾನ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನ 2 ಗಂಟೆಗೆ ಇಳಿದು, ಮತ್ತೆ 2.30ಕ್ಕೆ ಹಾರಾಟ ಪ್ರಾರಂಭಿಸಬೇಕಿತ್ತು.
ಆದರೆ, ಸುಮಾರು ಅರ್ಧ ತಾಸು ತಡವಾಗಿ ಬಂದ ವಿಮಾನ ಕೆಳಗಿಳಿದು ರನ್‌ವೇನಲ್ಲಿ ಕೆಲ ದೂರ ಸಂಚರಿಸುತ್ತಿದ್ದಂತೆಯೇ ಹದ್ದು ವಿಮಾನದ ಮುಂಭಾಗಕ್ಕೆ ಬಡಿದಿದೆ. ವಿಮಾನದ ಮುಂಭಾಗ ನಜ್ಜುಗುಜ್ಜಾಗಿದ್ದು, ಪೈಲಟ್ ಸುರಕ್ಷಿತವಾಗಿ ವಿಮಾನವನ್ನು ನಿಗದಿತ ಸ್ಥಳದಲ್ಲಿ ನಿಲ್ಲಿಸಿದ್ದಾನೆ.
ಆ ವಿಮಾನದಲ್ಲಿ 67 ಪ್ರಯಾಣಿಕರಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ. ದುರಸ್ತಿಗೆ ಕನಿಷ್ಠ 2-3 ದಿನ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿಯೇ ನಿಲ್ಲಬೇಕಾಗುತ್ತದೆಂದು ಮೂಲಗಳು ತಿಳಿಸಿವೆ. ಹುಬ್ಬಳ್ಳಿಯಿಂದ ಮುಂಬಯಿನತ್ತ ಪ್ರಯಾಣಿಸಲಿದ್ದ 71 ಪ್ರಯಾಣಿಕರಿಗಾಗಿ ಸ್ಪೈಸ್ ಜೆಟ್‌ನ ಮತ್ತೊಂದು ವಿಮಾನದ ವ್ಯವಸ್ಥೆ ಮಾಡಲಾಯಿತು. ಈ ವಿಮಾನ ಗೋವಾದಿಂದ ಸಂಜೆ ಸುಮಾರು 5.30ಕ್ಕೆ ಬಂದಿಳಿದಿದ್ದರಿಂದ ಪ್ರಯಾಣಿಕರು ಮೂರು ತಾಸಿಗೂ ಹೆಚ್ಚು ಸಮಯ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲೇ ಕಾಯಬೇಕಾಯಿತು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಹದ್ದು ವಿಮಾನಕ್ಕೆ ಡಿಕ್ಕಿ ಹೊಡೆದ ಘಟನೆಯ ವಿವರಗಳುಳ್ಳ ವರದಿಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಕಳುಹಿಸಲಾಗಿದೆ. ಪ್ರಾಧಿಕಾರದಿಂದ ಬರುವ ನಿರ್ದೇಶನದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.
- ಕೆ.ಎಂ. ಬಸವರಾಜು, ವ್ಯವಸ್ಥಾಪಕರು, ಹುಬ್ಬಳ್ಳಿ ವಿಮಾನ ನಿಲ್ದಾಣ