ಕುಂಟುತ್ತಿದೆ ರು. 800 ಕೋಟಿ ಯೋಜನೆ
ಅಂದ ಹಾಗೆ, ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಒಳಚರಂಡಿ ವ್ಯವಸ್ಥೆಯೇ ಇದ್ದಿರಲಿಲ್ಲ ಎಂದೇನಲ್ಲ. ಆದರೆ ಈ ಯೋಜನೆ ಕೈಗೊಳ್ಳುವ ಪೂರ್ವದಲ್ಲಿದ್ದದ್ದು ಓಬೇರಾಯನ ಕಾಲದ ವ್ಯವಸ್ಥೆ. ಈ ಹಳೆಯ ಒಳಚರಂಡಿಯಿಂದಾಗಿ ಮ್ಯಾನ್‌ಹೋಲ್ ತುಂಬಿ ಹರಿಯುವುದು, ಒಳಚರಂಡಿ ಪೈಪ್ ಒಡೆದು ನೀರು ಹರಿಯುವುದು, ಕುಡಿಯುವ ನೀರಿನೊಂದಿಗೆ ಒಳಚರಂಡಿ ನೀರು ಹರಿಯುವುದು ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಹಳೆಯ ಒಳಚರಂಡಿ ವ್ಯವಸ್ಥೆ ಹುಟ್ಟು ಹಾಕಿತ್ತು. ಪ್ರಸ್ತುತ ಹೆಚ್ಚಿದ ಜನಸಂಖ್ಯೆಯಿಂದಾಗಿ ಹಳೆಯ ಒಳಚರಂಡಿಗೆ ಧಾರಣಾಶಕ್ತಿ ಇದ್ದಿರಲಿಲ್ಲ. ಇದನ್ನು ಮನಗಂಡು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಒಳಚರಂಡಿಗೆ ಕಾಯಕಲ್ಪ ನೀಡಬೇಕೆಂಬ ನಿರ್ಧಾರಕ್ಕೆ ಬಂತು.
ಗೋವಾ, ಮುಂಬೈ ಮಾದರಿ: ಪಾಲಿಕೆ ಸಭೆಯಲ್ಲಿ ಒಳಚರಂಡಿ ವ್ಯವಸ್ಥೆಗೆ ಕಾಯಕಲ್ಪ ಒದಗಿಸಬೇಕೆಂಬ ಅಭಿಪ್ರಾಯ ವ್ಯಕ್ತವಾದ ಬಳಿಕ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಬೇರೆ ರಾಜ್ಯಗಳಿಗೆ ತೆರಳಿ ಅಲ್ಲಿನ ಒಳಚರಂಡಿ ವ್ಯವಸ್ಥೆ ಹಾಗೂ ನಿರ್ವಹಣೆ ಅಧ್ಯಯನಕ್ಕೆ ಮುಂದಾದರು. ಮುಂಬೈ ಹಾಗೂ ಗೋವಾ ರಾಜ್ಯದಲ್ಲಿ ಪ್ರವಾಸ ಕೈಗೊಂಡರು. ಕೆಲ ಅಧಿಕಾರಿಗಳು ಗುಜರಾತಕ್ಕೂ ಹೋಗಿ ಬಂದರು. ಅಂತಿಮವಾಗಿ ಗೋವಾ ಹಾಗೂ ಮುಂಬೈ ಮಾದರಿಯಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ಯೋಜನೆ ಕೈಗೆತ್ತಿಕೊಳ್ಳಲು ನಿರ್ಣಯಿಸಿದರು.
ರು. 800 ಕೋಟಿ ಯೋಜನೆ: ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಆಯ್ದ ಭಾಗಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಈ ಯೋಜನೆ ಸಿದ್ಧವಾಗಿದ್ದು 2011ರ ಮಾರ್ಚ್‌ನಲ್ಲಿ. ಕರ್ನಾಟಕ ನಗರ ನೀರು ಮತ್ತು ಒಳಚರಂಡಿ ಅಭಿವೃದ್ಧಿ ನಿಗಮ ಈ ಯೋಜನೆಯ ಹೊಣೆ ಹೊತ್ತಿದೆ. ಅವಳಿ ನಗರಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಯೋಜನೆಯ ವಿವರ ಸಿದ್ಧಪಡಿಸುವುದರೊಂದಿಗೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆಯಲಾಯಿತು. ಒಟ್ಟು ರು. 800 ಕೋಟಿಯ ಯೋಜನೆ ಇದಾಗಿದ್ದು, ಯೋಜನೆಯ ಶೇ. 10ರಷ್ಟು ಭಾಗ ಪಾಲಿಕೆ ಭರಿಸಲಿದೆ. ಇನ್ನುಳಿದ ಮೊತ್ತಕ್ಕೆ ಎಡಿಬಿ ಸಾಲ ಕೋರಲಾಗಿದೆ. ಯೋಜನೆಗೆ ಈವರೆಗೆ ರು. 160 ಕೋಟಿ ಮಾತ್ರ ಬಿಡುಗಡೆಯಾಗಿದೆ.
