ಅಂತಾರಾಷ್ಟ್ರೀಯ ಕರಾಟೆ: ಕುಂದೂರ ಸೋದರಿಯರ ಆಯ್ಕೆ
ಕುಂದಗೋಳ: ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಾಲೂಕಿನ ಗುಡಗೇರಿ ಗ್ರಾಮದ ಸಹೋದರಿಯರಿಬ್ಬರು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಸುಮಾ ಹಾಗೂ ರಶ್ಮಿ ಕುಂದೂರ ಸಹೋದರಿಯರೇ, ಫೆ. 8 ಮತ್ತು 9 ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸೆಣಸಲಿದ್ದಾರೆ.
ಜೆಎಸ್ಎಸ್ನ ದೈಹಿಕ ಶಿಕ್ಷಕ ರಮೇಶ ಸೊಲ್ಲಾಪೂರ ಸಹೋದರಿಯರಿಗೆ ತರಬೇತಿ ನೀಡಿದ್ದರೆ, ಡಾ. ಅಜಿತಪ್ರಸಾದ, ಡಾ. ಎನ್. ವಜ್ರಕುಮಾರ ಮತ್ತು ರಂಜನಿದಾಸ ಪ್ರೋತ್ಸಾಹ ನೀಡಿದ್ದಾರೆ.
ಧಾರವಾಡದ ಜೆಎಸ್ಎಸ್ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಸಹೋದರಿಯರು, ವಿದ್ಯಾಭ್ಯಾಸದೊಂದಿಗೆ ಕರಾಟೆಯಲ್ಲಿಯೂ ಉತ್ತಮ ಸಾಧನೆಗೈಯುವ ಮೂಲಕ ಶಾಲೆಯ ಹಾಗೂ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ.
ಈ ಕುರಿತಂತೆ ಕನ್ನಡಪ್ರಭದೊಂದಿಗೆ ಮಾತನಾಡಿದ ಸುಮಾ ಮತ್ತು ರಶ್ಮಿ, ಪಾಲಕರ ಹಾಗೂ ಶಿಕ್ಷಕರ ಸಹಾಯ-ಸಹಕಾರದಿಂದ ತಮಗೆ ಕರಾಟೆಯಲ್ಲಿ ಸಾಧನೆಗೈಯಲು ಸಾಧ್ಯವಾಗಿದೆ ಎಂದು ಹೇಳಿದರು.
ಕರಾಟೆ ಕಲಿಯುವುದರಿಂದ ಮಾನಸಿಕ ಹಾಗೂ ಶಾರೀರಿಕವಾಗಿ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗುವುದಲ್ಲದೆ, ಸ್ವರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ಹೆಮ್ಮೆಯಿಂದ ನುಡಿದರು.