ಕುಸಿದ ತರಕಾರಿ ಬೆಲೆ
ಟೋಮೆಟೋ ಪ್ರತಿ ಕೆ.ಜಿ.ಗೆ ರು. 5, ಬದನೆ ಕೆ.ಜಿ.ಗೆ ರು. 5, ಮೆಣಸಿನಕಾಯಿ ಕೆ.ಜಿ.ಗೆ ರು. 15ರಿಂದ 20. ಇನ್ನು, ಒಂದು ಹೂಕೋಸಿಗೆ ರು. 5, ಎರಡು ಕ್ಯಾಬೆಜ್ಗೆ ರು. 10...
ಆಶ್ಚರ್ಯವೆನಿಸಿದರೂ ಇದು ಸತ್ಯ. ಇತ್ತೀಚೆಗೆ ಗ್ರಾಹಕರಿಗೆ ಕಣ್ಣೀರು ತರಿಸಿದ್ದ ಈರುಳ್ಳಿ ಬೆಲೆ ಸಹ ಪೂರ್ತಿ ಇಳಿಮುಖವಾಗಿದ್ದು, ರು. 10ಕ್ಕೆ ಕೆ.ಜಿ. ಈರುಳ್ಳಿ ದೊರೆಯುತ್ತಿದೆ. ಹೀಗೆ ಸೌತೆಕಾಯಿ, ಹಿರೇಕಾಯಿ ಸೇರಿದಂತೆ ಕೆಲವೇ ಕೆಲವು ತರಕಾರಿಗಳ ಬೆಲೆ ಕೆಜಿ ರು. 40 ಇದೆ. ಬಹುತೇಕ ತರಕಾರಿಗಳ ಬೆಲೆ ಕೆ.ಜಿ.ಗೆ ರು. 10ರಿಂದ 15 ದಾಟುತ್ತಿಲ್ಲ. ಧಾರವಾಡದ ಮಾರುಕಟ್ಟೆಗೆ ಕೈ ಚೀಲ ಹಿಡಿದು ಹೋಗು-ಬರುವವರನ್ನು ತರಕಾರಿ ವ್ಯಾಪಾರಸ್ಥರು ಕೈ ಬೀಸಿ ಕರೆದು ತರಕಾರಿ ತುಂಬಿಸುತ್ತಿದ್ದಾರೆ.
ಸೋವಿಯಾದ ಸೊಪ್ಪು: ಸಗಟು ಖರೀದಿದಾರರಿಗೆ ಈ ತರಕಾರಿ ಇನ್ನೂ ಕಡಿಮೆ ದರದಲ್ಲಿ ಸಿಗುತ್ತಿದೆ. ಆದರೆ ತರಕಾರಿ ಬೆಳೆದ ರೈತ ಕಂಗಾಲಾಗಿದ್ದಾನೆ. ಇದಲ್ಲದೇ, ವಿವಿಧ ಸೊಪ್ಪುಗಳ ಬೆಲೆ ಸಹ ಕುಸಿದಿದ್ದು, ರು. 5ಕ್ಕೆ ಎರಡೆರೆಡು ಸೊಪ್ಪು (ಕೋತಂಬರಿ, ಪುದೀನಾ, ಮೇಂತೆ ಇತ್ಯಾದಿ) ನೀಡುತ್ತಿದ್ದಾರೆ ವ್ಯಾಪಾರಸ್ಥರು. ಉತ್ತಮ ಗುಣಮಟ್ಟದ ತರಕಾರಿ ಇದ್ದರೂ ಸಹ ಬೆಲೆ ಇಲ್ಲದಂತಾಗಿದೆ. ದಿನದ ಕೊನೆಗೆ ಮಾರಾಟವಾಗದೇ ಉಳಿಯದ ತರಕಾರಿ ಕಸದ ತೊಟ್ಟಿ ಸೇರುತ್ತಿದೆ.
ಗ್ರಾಹಕ ಖುಷ್, ಆತಂಕದಲ್ಲಿ ರೈತ: ಕಳೆದ ಎರಡು ತಿಂಗಳ ಹಿಂದೆ ಗಗನಕ್ಕೆ ಏರಿದ್ದ ತರಕಾರಿ ಬೆಲೆ ಇಳಿಮುಖವಾಗಿದೆ. ಈರುಳ್ಳಿಯಂತೂ ಪ್ರತಿ ಕೆ.ಜಿ.ಗೆ 60 ರಿಂದ 70ರ ವರೆಗೂ ಬೆಲೆ ಕಂಡಿತ್ತು. ಅದೇ ರೀತಿ ಉಳಿದ ತರಕಾರಿ ಬೆಲೆಯೂ ಏರಿಕೆಯಾಗಿತ್ತು. ಇದೀಗ ಧಾರವಾಡ ಸುತ್ತಮುತ್ತಲಿನ ರೈತರು ಒಮ್ಮೆಲೆ ತರಕಾರಿ ಬೆಳೆದು ಮಾರುಕಟ್ಟೆಗೆ ತಂದ ಕಾರಣ ಏಕಾಏಕಿ ಬೆಲೆ ಕುಸಿದಿದೆ. ತರಕಾರಿ ಬೆಲೆ ಕೇಳಿದ ಗ್ರಾಹಕರು ಸಂತಸಗೊಂಡಿದ್ದರೆ, ಇದು ರೈತನಿಗೆ ಆತಂಕ ಸೃಷ್ಟಿಸಿದೆ. ನೀರಾವರಿ ಮಾಡುವ ಮೂಲಕ ಸಾಕಷ್ಟು ಖರ್ಚು ಮಾಡಿ ಬೆಳೆದ ತರಕಾರಿ ನೆಲದ ಪಾಲಾಗುತ್ತಿದ್ದು, ರೈತ ಮಮ್ಮಲ ಮರಗುತ್ತಿದ್ದಾನೆ. ಹೆಬ್ಬಳ್ಳಿ, ಅಮ್ಮಿನಬಾವಿ, ಶಿಬಾರಗಟ್ಟಿ, ಯಾದವಾಡ ಹೀಗೆ ವಿವಿಧ ಗ್ರಾಮಗಳಲ್ಲಿ ಬೆಳೆದ ತರಕಾರಿಗೆ ಬೆಲೆ ಇಲ್ಲದಂತಾಗಿದೆ.
ಇಷ್ಟು ದಿನ ತರಕಾರಿಯನ್ನು ರೈತರಿಂದ ಕಡಿಮೆ ಬೆಲೆಗೆ ಸವಾಲಿನ ಮೂಲಕ ಖರೀದಿಸಿ ಲಾಭ ಮಾಡಿಕೊಳ್ಳುತ್ತಿದ್ದ ದಲ್ಲಾಳಿಗಳು ಏಕಾಏಕಿ ತರಕಾರಿ ಬೆಲೆ ಇಳಿದ ಕಾರಣ ಸಪ್ಪೆ ಮುಖ ಮಾಡಿದ್ದಾರೆ. ಕಳೆದ ವಾರದಿಂದ ಈ ರೀತಿ ಬೆಲೆ ಇಳಿಮುಖವಾಗಿದ್ದು, ಮಾರುಕಟ್ಟೆಗೆ ಸುತ್ತಮುತ್ತಲಿನ ಸಾಕಷ್ಟು ತರಕಾರಿ ಬರುತ್ತಿದೆ. ಆದರೆ, ಗ್ರಾಹಕರೇ ಇಲ್ಲವಾಗಿದ್ದಾರೆ. ರೈತರಿಂದ ಖರೀದಿಸಿದ ಅರ್ಧದಷ್ಟು ಸಹ ತರಕಾರಿ ಮಾರಾಟವಾಗದೇ ನಷ್ಟವಾಗುತ್ತಿದೆ ಎನ್ನುತ್ತಾರೆ ವ್ಯಾಪಾರಸ್ಥ ರಫೀಕ್.
ಕಳೆದ ಎರಡು ತಿಂಗಳ ಹಿಂದೆ ತರಕಾರಿ ಬೆಲೆ ಕೈಗೆಟುಕದಂತಾಗಾಗ ತರಕಾರಿ ವ್ಯಾಪಾರಸ್ಥರ ಮನೋಭಾವನೆಯೇ ಬದಲಾಗಿತ್ತು. ಬೆಲೆಯಲ್ಲಿ ಇಳಿಕೆ ಮಾಡುವಂತೆ ಗ್ರಾಹಕರು ಕೇಳಿದರೆ, ಬೇಕಿದ್ದರೆ ಖರೀದಿಸಿ, ಬೇಡವಾದರೆ ಬಿಡಿ ಎಂಬ ಅನಾದರ ಭಾವನೆ ಸಾಮಾನ್ಯವಾಗಿತ್ತು. ಬದಲಾದ ಪರಿಸ್ಥಿತಿ ಹಿನ್ನೆಲೆಯಲ್ಲಿ ಗ್ರಾಹಕರನ್ನು ಕರೆದು, ಗೋಗರೆದು ತರಕಾರಿ ಮಾರುವ ಸ್ಥಿತಿ ನಿರ್ಮಾಣವಾಗಿದೆ. ಒಟ್ಟಿನಲ್ಲಿ ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎನ್ನುವಂತೆ ತರಕಾರಿ ಮಾರುಕಟ್ಟೆ ಸ್ಥಿತಿ ಏಕಾಏಕಿ ಬದಲಾಗಿರುವುದು ಎಷ್ಟೋ ದಿನಗಳ ನಂತರ ಗ್ರಾಹಕರ ಮುಖದಲ್ಲಿ ನೆಮ್ಮದಿ ಕಾಣುವಂತೆ ಮಾಡಿದೆ.