ಲಾರಿ ಅಪಘಾತ: ಮೃತರ ಕುಟುಂಬಕ್ಕೆ 1 ಲಕ್ಷ ಪರಿಹಾರ
ಹುಬ್ಬಳ್ಳಿ: ಕಲಘಟಗಿ ಬಳಿಯ ಜುಂಜಿನಬೈಲ್ನಲ್ಲಿ ನಡೆದ ಲಾರಿ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 1 ಲಕ್ಷ ಪರಿಹಾರ ನೀಡಲಾಗುವುದು ಹಾಗೂ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್ ತಿಳಿಸಿದರು. ಶುಕ್ರವಾರ ಕಿಮ್ಸ್ಗೆ ಭೇಟಿ ನೀಡಿದ ಅವರು ಗಾಯಾಳುಗಳ ಆರೋಗ್ಯ ವಿಚಾರಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಕಿಮ್ಸ್ ಸಿಬ್ಬಂದಿ ವರ್ಗ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುತ್ತಿದೆ ಎಂದರು.
ಗುರುತು ಪತ್ತೆ: ಲಾರಿ ಅಪಘಾತದಲ್ಲಿ ಮೃತಪಟ್ಟವರನ್ನು ಹಳೆಹುಬ್ಬಳ್ಳಿ ಆನಂದನಗರದ ನಿವಾಸಿ ಅಜಾಜ್ಅಹ್ಮದ ಬಾಲಚಾರ (10), ಹಳೆಹುಬ್ಬಳ್ಳಿ ಸದಾರಕೊಪ್ಪದ ಅಫ್ತಾಬ್ (13), ಹಳೆಹುಬ್ಬಳ್ಳಿ ಅಲ್ತಾಫ್ ಪ್ಲಾಟ್ನ ಮಹ್ಮದಅಕ್ಕಿ ಬೆಂಗೇರಿ (12) ಉತ್ತರಪ್ರದೇಶ ತುಳಸಿಪುರ ಗ್ರಾಮದ ಕುತ್ಬುದ್ದೀನ ಲಾಲ್ಖಾನ್ (12), ಹುಬ್ಬಳ್ಳಿ ಸದಾಶಿವನಗರದ ಅಲ್ಲಾಬಕ್ಷ ನಲ್ಲಾಮಲ್ಲಿಕ್ (15) ಮೃತಪಟ್ಟ ವಿದ್ಯಾರ್ಥಿಗಳು.
ಆರ್ಟಿಇ ಅರ್ಜಿ ಸಲ್ಲಿಕೆ ಅವಧಿ 19ರವರೆಗೆ ವಿಸ್ತರಣೆ
ಬೆಂಗಳೂರು: ಮುಂಬರುವ ಶೈಕ್ಷಣಿಕ ಸಾಲಿನ ಪ್ರವೇಶ ಪ್ರಕ್ರಿಯೆಯ ವೇಳಾಪಟ್ಟಿಯನ್ನು ರಾಜ್ಯ ಸರ್ಕಾರ ಪರಿಷ್ಕರಿಸಿದೆ. ಶಿಕ್ಷಣ ಹಕ್ಕು ಕಾಯಿದೆಯ ಶೇ.25 ಮೀಸಲು ಸೀಟಿಗಾಗಿ ಅರ್ಜಿ ಸಲ್ಲಿಸಲು ಫೆ.19ರವರೆಗೆ ಅವಕಾಶ ನೀಡಲಾಗಿದೆ. ಇದಕ್ಕೂ ಮುಂಚೆ ಫೆ.8 ಕೊನೆಯ ದಿನವಾಗಿತ್ತು. ವೇಳಾ ಪಟ್ಟಿಯನ್ನು ಪರಿಷ್ಕರಿಸಿ ಕೊನೆಯ ದಿನಾಂಕವನ್ನು ಮುಂದೂಡುವಂತೆ ಪಾಲಕರು ಒತ್ತಾಯಿಸಿದ್ದರಿಂದ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರಿಷ್ಕೃತ ವೇಳಾಪಟ್ಟಿ: ಅರ್ಜಿ ಸಲ್ಲಿಸಲು ಕೊನೆಯ ದಿನ- ಫೆ.2
ಅರ್ಜಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳುಹಿಸಿಕೊಡಲು ಕೊನೆಯ ದಿನ- ಫೆ.24 ಬಿಇಒ ಕಚೇರಿಯಿಂದ ಅನುಮೋದಿತ ಪಟ್ಟಿಯನ್ನು ಶಾಲೆಗೆ ಕಳುಹಿಸಲು ಕೊನೆಯ ದಿನ- ಮಾ.3 ಶಾಲೆಗಳಲ್ಲಿ ದಾಖಲು ಪ್ರಕ್ರಿಯೆ ಆರಂಭ- ಮಾ.15.
