ಮಹಾತ್ಮಾ ಗಾಂಧೀಜಿ: ವಸ್ತುನಿಷ್ಠ ಅರಿವು ಅಗತ್ಯ
ಕನ್ನಡಪ್ರಭ ವಾರ್ತೆ, ಧಾರವಾಡ, ಫೆ. 3
ಗಾಂಧಿ ಎನ್ನುವ ವ್ಯಕ್ತಿ ನಮ್ಮನ್ನು ಸದಾ ಕಾಲ ಕಾಡುವ ಶಕ್ತಿ. ಅವರನ್ನು ಆರಾಧಿಸುವ ಹಾಗೂ ದ್ವೇಷಿಸುವವರೂ ಇದ್ದಾರೆ. ಗಾಂಧೀಜಿಯವರಲ್ಲಿ ದ್ವಂದ್ವಗಳನ್ನು ಕಾಣುತ್ತೇವೆ. ಆದ್ದರಿಂದ ಅವರ ಅನೇಕ ಮುಖಗಳ ಬಗ್ಗೆ ಹಾಗೂ ಅವರ ಕುರಿತು ವಸ್ತುನಿಷ್ಠವಾಗಿ ತಿಳಿದುಕೊಳ್ಳಬೇಕು ಎಂದು ಸಾಹಿತಿ ಪ್ರೊ. ಆರ್.ವಿ. ಹೊರಡಿ ಹೇಳಿದರು.
ವಿದ್ಯಾವರ್ಧಕ ಸಂಘ ಆಯೋಜಿಸಿದ್ದ ಮಹಾತ್ಮಾ ಗಾಂಧೀಜಿ ಸ್ಮರಣೆ ಹಾಗೂ ಬಳ್ಳಾರಿ ಲೋಹಿಯಾ ಪ್ರಕಾಶನ ಪ್ರಕಟಿಸಿದ ವೆಂಕಟೇಶ ಮಾಚಕನೂರ ಅವರ ಕನ್ನಡ ಅನುವಾದ ಗಾಂಧಿಯೊಂದಿಗೆ ಒಬ್ಬ ನಾಸ್ತಿಕ ಮತ್ತು ರಂಗನಾಥ ಕಂಟನಕುಂಟೆ ಅವರ ಸೇನೆಯಿಲ್ಲದ ಕದನ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಗಾಂಧೀಜಿಯವರು ಬಹಳಷ್ಟು ಬಾರಿ ಸಣ್ಣತನದಿಂದ ವರ್ತಿಸಿದ್ದಾರೆ. ಆದರೆ ದೊಡ್ಡವರ ಸಣ್ಣತನಗಳು ಹಾಗೂ ಸಣ್ಣವರ ದೊಡ್ಡತನಗಳು ಇತಿಹಾಸದಲ್ಲಿ ದಾಖಲಾಗುವುದಿಲ್ಲ. ನೇತಾಜಿ ಅವರು ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದಾಗ ಗಾಂಧೀಜಿ ಉದ್ದೇಶಪೂರ್ವಕವಾಗಿ ಪಟ್ಟಾಭಿ ಸೀತಾರಾಮಯ್ಯ ಅವರನ್ನು ನಿಲ್ಲಿಸಿದರು. ನೇತಾಜಿ ಎದುರು ಪಟ್ಟಾಭಿ ಸೋತಾಗ, ಪಟ್ಟಾಭಿ ಸೋಲು ನನ್ನ ಸೋಲು ಎನ್ನುವ ಮೂಲಕ ಗಾಂಧಿ ಸಣ್ಣತನವನ್ನು ಪ್ರದರ್ಶಿಸಿದರು. ಅವರು ರಾಷ್ಟ್ರಕ್ಕೆ ಪಿತನಾದರೂ ಸ್ವಂತ ಮಗನಿಗೆ ಪಿತ ಆಗಲಿಲ್ಲ. ಅವರಲ್ಲಿ ದೌರ್ಬಲ್ಯಗಳಿದ್ದವು ಎಂಬುದನ್ನು ದಾಖಲೆಗಳಿಂದ ತಿಳಿಯಬಹುದು. ಅವರೊಬ್ಬರಿಂದಲೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ. ಅವರೊಂದಿಗೆ ಸುಭಾಷಚಂದ್ರ ಬೋಸ್, ಭಗತ್ ಸಿಂಗ್, ಲೋಕಮಾನ್ಯ ತಿಲಕ, ಸರ್ದಾರ್ ಪಟೇಲ್ ಮುಂತಾದವರೂ ಕಾರಣೀಭೂತರಾಗಿದ್ದಾರೆ. ಗಾಂಧಿ ಅವರ ಕಾಲದಲ್ಲಿ ಸ್ವಾತಂತ್ರ್ಯ ಸಿಕ್ಕಿದೆ ಅದರಿಂದ ಅವರು ಸ್ವಾತಂತ್ರ್ಯ ಶಿಲ್ಪಿ ಎನಿಸಿದರು ಎಂದು ಪ್ರೊ. ಹೊರಡಿ ಹೇಳಿದರು.
ವೆಂಕಟೇಶ ಮಾಚಕನೂರ ಅವರ ಕನ್ನಡ ಅನುವಾದದ ಗಾಂಧಿಯೊಂದಿಗೆ ಒಬ್ಬ ನಾಸ್ತಿಕ ಕೃತಿ (ಮೂಲ ಗೊರಾ) ಕುರಿತು ಗಾಂಧಿ ಶಾಂತಿ ಪ್ರತಿಷ್ಠಾನ ಕೇಂದ್ರದ ಕಾರ್ಯದರ್ಶಿ ಬಸವಪ್ರಭು ಹೊಸಕೇರಿ ಮಾತನಾಡಿದರು. ಗಾಂಧೀಜಿಯವರು ಮಹಿಳೆಗೆ ಆಸ್ತಿಯಲ್ಲಿ ಹಕ್ಕು ಬೇಡ, ದೇಶಕ್ಕೆ ರೈಲು ಸಂಪರ್ಕ ಬೇಡ, ವೈದ್ಯರು, ವಕೀಲರೂ ನಮಗೆ ಬೇಕಿಲ್ಲ ಎಂದಿದ್ದರು. ಇದನ್ನು ನಾವು ಒಪ್ಪುವುದಿಲ್ಲ. ಆದರೆ, ತಮಗೆ ಅನಿಸಿದ ಸಂಗತಿಗಳು ಮುಂದೆ ಅಪ್ರಸ್ತುತವಾಗಬಹುದು ಎಂಬ ಮಾತನ್ನೂ ಪ್ರಾಮಾಣಿಕವಾಗಿ ಗಾಂಧೀಜಿಯವರು ಹೇಳಿದ್ದರು ಎಂಬುದನ್ನು ಮನಗಾಣಬೇಕು ಎಂದರು. ರಂಗನಾಥ ಕಂಟನಕುಂಟೆ ಅವರ ಸೇನೆಯಿಲ್ಲದ ಕದನ ಕೃತಿ ಕುರಿತು ಲೇಖಕಿ ಡಾ. ವಿನಯಾ ಒಕ್ಕುಂದ ಮಾತನಾಡಿದರು.
ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸಿದ್ದರು. ಕೃತಿಕಾರರಾದ ವೆಂಕಟೇಶ ಮಾಚಕನೂರ ಹಾಗೂ ರಂಗನಾಥ ಕಂಟನಕುಂಟೆ ಕೃತಿ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು. ಸಂಘದ ಕಾರ್ಯಾಧ್ಯಕ್ಷ ಪ್ರೊ. ಬಿ.ವಿ. ಗುಂಜೆಟ್ಟಿ, ಲೋಹಿಯಾ ಪ್ರಕಾಶನದ ಚನ್ನಬಸವಣ್ಣ, ಮೋಹನ ನಾಗಮ್ಮನವರ, ಪ್ರಕಾಶ ಉಡಿಕೇರಿ, ಡಾ. ಗಿರಡ್ಡಿ ಗೋವಿಂದರಾಜ, ಡಾ. ಸರಜೂ ಕಾಟ್ಕರ್, ಡಾ. ಎಂ.ಜಿ. ಗಂಗಾಧರಪ್ಪ, ಡಾ. ಶಿವಾನಂದ ಗಾಳಿ, ಡಾ. ಎಂ.ಡಿ. ವಕ್ಕುಂದ, ಡಾ. ನಾಗರಾಜ ಹಳ್ಳಿಯವರ, ಅನಿಲ ದೇಸಾಯಿ, ಬಸವರಾಜ ಸೂಳಿಭಾವಿ, ವೀರಣ್ಣ ಒಡ್ಡಿನ, ಬಿ.ಡಿ. ಪಾಟೀಲ, ತುಗಶೆಟ್ಟಿ, ಸೋಮಶೇಖರ ಮರಡಿಮಠ, ರಾಮಚಂದ್ರ ದೋಂಗಡೆ ಇದ್ದರು.