ಆಮೆಗತಿಯಲ್ಲಿ ಕಾಮಗಾರಿ: ಕಳೆದ ಮಾರ್ಚ್‌ನಲ್ಲಿ ಆರಂಭವಾಗಿರುವ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ಈ ಕಾಮಗಾರಿ ವಿಳಂಬದಿಂದಾಗಿ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ರೈಲ್ವೆ ನಿಲ್ದಾಣ ಭಾಗದಲ್ಲಂತೂ ಓಡಾಡುವುದೇ ದುಸ್ತರವಾಗಿತ್ತು. ರಸ್ತೆಯ ಮಧ್ಯದಲ್ಲಿಯೇ ಒಳಚರಂಡಿ ಪೈಪ್ ಹಾಕಲು ರಸ್ತೆ ಅಗೆದ ಪರಿಣಾಮ ಹುಬ್ಬಳ್ಳಿ-ಧಾರವಾಡದಲ್ಲಿ ಧೂಳು ಗೋಳು ಸೃಷ್ಟಿಸಿತ್ತು. ಕಾಮಗಾರಿ ಇನ್ನೂ ಮುಗಿಯದಿರುವ ಪರಿಣಾಮ ಜನ ಪರದಾಡುವುದು ತಪ್ಪಿಲ್ಲ.
2041ರ ಜನಸಂಖ್ಯೆಯಾಧರಿಸಿ
ಗಮನಾರ್ಹ ಸಂಗತಿಯೆಂದರೆ ಇದೀಗ ಕೈಗೆತ್ತಿಕೊಂಡಿರುವ ಒಳಚರಂಡಿ ಯೋಜನೆ ಭವಿಷ್ಯದ 2041ರ ಜನಸಂಖ್ಯೆಯನ್ನಾಧರಿಸಿ ಕೈಗೆತ್ತಿಕೊಳ್ಳಲಾಗಿದೆ. ಈ ಹಿಂದೆಯೂ ಒಳಚರಂಡಿ ವ್ಯವಸ್ಥೆ ಇತ್ತಾದರೂ ದೀರ್ಘಕಾಲಿಕ ಯೋಚನೆಯ ಕೊರತೆಯಿಂದಾಗಿ ಎಡವಿತ್ತು. ಆದರೀಗ ಕೈಗೆತ್ತಿಕೊಂಡಿರುವ ಯೋಜನೆಯಿಂದ ಈ ಹಿಂದಿನ ದಿನಗಳಲ್ಲಿ ಉದ್ಭವಿಸುತ್ತಿದ್ದ ಸಮಸ್ಯೆ ಎದುರಾಗಲಾರದು.
ಬಳಕೆಗೆ ಯೋಗ್ಯ ನೀರು
ಒಳಚರಂಡಿಯ ಕೊಳಚೆ ನೀರು ಹರಿದು ಹೋಗಿ ಸಂಗ್ರಹವಾಗುವುದು ಎಸ್‌ಟಿಪಿ ಪ್ಲಾಂಟ್‌ನಲ್ಲಿ. ಅಲ್ಲಿ ಶುದ್ಧೀಕರಣ ಪ್ರಕ್ರಿಯೆ ನಡೆಯುತ್ತದೆ. ವಿಶೇಷತೆಯೆಂದರೆ ಈ ಘಟಕದಿಂದಾಗಿ ಸುತ್ತಲಿನ ಜನತೆಗೆ ದುರ್ವಾಸನೆ, ಕೊಳಚೆ ನೀರಿನಿಂದ ಅನಾನುಕೂಲತೆಯಾಗದು. ಬದಲಿಗೆ ಎಸ್‌ಟಿಪಿ ಪ್ಲಾಂಟ್‌ನಿಂದ ಶುದ್ಧೀಕರಣ ಪ್ರಕ್ರಿಯೆಯಾದ ಬಳಿಕ ಹೊರ ಬರುವ ನೀರನ್ನು ತೋಟಕ್ಕೆ, ಹೊಲಕ್ಕೆ, ಬಟ್ಟೆ ಬರೆ ತೊಳೆಯಲೂ ಬಳಸಬಹುದು. ಆದರೆ ಈ ನೀರು ಕುಡಿಯಲು ಯೋಗ್ಯವಲ್ಲ.