ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮಹಾತ್ಮರ ನಡೆ-ನುಡಿ ಆಚರಣೆಗೆ ಬರಲಿ

Srinivasa Murthy VN
Updated On : 5 Feb 2014, 12:19 pm

ಕುಂದಗೋಳ: ಮಹಾತ್ಮರ ನಡೆ-ನುಡಿಗಳನ್ನು ಆಚರಣೆಯಲ್ಲಿ ತಂದಾಗ ಮಾತ್ರ ಸದ್ಗತಿ ಪಡೆಯಲು ಸಾಧ್ಯ ಎಂದು ಕಲ್ಯಾಣಪುರ ಗ್ರಾಮದ ಬಸಯ್ಯಜ್ಜನವರು ಹೇಳಿದರು. ತಾಲೂಕಿನ ಯರೇಬೂದಿಹಾಳ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ಬಸಯ್ಯಜ್ಜನವರ ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 6ನೇ ಶರಣ ಚಿಂತನ ಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದುಶ್ಚಟಗಳನ್ನು ತೊರೆದು ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಿಸಿಕೊಂಡಾಗ ಜೀವನದಲ್ಲಿ ಪರಿಪೂರ್ಣ ಬರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಪ್ರಾಸ್ತಾವಿಕ ಮಾತನಾಡಿದ ಶಿಕ್ಷಕ ಎಸ್.ಸಿ. ಶಾನವಾಡ, ಬಸವಣ್ಣನವರು ಸಮಾಜದಲ್ಲಿ ಅಂಕು-ಡೊಂಕುಗಳನ್ನು ತಿದ್ದುವ ಮೂಲಕ ಸಮಾನತೆಯ ಸಂದೇಶ ಸಾರಿದ್ದರು. ವೈಜ್ಞಾನಿಕ ಬದುಕಿನಲ್ಲಿ ಮರೆಯಾಗುತ್ತಿರುವ ವೈಚಾರಿಕತೆಯನ್ನು ಹಿಡಿದಿಡುವ ಶಕ್ತಿ ಶರಣ ಪರಂಪರೆಯ ಚಿಂತನೆಗಳಲ್ಲಿ ಇದೆ ಎಂದರು. ತಾಲೂಕು ಶ.ಸಾ.ಪ ಅಧ್ಯಕ್ಷ ಜಿ.ಡಿ. ಘೋರ್ಪಡೆ, ಉಪಾಧ್ಯಕ್ಷ ವೀರೇಶ ಪ್ರಳಯಕಲ್ಮಠ, ರವಿರಾಜ ಕಟ್ಟಿಮನಿ ವಿರೂಪಾಕ್ಷಯ್ಯ ಪೂಜಾರ, ಕಲ್ಲಪ್ಪ ಮಡಿವಾಳರ ಮತ್ತಿತರರಿದ್ದರು.

ಮಧುಮೇಹಿಗಳಿಗೆ ಯೋಗ ಶಿಬಿರ
ಹುಬ್ಬಳ್ಳಿ: ಬೆಂಗಳೂರಿನ ಎಸ್‌ವಿವೈಎಎಸ್‌ಎ ಯೋಗ ವಿಶ್ವವಿದ್ಯಾಲಯದ ವತಿಯಿಂದ ಹುಬ್ಬಳ್ಳಿಯಲ್ಲಿ ಫೆ. 8ರಿಂದ 18ರವರೆಗೆ ಮಧುಮೇಹ ರೋಗಿಗಳಿಗಾಗಿ ವಿಶೇಷ ಯೋಗ ಶಿಬಿರ ಆಯೋಜಿಸಲಾಗಿದೆ. ಹತ್ತು ದಿನ ನಡೆಯುವ ಶಿಬಿರದಲ್ಲಿ ಮಧುಮೇಹದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಎರಡು ಗಂಟೆ ಯೋಗ, ಧ್ಯಾನ ಮುಂತಾದವುಗಳನ್ನು ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿ ಹೇಳಿಕೊಡಲಿದ್ದಾರೆ. ಶಿಬಿರದ ಅವಧಿಯಲ್ಲಿ ಪ್ರತಿದಿನ ಶಿಬಿರ ಆರಂಭಕ್ಕೆ ಮುನ್ನ ಮತ್ತು ನಂತರ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಮೌಲ್ಯಾಂಕನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ 9538826005ನ್ನು ಸಂಪರ್ಕಿಸಬಹುದು.

