ಭೂಸ್ವಾಧೀನ ಪರಿಹಾರ ವಿಳಂಬ: ಧಾರವಾಡ ಎಸಿ ಕಚೇರಿ ಜಪ್ತಿ
ಧಾರವಾಡ: ರೈತರೊಬ್ಬರ ಭೂಸ್ವಾಧೀನದ ಪರಿಹಾರ ಹಣ ನೀಡಲು ವಿಳಂಬ ಮಾಡಿದ ಇಲ್ಲಿನ ಉಪ ವಿಭಾಗಾಧಿಕಾರಿ ಕಚೇರಿಯನ್ನು ನ್ಯಾಯಾಲಯದ ಆದೇಶದ ಪ್ರಕಾರ ಮಂಗಳವಾರ ಜಪ್ತಿ ಮಾಡಲಾಯಿತು. ರೈಲ್ವೆ ಇಲಾಖೆ ಅಭಿವೃದ್ಧಿ ಕಾಮಗಾರಿಗೆ ಧಾರವಾಡ ತಾಲೂಕು ನಾಗಲಾವಿಯ ರೈತನಿಂದ ವಶಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡಲು ವಿಳಂಬ ಮಾಡಿದ್ದರಿಂದ ನ್ಯಾಯಾಲಯ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಧಾರವಾಡದಿಂದ ಕಂಬಾರಗಣವಿ ವರೆಗಿನ ಜೋಡು ರೈಲ್ವೆ ಹಳಿ ಅಭಿವೃದ್ಧಿ ಕಾಮಗಾರಿಗೆ ತಾಲೂಕಿನ ವರವನಾಗಲಾವಿ ಗ್ರಾಮದ ರೈತ ಇಮಾಂಸಾಬ್ ರಾಜೀಬಾರ ಅವರಿಂದ 2008- 09ರಲ್ಲಿ 1.30 ಎಕರೆ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ ರೈತ ತನಗೆ ನೀಡಿದ ಪರಿಹಾರದ ಮೊತ್ತ ಅಲ್ಪ. ಹೆಚ್ಚುವರಿ ಪರಿಹಾರ ನೀಡಬೇಕೆಂದು ಆಗ್ರಹಿಸಿ ರೈತ ಇಮಾಂಸಾಬ್ 2011ರಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದ. ರೈತನ ವಾದ ಆಲಿಸಿದ ನ್ಯಾಯಾಧೀಶರು 2014ರ ಜನವರಿ ಅಂತ್ಯದೊಳಗೆ ರೈತನಿಗೆ ಒಟ್ಟು ರು. 1.03 ಕೋಟಿ ಹಣ ನೀಡಬೇಕು. ವಿಳಂಬ ಮಾಡಿದರೆ ದಂಡ ಸಹಿತ ಪಾವತಿಸಬೇಕೆಂದು ಆದೇಶಿಸಿದ್ದರು.