ತುಮಕೂರಿಗೆ ಇಂದು ಜರ್ಮನಿ ಅಧ್ಯಕ್ಷ
ತುಮಕೂರು: ಜರ್ಮನಿ ದೇಶದ ಅಧ್ಯಕ್ಷ ಜೋಕಿಮ್ ಗೌಕ್ ಅವರು ಶನಿವಾರ ತುಮಕೂರು ಜಿಲ್ಲೆ, ಗುಬ್ಬಿ ತಾಲೂಕಿನ ತ್ಯಾಗಟೂರು ಗ್ರಾಮದಲ್ಲಿರುವ ತೆಂಗಿನ ನಾರಿನ ಘಟಕಕ್ಕೆ ಭೇಟಿ ನೀಡುವರು. ಅಂದು ಮಧ್ಯಾಹ್ನ 2.40ಕ್ಕೆ ಗುಬ್ಬಿ ಹೆಲಿಪ್ಯಾಡ್ಗೆ ಬಂದಿಳಿಯುವ ಜರ್ಮನಿ ಅಧ್ಯಕ್ಷರು 3 ಗಂಟೆಗೆ ತೆಂಗಿನ ನಾರಿನ ಘಟಕಕ್ಕೆ ಭೇಟಿ ನೀಡುವರು. ನಂತರ ಸಂಜೆ 4.40ಕ್ಕೆ ಗುಬ್ಬಿ ಹೆಲಿಪ್ಯಾಡ್ನಿಂದ ಬೆಂಗಳೂರಿಗೆ ನಿರ್ಗಮಿಸುವರು.
ಗರ್ಭಿಣಿ ಸಾವು; ವೈದ್ಯರ ನಿರ್ಲಕ್ಷ್ಯ ಆರೋಪ
ಬಿ.ಸಿ.ರೋಡ್: ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ತುಂಬು ಗರ್ಭಿಣಿ ಗುರುವಾರ ರಾತ್ರಿ ಮೃತಪಟ್ಟಿದ್ದು ಅದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬದವರು ಆರೋಪಿಸಿದ್ದಾರೆ. ಬಿ.ಸಿ. ರೋಡ್ನ ಬೈಪಾಸ್ರಸ್ತೆಯ ಸರ್ಕಾರಿ ನೌಕರರ ಕಾಲೋನಿ ನಿವಾಸಿ ನವೀನ್ ಕುಮಾರ್ ಎಂ. ಎಂಬವರ ಪತ್ನಿ ಚಂಚಲಾಕ್ಷಿ (29) ಮೃತಪಟ್ಟವರು. ಚಂಚಲಾಕ್ಷಿ ಅವರಿಗೆ ವೈದ್ಯರು ಫೆ.4ರಂದು ಹೆರಿಗೆ ದಿನಾಂಕ ನೀಡಿದ್ದು, ಅವರನ್ನು ಬಿ.ಸಿ.ರೋಡ್ನ ಖಾಸಗಿ ಆಸ್ಪತ್ರೆಗೆ ಗುರುವಾರ ಬೆಳಗ್ಗೆ ದಾಖಲಿಸಲಾಗಿತ್ತು. ಸಂಜೆವರೆಗೂ ಆರೋಗ್ಯವಂತರಾಗಿದ್ದ ಚಂಚಲಾಕ್ಷಿ ಅವರಿಗೆ ಹೆರಿಗೆ ನೋವು ಕಾಣಿಸದ ಹಿನ್ನೆಲೆಯಲ್ಲಿ ನೋವು ಬರಿಸುವ ಚುಚ್ಚುಮದ್ದು ನೀಡಲಾಗಿದೆ. ಚುಚ್ಚುಕೆಲ ಕ್ಷಣದಲ್ಲೇ ಅವರ ಮೈಬಣ್ಣ ಕಪ್ಪಾಗತೊಡಗಿದ್ದು, ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮಗು ಸಹ ಮೃತಪಟ್ಟಿದೆ.