ಲಾರಿ ಡಿಕ್ಕಿ: ಮಹಿಳೆ ಸಾವು
ಹುಬ್ಬಳ್ಳಿ: ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಸೋಮವಾರ ಮಧ್ಯಾಹ್ನ ಶ್ರೀನಗರ ಕ್ರಾಸ್‌ನಲ್ಲಿ ಸಂಭವಿಸಿದೆ. ಧಾರವಾಡ ಸಿದ್ಧಾರ್ಥ ಕಾಲನಿ ನಿವಾಸಿ ಸುರಯ್ಯಾ ಇಸ್ಮಾಯಿಲ್ ಖತಿಬ್ (55) ಎಂಬುವರೇ ಮೃತಪಟ್ಟ ದುರ್ದೈವಿ. ಧಾರವಾಡದಿಂದ ಹುಬ್ಬಳ್ಳಿಗೆ ಪತಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಸುರಯ್ಯಾಳನ್ನು ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಅವರು ನೆಲಕ್ಕುರುಳಿ ಲಾರಿಯ ಹಿಂಬದಿ ಚಕ್ರದಲ್ಲಿ ಸಿಲುಕಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಘಟನೆ ಸಂಭವಿಸುತ್ತಿದಂತೆಯೇ ಲಾರಿ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಈ ಕುರಿತಂತೆ ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧಾರವಾಡ: ಯುವತಿ ಅಪಹರಣ
ಧಾರವಾಡ: ಇಲ್ಲಿಯ ಕೆಲಗೇರಿಯ ಯುವತಿಯೊಬ್ಬಳ ಅಪಹರಣವಾದ ಕುರಿತು ಉಪ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೆಲಗೇರಿಯ ಹೇಮಾ ಬಾಳಪ್ಪ ಬೇವಿನಕೊಪ್ಪ ಅವರನ್ನು ಶಮಶಾನ ಪೂಜಾರ ತನ್ನ ಗೆಳೆಯರಾದ ಜೇಮ್ಸ್ ಮತ್ತು ಮೇರಿ ಅವರ ನೆರವು ಪಡೆದು ತಮ್ಮ ಮಗಳನ್ನು ಅಪಹರಿಸಿದ್ದಾನೆ ಎಂದು ಯುವತಿಯ ತಾಯಿ ಪಾರ್ವತಿ ದೂರು ದಾಖಲಿಸಿದ್ದಾರೆ.

ವ್ಯಕ್ತಿ  ಕೊಲೆಗೆ ಯತ್ನ
ಧಾರವಾಡ: ತಾಲೂಕಿನ ಕಬ್ಬೇನೂರ ಗ್ರಾಮದಲ್ಲಿ ಭಾನುವಾರ ತಡರಾತ್ರಿ ವ್ಯಕ್ತಿಯೋರ್ವನ ಮೇಲೆ ಕೆಲವರು ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾರೆ. ಕಬ್ಬೆನೂರ ಗ್ರಾಮದ ರಾಮನಗೌಡ ಉರ್ಫ್ ಪ್ರವೀಣಗೌಡ ಶಿವನಗೌಡರ ಹಲ್ಲೆಗೆ ಒಳಗಾದ ವ್ಯಕ್ತಿ. ರಾಮನಗೌಡ ಮನೆಯ ಮುಂದಿನ ಛಾವಣಿಯಲ್ಲಿ ಮಲಗಿದ್ದ ವೇಳೆ ಕೆಲವರು ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement