ಮನಸ್ಸು ಸ್ವಚ್ಛವಾಗಿಟ್ಟುಕೊಳ್ಳಿ
ನವಲಗುಂದ: ಮನಸ್ಸನ್ನು ಕನ್ನಡಿ ಹಾಗೆ ಇಟ್ಟುಕೊಂಡಾಗ ಮಾತ್ರ ಸಾಮಾಜಿಕ ಬದುಕಿನಲ್ಲಿ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಲು ಸಾಧ್ಯ ಎಂದು ಹುಬ್ಬಳ್ಳಿಯ ನೆಹರು ಕಾಲೇಜ್ನ ಕನ್ನಡ ವಿಭಾಗದ ಶಿಕ್ಷಕ ಡಾ. ಎಸ್.ಐ. ಕಳಕಣ್ಣವರ ಹೇಳಿದರು.
ಇಲ್ಲಿನ ಹುರಕಡ್ಲಿ ಅಜ್ಜನವರ ಪುಣ್ಯಾಶ್ರಮದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ಜಾನಪದ ಪರಿಷತ್ನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪುಣ್ಯದಂತೆ ಬಂದವರು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆದ್ದರಿಂದ ನಾವೆಲ್ಲರೂ ಉತ್ತಮರಾಗಿ ಬಾಳಿದಾಗ ಮಾತ್ರ ಸಮಾಜವೂ ಉತ್ತಮವಾಗಿರಲಿ ಎಂದೂ ಅವರು ಮಾರ್ಮಿಕವಾಗಿ ನುಡಿದರು.
ಅಧ್ಯಕ್ಷತೆವಹಿಸಿದ್ದ ತಾಲೂಕು ಶರಣ ಸಾಹಿತ್ಯ ಪರಿಷತ್ನ ಅಧ್ಯಕ್ಷ ಪ್ರೊ. ಸಿ.ಎಸ್. ಹೊಸಮಠ, ಧರ್ಮದ ಸ್ಥಾನದಲ್ಲಿ ಜಾತಿಗಳು ಬಂದು ನಿಂತು ನಮ್ಮಲ್ಲಿ ಒಡಕವನ್ನುಂಟು ಮಾಡಿತ್ತೀವೆ. ನಮಗೆ ಬೇಕಾಗಿದ್ದು ಮಾನವ ಧರ್ಮ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕೆಂದರು.
ಸರ್ಕಾರಿ ಪದವಿ ಕಾಲೇಜ್ನ ಪ್ರಾಚಾರ್ಯ ಪ್ರೊ. ನಿಡವಣಿ, ಉಮೇಶ ಶಿರೋಳ ಮಾತನಾಡಿದರು. ಟಿ.ವಿ. ಮಹಾಂತೇಶ, ಶ್ರೀಶೈಲಪ್ಪ ನಿಡವಣಿ, ಸದುಗೌಡ ಪಾಟೀಲ, ದೇವಪ್ಪ ಯರಗುಪ್ಪಿ, ರುದ್ರಪ್ಪ ಶಿರೋಳ, ಎಸ್.ಎಸ್. ಅಂಗಡಿ, ಬಸವರಾಜ ಹೊನ್ನಕುದರಿ, ಬಸವರಾಜ ಕುಬಸದ ಮತ್ತಿತರರು ಪಾಲ್ಗೊಂಡಿದ್ದರು.
10ರಿಂದ ನವಮತದಾರರ ಜಾಗೃತಿ ಅಭಿಯಾನ
ಹುಬ್ಬಳ್ಳಿ: ಫೆ. 10ರಿಂದ 20ರ ವರೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನಿಂದ ರಾಜ್ಯಾದ್ಯಂತ ನವಮತದಾರರ ಜಾಗೃತಿ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಎಬಿವಿಪಿ ಕಾರ್ಯದರ್ಶಿ ಟಿ.ಎಸ್. ಸುನೀಲಕುಮಾರ್ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಗೃತಿ ಅಭಿಯಾನದ ಅಂಗವಾಗಿ ವಿದ್ಯಾರ್ಥಿ ಪರಿಷತ್ನಿಂದ ಬೀದಿ ನಾಟಕಗಳು, ಕರಪತ್ರ ಹಂಚುವಿಕೆ, ಹಸ್ತಾಕ್ಷರ ಸಂಗ್ರಹ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನವ ಮತದಾರರಲ್ಲಿ, ಅನಕ್ಷರಸ್ಥರಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಲಾಗುವುದು. ಮತದಾನದಿಂದ ಬರುವ ಲೋಕಸಭೆ ಚುನಾವಣೆಗೆ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಈ ಜಾಗೃತಿ ಅಭಿಯಾನ ನಡೆಯಲಿದೆ ಎಂದರು.
ಹುಬ್ಬಳ್ಳಿಯಲ್ಲಿ ಜರುಗಿದ ವಿದ್ಯಾರ್ಥಿ ಪರಿಷತ್ನ ರಾಜ್ಯಮಟ್ಟದ ಸಮಾವೇಶದಲ್ಲಿ ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗಳಿಗೆ ಸಂಬಂಧಿಸಿದಂತೆ ಹಲವಾರು ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದ್ದು, ಈ ತೀರ್ಮಾನಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಬಾವಿಪ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದರು.
ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ನೇಮಕಾತಿ ಸೇರಿದಂತೆ ವಿವಿಧ ವಿಷಯಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ನಡೆದಿರುವ ಅವ್ಯವಹಾರದ ಕುರಿತು ಎಬಿವಿಪಿ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿರುವ ಕುರಿತು ಚರ್ಚೆ ನಡೆಯುತ್ತಿದೆ. ಈ ಅವ್ಯಹಾರದ ಹಿನ್ನೆಲೆಯಲ್ಲಿ ರಾಜಭವನವನ್ನು ಕೂಡ ಸಂಶಯದಿಂದ ನೋಡಲಾಗುತ್ತಿದೆ ಎಂದು ಆರೋಪಿಸಿದರು.
ವಿಶ್ವವಿದ್ಯಾಲಯಗಳ ಸಿಂಡಿಕೇಟ್ಗೆ ರಾಜಕೀಯ ಹಿನ್ನೆಲೆ ಇರುವ ಅಥವಾ ವಿಧಾನಪರಿಷತ್ ಸದಸ್ಯರನ್ನು ನೇಮಕ ಮಾಡಬಾರದು. ಉನ್ನತ ಶಿಕ್ಷಣದಲ್ಲಿ ರಾಜಕೀಯ, ಪಕ್ಷಪಾತನ, ಸ್ವಜಾತಿ ರಾಜಕೀಯ ಭ್ರಷ್ಟಾಚಾರದ ಕೇಂದ್ರವಾಗದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಗರ ಕಾರ್ಯದರ್ಶಿ ಸಿದ್ದು ಸಾಲಿಮಠ, ಜಿಲ್ಲಾ ಪ್ರಮುಖ ವಿನಾಯಕಸಿಂಗ್ ರಜಪೂತ ಇದ್ದರು.