ಅಧಿಕಾರಕ್ಕಾಗಿ ದೇಶಭಕ್ತಿ ಸೋಗು
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 2
ದೇಶಭಕ್ತಿ ಹೆಸರಿನಲ್ಲಿ ಹಿಂದೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದ್ದ ಬಿಜೆಪಿ ಶಾಸಕರೊಬ್ಬರು ವೀರರಾಣಿ ಕಿತ್ತೂರ ಚೆನ್ನಮ್ಮನ ಆಸ್ಥಾನದ 200 ಕಿಮೀ ಜಾಗ ಅತಿಕ್ರಮಿಸಿದ್ದರು ಎಂದು ಶ್ರೀರಾಮಸೇನಾದ ಸಂಸ್ಥಾಪಕ ಪ್ರಮೋದ ಮುತಾಲಿಕ್ ಗಂಭೀರವಾಗಿ ಆರೋಪಿಸಿದರು.
ನಗರದ ನೆಹರು ಮೈದಾನದಲ್ಲಿ ಭಾನುವಾರ ಸಂಜೆ ಶ್ರೀರಾಮಸೇನಾದ ವತಿಯಿಂದ ಸ್ವಾಮಿ ವಿವೇಕಾನಂದ 150ನೇ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಮಹಾ ಸಂಗ್ರಾಮ ಭವ್ಯ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಆಸ್ಥಾನದ ಜಾಗವನ್ನು ಅತಿಕ್ರಮಿಸಿ ಬೃಹತ್ ಸಂಕೀರ್ಣ ಕಟ್ಟಲು ಮುಂದಾಗಿದ್ದ ಶಾಸಕರ ವಿರುದ್ಧ ತಾವು ಆಗಿನ ಸರ್ಕಾರದ ಗೃಹಮಂತ್ರಿಗಳಿಗೆ ದೂರು ನೀಡಿದ್ದರೂ ಅವರ ವಿರುದ್ಧ ಯಾವುದೇ ರೀತಿಯ ಕ್ರಮಕೈಗೊಂಡಿರಲಿಲ್ಲ ಎಂದು ಖೇದ ವ್ಯಕ್ತಪಡಿಸಿದರು.
ಅನಂತರ, ತಾವು ಆಸ್ಥಾನದ ಜಾಗ ಉಳಿಸಿಕೊಳ್ಳಲು ಕೋರ್ಟ್ ಮೊರೆ ಹೋಗಬೇಕಾಯಿತು. ಅಂತಿಮವಾಗಿ ನ್ಯಾಯಾಲಯವೇ ಅತಿಕ್ರಮಿಸಿರುವ ಆಸ್ಥಾನದ ಜಾಗವನ್ನು ತೆರವುಗೊಳಿಸುವಂತೆ ತೀರ್ಪು ನೀಡಿದೆ ಎಂದ ಮುತಾಲಿಕ್, ಅಧಿಕಾರಕ್ಕಾಗಿ ದೇಶಭಕ್ತಿ ಸೋಗು ಹಾಕುವವರ ವಿರುದ್ಧ ಸಮಸ್ತ ಹಿಂದೂಗಳೆಲ್ಲರೂ ಒಂದಾಗಬೇಕಿದೆ ಎಂದು ಪ್ರತಿಪಾದಿಸಿದರು.
ಗೂಂಡಾ ಕಾಯ್ದೆ: ಹಿಂದೂಗಳ ರಕ್ಷಣೆ ಹಾಗೂ ಹಿಂದುತ್ವದ ಉಳಿವಿಗಾಗಿ ಆರ್ಎಸ್ಎಸ್ ಹಾಗೂ ಶ್ರೀರಾಮಸೇನೆ ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದೆ. ಇಂತಹ ಕಾರ್ಯಕರ್ತರ ವಿರುದ್ಧ ಗೂಂಡಾ ಕಾಯ್ದೆ ವಿಧಿಸಿದ್ದು ನ್ಯಾಯವೇ ಎಂದು ಖಾರವಾಗಿ ಪ್ರಶ್ನಿಸಿದರು.
ರಾಜಕೀಯ ಶಕ್ತಿ ಅವಶ್ಯ: ರಾಜ್ಯದಲ್ಲಿ ಗೋ ಹತ್ಯೆ, ಮತಾಂತರ, ಲವ್ ಜಿಹಾದ್ ಹೆಸರಿನಲ್ಲಿ ಮುಗ್ಧ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಯುತ್ತಲೇ ಸಾಗಿದೆ. ಇವೆಲ್ಲವುಗಳನ್ನು ಮಟ್ಟ ಹಾಕಲು ರಾಜಕೀಯ ಶಕ್ತಿ ಅವಶ್ಯ. ಇದೇ ಕಾರಣಕ್ಕಾಗಿಯೇ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ತಮ್ಮನ್ನು ಸ್ಪರ್ಧಿಸುವಂತೆ ಒಕ್ಕೊರಲಿನ ಅಭಿಪ್ರಾಯ ಮೂಡಿ ಬರುತ್ತಿದೆ.
ನೆರೆಯ ಪಾಕಿಸ್ತಾನ ಹಾಗೂ ಬಾಂಗ್ಲಾ ನುಸುಳುಕೋರರು ದೇಶದಲ್ಲಿ ಭಯೋತ್ಪಾದನೆ ಕೃತ್ಯ ಅವ್ಯಾಹತವಾಗಿ ನಡೆಸುತ್ತ ಬಂದರೂ ಅವರನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಭ್ರಷ್ಟಾಚಾರ ಮೇರೆ ಮೀರಿದೆ. ಆದ್ದರಿಂದ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮನೆ ಕಡೆಯ ದಾರಿ ತೋರಿಸಬೇಕಲ್ಲದೆ, ದೇಶಭಕ್ತಿ ಹೆಸರಿನಲ್ಲಿ ಮೊಸಳೆ ಕಣ್ಣೀರು ಹಾಕುವವರನ್ನೂ ತಕ್ಕಪಾಠ ಕಲಿಸಬೇಕು ಎಂದು ಪರೋಕ್ಷವಾಗಿ ಬಿಜೆಪಿಯನ್ನು ಜರಿದರು.
ವಿದ್ಯಾವಾಚಸ್ಪತಿ ಡಾ. ವಿಶ್ವ ಸಂತೋಷ ಭಾರತಿ ಶ್ರೀಪಾದಂಗಳು, ಜಾತಿ ವ್ಯವಸ್ಥೆ ಹೋಗಲಾಡದ ಹೊರತು ಹಿಂದೂಗಳು ಒಗ್ಗಟ್ಟಾಗಲು ಸಾಧ್ಯವಿಲ್ಲ. ಹಿಂದೂಗಳ ಮೇಲೆ ಎಲ್ಲ ಕ್ಷೇತ್ರಗಳಲ್ಲಿಯೂ ದೌರ್ಜನ್ಯ ನಡೆಯುತ್ತಲೇ ಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ತಾಳ್ಮೆ ಹಾಗೂ ಸಹನಗೆ ಮಿತಿ ಇರಬೇಕು. ಹಿಂದು ಧರ್ಮದ ಒಂದು ಕೆನ್ನೆಗೆ ಬಾರಿಸಿದವರ ಎರಡೂ ಕೆನ್ನೆಗಳಿಗೆ ಬಾರಿಸುವಂತಹ ಛಾತಿ ಹಿಂದೂಗಳು ಹೊಂದಬೇಕು. ಸ್ವಾಮಿ ವಿವೇಕಾನಂದರ ಮಂತ್ರವೂ ಇದೆ ಆಗಿತ್ತು. ಹಿಂದೂಗಳು ಮಾನಹೇಡಿಗಳಲ್ಲಿ ಎಂಬುದನ್ನು ಗೋಹತ್ಯೆ, ಮತಾಂತರ, ಲವ್ ಜಿಹಾದ್, ಭಯೋತ್ಪಾದನೆ ಹೆಸರಿನಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಹೋರಾಡುವ ಮೂಲಕ ತೋರಿಸಿಕೊಡಬೇಕಿದೆ ಎಂದೂ ಶ್ರೀಗಳು ಹೇಳಿದರು.
ಸ್ವಾಮೀಜಿಗಳೂ...: ಸ್ವಾಮೀಜಿಗಳು ಸಹಾ ತಮ್ಮ ಜಾತಿಯವರನ್ನು ಸಚಿವರನ್ನಾಗಿಸಬೇಕು ಎಂದು ಹೇಳಿಕೆ ನೀಡುವುದನ್ನು ಬಿಡುವ ಮೂಲಕ ಜಾತಿ ವ್ಯವಸ್ಥೆ ಹೋಗಲಾಡಿಸಲು ಪ್ರಯತ್ನಿಸಬೇಕಿದೆ. ಸಾಧು-ಸಂತರು ಹಾಗೂ ಹಿಂದುಗಳಿಗೆ ಅವಮಾನ, ಅಪಮಾನವಾದಗಲ್ಲೆಲ್ಲ್ಲ ಎಲ್ಲ ಸ್ವಾಮೀಜಿಗಳು ಒಗ್ಗಟ್ಟಾಗಿ ಅದರ ವಿರುದ್ಧ ದನಿ ಎತ್ತಬೇಕು ಎಂದರು.
