ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನಾಳೆಯಿಂದ ಉಳವಿ ಚೆನ್ನಬಸವೇಶ್ವರ ಜಾತ್ರೆ

Srinivasa Murthy VN
Updated On : 5 Feb 2014, 12:20 pm

ಧಾರವಾಡ: ಜೋಯಿಡಾ ತಾಲೂಕಿನ ಉಳವಿ ಚನ್ನಬಸವೇಶ್ವರ ಜಾತ್ರಾ ಮಹೋತ್ಸವ ಫೆ. 6ರಿಂದ 17ರವರೆಗೆ ಜರುಗಲಿದೆ ಎಂದು ಉಳವಿ ಶ್ರೀ ಚನ್ನಬಸವೇಶ್ವರ ಟ್ರಸ್ಟ್ ಕಮೀಟಿ ಅಧ್ಯಕ್ಷ ಗಂಗಾಧರ ಕಿತ್ತೂರ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 6ರಂದು ರಥಸಪ್ತಮಿ, ಷಟ್‌ಸ್ಥಲ ಧ್ವಜಾರೋಹಣ, 7ರಂದು ಮಹಾರುದ್ರ ಪಲ್ಲಕ್ಕಿ ಉತ್ಸವ ನಡೆಯಲಿವೆ. 14ರಂದು ಭಾರತ ಹುಣ್ಣಿಮೆ, 15ರಂದು ಚನ್ನಬಸವೇಶ್ವರ ರಥೋತ್ಸವ ಜರುಗಲಿದೆ. 16ರಂದು ಬಯಲು ಕಣ ಕುಸ್ತಿ, 17ರಂದು ಜಾತ್ರಾ ಸಮಾರೋಪ ನಡೆಯಲಿದೆ ಎಂದರು.
14ರಂದು ಬೆಳಗ್ಗೆ 11ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ದಿ. ಡಾ. ಸ.ಜ. ನಾಗಲೋಟಿಮಠರಿಗೆ ಚನ್ನಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಡಾ. ವಿಶ್ವನಾಥ ಪಾಟೀಲ, ಸಿ.ಎಂ. ಉದಾಸಿ ಭಾಗವಹಿಸುತ್ತಾರೆ ಎಂದರು.
15ರಂದು ಸಂಜೆ 4ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡುವರು. ಮುಖ್ಯ ಅತಿಥಿಯಾಗಿ ಮುಜರಾಯಿ ಇಲಾಖೆ ಸಚಿವ ಪ್ರಕಾಶ ಹುಕ್ಕೇರಿ ಆಗಮಿಸುವರು ಎಂದು ಗಂಗಾಧರ ಕಿತ್ತೂರ ವಿವರ ನೀಡಿದರು.
ಟ್ರಸ್ಟ್ ಕಮಿಟಿಯ ಸಂಜಯ ಕಿತ್ತೂರ, ಉಳವಿ ಸುಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು ಸರ್ಕಾರವೂ ಸಾಕಷ್ಟು ಸಹಕಾರ ನೀಡಿದೆ. ರು. 4 ಕೋಟಿ ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ರು. 1 ಕೋಟಿ ಬಿಡುಗಡೆಯಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಪ್ರವಾಸೋದ್ಯಮ ಇಲಾಖೆ ವತಿಯಿಂದ ರು. 50 ಲಕ್ಷ ವೆಚ್ಚದಲ್ಲಿ ಯಾತ್ರಿನಿವಾಸ ಕಾಮಗಾರಿಯೂ ಆರಂಭವಾಗಿದೆ. ಗಡಿನಾಡು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ರು. 38 ಲಕ್ಷ ವೆಚ್ಚದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಗೊಳ್ಳುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಅವರು ಉಳವಿಯಲ್ಲಿ ಕುಡಿಯುವ ನೀರಿಗಾಗಿ ರು. 95 ಲಕ್ಷ ವೆಚ್ಚದಲ್ಲಿ ಬಾಂದಾರ, ನೀರು ಶುದ್ಧೀಕರಣ ಘಟಕಕ್ಕೆ ಇತ್ತೀಚೆಗೆ ಚಾಲನೆ ನೀಡಿದ್ದಾರೆ. ಗರ್ಭಗುಡಿ ಛಾವಣಿಯನ್ನು ತೇಗದ ಕಟ್ಟಿಗೆಗಳಿಂದ ನವೀಕರಿಸಲಾಗಿದೆ. ದೇವಸ್ಥಾನ ಆವರಣ ಸುತ್ತಲೂ ಕಲ್ಲು ಹಾಸು ಹಾಕಲಾಗಿದೆ. ಭಕ್ತಾದಿಗಳ ನೆರವಿನಿಂದ ಕಳೆದೆರಡು ತಿಂಗಳಿಂದ ಸುಕ್ಷೇತ್ರದಲ್ಲಿ ಬೆಳಗ್ಗೆ ಚಹ-ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಲಿಂಗರಾಜ ಕಂಬಳಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement