ಸಿಬಿಯುಡಿ ಯೋಜನೆಗೆ ಹುಬ್ಬಳ್ಳಿ-ಧಾರವಾಡ
ನಗರಗಳನ್ನು ಸಬಲೀಕರಣಗೊಳಿಸುವ ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಯೋಜನೆಗೆ ಇಡಿ ರಾಜ್ಯದ ನಗರಗಳ ಪೈಕಿ ಹುಬ್ಬಳ್ಳಿ-ಧಾರವಾಡ ಮಹಾನಗರ ಮಾತ್ರ ಆಯ್ಕೆಗೊಂಡಿದೆ.
ಕೇಂದ್ರ ನಗರಾಭಿವೃದ್ಧಿ ಇಲಾಖೆ ಇಡಿ ದೇಶದಲ್ಲಿ ಒಟ್ಟು 30 ನಗರಗಳನ್ನು ಸಬಲೀಕರಣಗೊಳಿಸಲು ಯೋಜನೆ ರೂಪಿಸಿದ್ದು, ಕರ್ನಾಟಕದಿಂದ ಹುಬ್ಬಳ್ಳಿ-ಧಾರವಾಡ ಮಹಾನಗರವೊಂದೇ ಆಯ್ಕೆಯಾಗಿದೆ.
ಭವಿಷ್ಯದ 25-30 ವರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಗರಗಳಲ್ಲಿ ಅವಶ್ಯಕ ಸೌಲಭ್ಯ ಒದಗಿಸುವುದು, ಸ್ಥಳೀಯ ಮಟ್ಟದಲ್ಲಿ ಸಂಪನ್ಮೂಲಗಳ ಕ್ರೋಡೀಕರಣ, ನಗರಗಳ ಬೆಳವಣಿಗೆಗೆ ಮತ್ತಿತರ ಸೌಲಭ್ಯ ಒದಗಿಸುವುದು ಈ ಯೋಜನೆಯಲ್ಲಿ ಅಡಕವಾಗಿವೆ.
ಏಶಿಯನ್ ಡೆವಲಪ್ಮೆಂಟ್ ಬ್ಯಾಂಕ್ ಸಹಕಾರದೊಂದಿಗೆ ಕೇಂದ್ರ ನಗರಾಭಿವೃದ್ಧಿ ಇಲಾಖೆ ನಗರಗಳ ಸಬಲೀಕರಣಕ್ಕೆ ಕೆಪ್ಯಾಸಿಟಿ ಬಿಲ್ಡಿಂಗ್ ಫಾರ್ ಅರ್ಬನ್ ಡೆವಲಪ್ಮೆಂಟ್ (ಸಿಬಿಯುಡಿ) ಎಂಬ ಯೋಜನೆ ರೂಪಿಸಿದೆ.
ಈ ಯೋಜನೆಗಾಗಿ ಆಯ್ಕೆಗೊಂಡಿರುವ 30 ನಗರಗಳನ್ನು ಸಬಲೀಕರಣಗೊಳಿಸಲು ಎರಡು ಹಂತದ ರೂಪರೇಷೆಗಳನ್ನು ಕೇಂದ್ರ ನಗರಾಭಿವೃದ್ಧಿ ಇಲಾಖೆ ರೂಪಿಸಿದೆ. ಮೊದಲನೆಯದಾಗಿ ಆಯ್ದ ನಗರಗಳಿಗೆ ಮೂಲ ಸೌಲಭ್ಯ ಒದಗಿಸಲು ನಿರ್ಧರಿಸಲಾಗಿದೆ. ಎರಡನೇ ಹಂತದಲ್ಲಿ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಾಗೂ ಇತರ ಸಿಬ್ಬಂದಿಗೆ ಆಡಳಿತದ ತರಬೇತಿ ನೀಡಲಾಗುವುದು.
ಎರಡೂ ಹಂತದ ರೂಪರೇಷೆಗಳನ್ನು ಜಾರಿಗೆ ತರಲು ಕೇಂದ್ರ ನಗರಾಭಿವೃದ್ಧಿ ಇಲಾಖೆ ಹೊಸದಿಲ್ಲಿ ಮೂಲದ ಜೆಪಿಎಸ್ಇ ಅಸೋಸಿಯೇಶನ್ ಹಾಗೂ ಹೈದರಾಬಾದ್ನ ಕ್ರಿಸಲ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಹೊಸದಿಲ್ಲಿಯ ಜೆಪಿಎಸ್ಸಿ ಅಸೋಸಿಯೇಶನ್ ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಆಡಳಿತ ವೈಖರಿ ಕುರಿತು ತರಬೇತಿ ನೀಡಲಿದೆ.
ಹೈದರಾಬಾದ್ನ ಕ್ರಿಸಲ್ ಸಂಸ್ಥೆಯು ಪರಿಷ್ಕೃತ ನಗರ ಅಭಿವೃದ್ಧಿ ಯೋಜನೆ (ಸಿಡಿಪಿ) ಸಿದ್ಧಪಡಿಸಲು ಈಗಾಗಲೇ ಅಗತ್ಯ ಮಾಹಿತಿ ಸಂಗ್ರಹಿಸಿದೆ. ಕಳೆದ ಸುಮಾರು ಒಂದೂವರೆ ತಿಂಗಳ ಹಿಂದೆ ಅವಳಿ ನಗರದಲ್ಲಿ ಸರ್ವೇ ಕಾರ್ಯ ನಡೆಸಿದ್ದ ಕ್ರಿಸಲ್ ಸಂಸ್ಥೆಯ ಸಿಬ್ಬಂದಿ, ಭವಿಷ್ಯದ 25-30 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಪರಿಶೀಲಿತ ನಗರ ಅಭಿವೃದ್ಧಿ ಯೋಜನೆಯ ಕರಡು ಸಿದ್ಧಪಡಿಸಿದ್ದಾರೆ.
ಪರಿಷ್ಕೃತ ನಗರ ಅಭಿವೃದ್ಧಿ ಯೋಜನೆಯ ಕರಡು ಕುರಿತ ಚರ್ಚೆ ಫೆ. 12ರ ಬೆಳಗ್ಗೆ 11ಕ್ಕೆ ಇಲ್ಲಿಯ ಕನ್ನಡ ಭವನದಲ್ಲಿ ನಡೆಯಲಿದ್ದು, ಜನಪ್ರತಿನಿಧಿಗಳು, ಹಿರಿಯ ನಾಗರಿಕರು, ಸರ್ಕಾರೇತರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಭವಿಷ್ಯದ ಅವಳಿ ನಗರ ಹೇಗಿರಬೇಕು, ಸ್ಥಳೀಯ ಸಂಸ್ಥೆಯಿಂದ ನಾಗರಿಕರಿಗೆ ಯಾವ ರೀತಿಯ ಸೇವೆ ದೊರೆಯಬೇಕು, ನಗರಗಳಲ್ಲಿ ಬಂಡವಾಳ ಹೂಡಿಕೆಗೆ ಕೈಗೊಳ್ಳಬಹುದಾದ ಕ್ರಮಗಳು, ಆಡಳಿತ ವೈಖರಿಯಲ್ಲಿ ಆಗಬೇಕಾದ ಬದಲಾವಣೆ, ತ್ಯಾಜ್ಯ ನಿರ್ವಹಣೆ, ಸಮರ್ಪಕ ಸಾರಿಗೆ ಮತ್ತಿತರ ವಿಷಯಗಳ ಕುರಿತ ಮಾಹಿತಿ ಹಾಗೂ ಚರ್ಚೆಗಳೂ ಈ ಸಂದರ್ಭದಲ್ಲಿ ನಡೆಯಲಿವೆ.
ಈ ಸಂದರ್ಭದಲ್ಲಿ ನಡೆಯಲಿರುವ ಚರ್ಚೆ, ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ಪರಿಶೀಲಿತ ಸಿಡಿಪಿ ಸಿದ್ಧಗೊಳ್ಳಲಿದೆ. ತರಬೇತಿ, ಪರಿಶೀಲಿತ ನಗರ ಅಭಿವೃದ್ಧಿ ಯೋಜನೆ ಮತ್ತಿತರ ಮಾಹಿತಿಗಳುಳ್ಳ ವರದಿಗಳನ್ನು ಹೊಸದಿಲ್ಲಿಯ ಜೆಪಿಎಸ್ಇ ಅಸೋಸಿಯೇಶನ್ ಹಾಗೂ ಹೈದರಾಬಾದ್ನ ಕ್ರಿಸಲ್ ಸಂಸ್ಥೆಗಳು ಕೇಂದ್ರ ನಗರಾಭಿವೃದ್ಧಿ ಇಲಾಖೆಗೆ ನೀಡಲಿವೆ. ಈ ಎರಡೂ ಸಂಸ್ಥೆಗಳು ನೀಡುವ ವರದಿಯನ್ನಾಧರಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ಮೂಲ ಸೌಲಭ್ಯ ಒದಗಿಸಲು ಬೇಕಾದ ಆರ್ಥಿಕ ಸಹಾಯವನ್ನು ಕೇಂದ್ರ ನಗರಾಭಿವೃದ್ಧಿ ಇಲಾಖೆ ಬಿಡುಗಡೆ ಮಾಡಲಿದೆ.