ರಂಗಿನಾಟ ರಂಗು ರಂಗಾಗಿರಲಿ ಬಣ್ಣ ಬಳಸುವಾಗ ಎಚ್ಚರವಿರಲಿ
ಭಾವೈಕ್ಯದ ಸಂಕೇತ, ತಾಮಸ ಪ್ರವೃತ್ತಿಗಳನ್ನು ದೂರ ಮಾಡುವ ಉದ್ದೇಶದಿಂದ ಆಚರಿಸುವ ಬಣ್ಣಗಳ ಹಬ್ಬವೇ ಹೋಳಿ. ಈ ಬಣ್ಣಗಳ ಹಬ್ಬ ಮತ್ತೆ ಬಂದೇ ಬಿಟ್ಟಿತು.
-ಬಸವರಾಜ ಹಿರೇಮಠ
ಕ.ಪ್ರ.ವಾರ್ತೆ ಧಾರವಾಡ ಮಾ.13
ಭಾವೈಕ್ಯದ ಸಂಕೇತ, ತಾಮಸ ಪ್ರವೃತ್ತಿಗಳನ್ನು ದೂರ ಮಾಡುವ ಉದ್ದೇಶದಿಂದ ಆಚರಿಸುವ ಬಣ್ಣಗಳ ಹಬ್ಬವೇ ಹೋಳಿ. ಈ ಬಣ್ಣಗಳ ಹಬ್ಬ ಮತ್ತೆ ಬಂದೇ ಬಿಟ್ಟಿತು.
ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ತಾರುಣ್ಯದ ಅಭೀಪ್ಸೆಯನ್ನು ಹುಟ್ಟಿಸುವ ಹೋಳಿ ಹಬ್ಬದ ಸಿದ್ಧತೆಗಳು ಭರದಿಂದ ಶುರುವಾಗಿವೆ. ದೇಶದ ವಿವಿಧೆಡೆಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುವ ಈ ಹಬ್ಬದಲ್ಲಿ ಬಣ್ಣಗಳ ಆಟವೇ ಪ್ರಮುಖ ಆಕರ್ಷಣೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ರಾಸಾಯನಿಕ ಬಣ್ಣಗಳ ಹಾವಳಿ ಹೆಚ್ಚಿದ್ದು, ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಿದೆ. ಮಾರುಕಟ್ಟೆಯಲ್ಲಿ ಸಿಗುವ ಬಣ್ಣಗಳಲ್ಲಿ ಸಾಕಷ್ಟು ರಾಸಾಯನಿಕಗಳಿದ್ದು, ಬಳಸಿದರೆ ಅಪಾಯ ಖಂಡಿತ. ಇವುಗಳನ್ನು ನೀರಿನಲ್ಲಿ ಬೆರೆಸಿ ಎರಚಿದರೆ, ಚರ್ಮವ್ಯಾಧಿ ಅಂಟಿಕೊಂಡಾವು. ಬಾಯಿ ಮತ್ತು ಮೂಗಿನ ಮೂಲಕ ದೇಹದ ಒಳಗಡೆ ಸೇರಿದಾಗ ಪುಪ್ಪುಸ, ಕಿಡ್ನಿ, ಹೃದಯ ಸಂಬಂಧಿ ಕಾಯಿಲೆಗಳು ಬರಬಹುದು ಎನ್ನುತ್ತಾರೆ ತಜ್ಞ ವೈದ್ಯರು. ರಾಸಾಯನಿಕ ಪುಡಿ ಬಣ್ಣ ಎರಚುವುದರಿಂದ ಅಸ್ತಮಾಕ್ಕೂ ದಾರಿ ಮಾಡಿಕೊಟ್ಟಂತಾಗುತ್ತದೆ. ಇಂತಹ ಬಣ್ಣಗಳು ಗಾಳಿಯಲ್ಲಿ ಸೇರಿ ಪರಿಸರದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತವೆ.
ಯಾವ ಬಣ್ಣ, ಏನು ಪರಿಣಾಮ?
ಹಸಿರು ಬಣ್ಣದಲ್ಲಿ ಕಾಪರ್ ಸಲ್ಫೇಟ್ ಇದ್ದು, ಕಣ್ಣಿಗೆ ತೊಂದರೆ. ನೇರಳೆ ಬಣ್ಣದಲ್ಲಿರುವ ಕ್ರೋಮಿಯಂ ಅಯೋಡೈಡ್ ರಾಸಾಯನಿಕದಿಂದ ಉಸಿರುಗಟ್ಟಿಸುವಿಕೆಯ ತೊಂದರೆ, ಕಪ್ಪು ಬಣ್ಣದಲ್ಲಿರುವ ಲೆಡ್ ಆಕ್ಸೈಡ್ನಿಂದ ಕಿಡ್ನಿ ಸಮಸ್ಯೆ ಉಂಟಾಗುತ್ತದೆ. ಮರ್ಕ್ಯೂರಿ ಸಲ್ಫೇಟ್ ಒಳಗೊಂಡಿರುವ ಕೆಂಪು ಬಣ್ಣದಿಂದ ಚರ್ಮ ವ್ಯಾದಿ, ಸಿಲ್ವರ್ ಬಣ್ಣದಲ್ಲಿರುವ ಅಲ್ಯುಮಿನಿಯಂ ಬ್ರೋಮೈಡ್ನಿಂದ ಮೈ ಕೆರೆತ, ದೇಹ ಬಾವು ಕಾಣಿಸಿಕೊಳ್ಳುವುದು.
ರಾಸಾಯನಿಕ ಬಣ್ಣ: ಎರಡು ರೀತಿಯ ಪರಿಣಾಮ...