ಹುನ್ನಾರ: ಹಿಂದೂಗಳನ್ನು ಒಡೆಯುವ ಹುನ್ನಾರ ಅತ್ಯಂತ ವ್ಯವಸ್ಥಿತ ರೀತಿಯಿಂದ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಶ್ರೀಗಳು, ಲಿಂಗಾಯತರು ಬೇರೆ ವೀರಶೈವರು ಬೇರೆ ಎಂಬುದು ಸರಿಯಲ್ಲ. ಸನಾತನ ಸಂಸ್ಕೃತಿಯಂತೆ ಪೂಜೆ ಪುನಸ್ಕಾರ ಮಾಡುವವರೆಲ್ಲರೂ ಹಿಂದೂಗಳೆ ಎಂದು ದೇಶದ ಸರ್ವೋಚ್ಚ ನ್ಯಾಯಾಲಯವೇ ತೀರ್ಪು ನೀಡಿದೆ ಎಂದರು.
ತಪ್ಪಲ್ಲ: ಮೂಢನಂಬಿಕೆ ನಿಷೇಧ ಚರ್ಚೆಯಲ್ಲಿ, ಇಷ್ಟ ದೇವರಿಗೆ ಕುರಿ, ಕೊಳಿ ಬಲಿ ಕೊಡುವುದು ತಪ್ಪಲ್ಲ ತಾವು ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡ ಶ್ರೀಗಳು, ಕುರಿ ಮತ್ತು ಕೋಳಿ ಆಹಾರದ ಒಂದು ಭಾಗವಾಗಿವೆ ಎಂದರು. ಪ್ರಾಣಿ ಬಲಿಯನ್ನು ನಿಷೇಧಿಸುವುದಾದರೆ ಸಮಸ್ತ ಭಾರತೀಯರಿಗೆ ಇದು ಅನ್ವಯಿಸುವಂತೆ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು.
ಗದಗ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ನಿರ್ಭಯಾನಂದ ಶ್ರೀಗಳು, ಶಕ್ತಿ ಇಲ್ಲದ ಸಜ್ಜನಿಕೆ, ಧರ್ಮ, ಯೋಗ ಹಾಗೂ ದೇವರನ್ನು ಕಸದ ಬುಟ್ಟಿಗೆ ಎಸೆಯಿರಿ ಎಂದು ಸ್ವಾಮಿ ವಿವೇಕಾನಂದ ವಾಣಿಯನ್ನು ಇಂದು ನಾವೆಲ್ಲರೂ ನೆನಪಿಸಿಕೊಳ್ಳಬೇಕಿದೆ ಎಂದರು. ತಾಳ್ಮೆ ಹಾಗೂ ಸಹನೆಗೆ ಮಿತಿ ಮೀರಿದಾಗ ಇವುಗಳಿಗೆ ಅಂಟಿಕೊಂಡು ರಣಹೇಡಿಗಳಾಗದೆ ನಮ್ಮತನವನ್ನು ಉಳಿಸಿಕೊಳ್ಳಲು ವೀರಾವೇಷದಿಂದ ಹೋರಾಡಬೇಕು. ಇದಕ್ಕಾಗಿ ಹಿಂದೂಗಳೆಲ್ಲರೂ ಒಗ್ಗಟ್ಟಾಗಬೇಕೆಂದರು.
ಚಿತ್ರದುರ್ಗ ಬಂಜಾರ ಸಮಾಜದ ಶ್ರೀ ಸೇವಾಲಾಲ ಶ್ರೀಗಳು, ನಾಗನೂರಿನ ಸಾಧ್ವಿ ಬಸವಗೀತಾ ಶ್ರೀಗಳು, ಹೊಸಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಮಾತನಾಡಿದರು.
ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ರಘುವೀರಾನಂದ ಶ್ರೀಗಳು, ಶ್ರೀ ಪ್ರಣವಾನಂದ ಶ್ರೀಗಳು, ವೀರಸಂಗೊಳ್ಳಿ ರಾಯಣ್ಣ ಚಲನಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ, ಡಾ. ಈಶ್ವರಗೌಡ ಪಾಟೀಲ, ಗೌರಿಶಂಕರ ಮೋಟ, ಗಂಗಾಧರ ಕುಲಕರ್ಣಿ, ಮನೋಜ ಹಾನಗಲ್, ಕಮಲಾ ಜೇಡರ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಡಾ. ಗಂಗೂಬಾಯಿ ಹಾನಗಲ್ ಮ್ಯುಸಿಕ್ ಫೌಂಡೇಶನ್ ವತಿಯಿಂದ 250 ಕಲಾವಿದರು ಆಕರ್ಷಕ ಸಮೂಹ ಗಾಯನ ಪ್ರಸ್ತುತ ಪಡಿಸಿದರು.