ಹೋಳಿ ಹಬ್ಬದಲ್ಲಿ ಬಳಸುವ ರಾಸಾಯನಿಕ ಬಣ್ಣಗಳ ಪರಿಣಾಮ ಎರಡು ವಿಧದಲ್ಲಾಗುತ್ತದೆ. ಒಂದು ಸಾಮಾಜಿಕ, ಸಾಂಸ್ಕೃತಿಕ ಮತ್ತು ಪರಿಸರದ ದೃಷ್ಟಿಯಿಂದ. ಇನ್ನೊಂದು ದೈಹಿಕ ತೊಂದರೆಗಳ ದೃಷ್ಟಿಯಿಂದ. ಈ ವೇಳೆ ಗಲಾಟೆಗಳಾಗುವ ಸಂಭವ ಹೆಚ್ಚು. ಬಣ್ಣಗಳು ಗಾಳಿಯಲ್ಲಿ ಸೇರುವುದರಿಂದ ಪರಿಸರ ಮಾಲಿನ್ಯವಾಗುತ್ತದೆ. ಇದಕ್ಕಿಂತ ಹೆಚ್ಚಾಗಿ ಬಣ್ಣಗಳಲ್ಲಿ ಬಳಸುವ ಲೆಡ್ನಂತಹ ರಾಸಾಯನಿಕಗಳು ದೇಹದ ಒಳಹೊಕ್ಕು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಸುನೇರಿ ಬಣ್ಣ ಸೂರ್ಯನ ನೇರಳಾತೀತ ಕಿರಣಗಳಿಗೆ ಒಗ್ಗಿ ಚರ್ಮದ ಒಳಹೋಗುವುದರಿಂದ ಚರ್ಮ ವ್ಯಾಧಿ ಗ್ಯಾರಂಟಿ. ಬಣ್ಣವಾಡಿದ ಬಳಿಕ ಕೆರೆ, ಬಾವಿ ಹಾಗೂ ಕೊಳಗಳಲ್ಲಿ ಸ್ನಾನ ಮಾಡುವುದರಿಂದ ಮೈಗಂಟಿರುವ ಬಣ್ಣ ನೀರಿನಲ್ಲಿ ಕರಗಿ ಜಲಚರಗಳ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಹೀಗಾಗಿ ಸಾಧ್ಯವಿದ್ದಷ್ಟು ನೈಸರ್ಗಿಕ ಬಣ್ಣಗಳ ಬಳಕೆ ಇರಲಿ ಎನ್ನುತ್ತಾರೆ ಪರಿಸರವಾದಿ ಮುಕುಂದ ಮೈಗೂರ.
ಹೋಳಿ ಆಚರಣೆ ಹೀಗಿರಲಿ...
-ಹೋಳಿಯಲ್ಲಿ ನೈಸರ್ಗಿಕ ಬಣ್ಣದ ಬಳಕೆಯಾಗಲಿ.
-ಸಾಧ್ಯವಿದ್ದಷ್ಟು ಒಣ ಬಣ್ಣಗಳನ್ನೇ ಬಳಸಿ.
-ಬಣ್ಣ ಆಡುವ ಮುಂಚೆ ಮುಖ, ಕೈ, ಮೈಗೆ ಕೊಬ್ಬರಿ ಎಣ್ಣೆ ಲೇಪಿಸಿಕೊಳ್ಳಿ.
-ಪ್ರಸ್ತುತ ಪ್ರಖರ ಬೇಸಿಗೆ ಇರುವುದರಿಂದ ಹೆಚ್ಚು ಬಣ್ಣ ಹಾಗೂ ನೀರಿನಾಟ ಬೇಡ.
-ಒತ್ತಾಯದಿಂದ ಬಣ್ಣ ಎರಚುವುದು, ತಲೆ ಮೇಲೆ ಮೊಟ್ಟೆ ಒಡೆಯುವುದು, ಕೊಳೆತ ತರಕಾರಿ ಬಳಕೆ ಬೇಡ.
-ಹೋಳಿ ಹೆಸರಲ್ಲಿ ಅತಿ ಮದ್ಯಸೇವನೆ ಒಳ್ಳೆಯದಲ್ಲ.
-ಮದ್ಯಪಾನ, ಸಿಗರೇಟು, ಭಾಂಗ್, ಗಾಂಜಾದಂತಹ ಮಾದಕ ವಸ್ತು ಸೇವಿಸಿ ಬಣ್ಣ ಆಡುವುದು ಬೇಡ.
-ಒಂದು ವೇಳೆ ಕಣ್ಣಿನಲ್ಲಿ ಬಣ್ಣ ಹೋದರೆ ಸ್ವಚ್ಛ ನೀರಿನಿಂದ ಕಣ್ಣು ಶುಚಿಗೊಳಿಸಿಕೊಳ್ಳಿ.
-ಮಕ್ಕಳು ಬಣ್ಣ ಆಡುವಾಗ ಪಾಲಕರು ಜಾಗ್ರತೆ ವಹಿಸಿ.
- ಹೋಳಿ ಹಬ್ಬದ ಅಂಗವಾಗಿ ನಡೆಯುವ ಗಡಿಗೆ ಒಡೆಯುವ ಸ್ಪರ್ಧೆಯಲ್ಲಿ ಅತೀ ಉತ್ಸಾಹದಿಂದ ಅನಾಹುತಕ್ಕೆ ಅವಕಾಶ ಕೊಡಬೇಡಿ.
-ಅಪಘಾತಗಳಾಗುವ ಸಂಭವದಿಂದ ವಾಹನ ಚಾಲಕರ ಮೇಲೆ ಬಣ್ಣ ಎರಚುವುದು ಬೇಡ.