ಕವಿವಿ ಘಟಿಕೋತ್ಸವಕ್ಕೆ ಆಹ್ವಾನ ಬಂದಿಲ್ಲ
-ಪ್ರಕಾಶ ಎಸ್. ಶೇಟ್
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 21
ಕರ್ನಾಟಕ ವಿಶ್ವವಿದ್ಯಾಲಯ ಮಾ. 25ರಂದು ಘಟಿಕೋತ್ಸವ ಆಚರಿಸಲು ಸರ್ವ ಸಿದ್ಧತೆ ಮಾಡಿಕೊಂಡಿದೆಯಾದರೂ, ಘಟಿಕೋತ್ಸವದ ಕೇಂದ್ರ ಬಿಂದುಗಳು ಎನಿಸಿಕೊಂಡಿರುವ ಪಿಎಚ್ಡಿ ಅಧ್ಯಯನ ಪೂರ್ಣಗೊಳಿಸಿದ ಹಾಗೂ ಚಿನ್ನದ ಪದಕ ಪಡೆಯಲಿರುವ ವಿದ್ಯಾರ್ಥಿಗಳಿಗೆ ಮಾತ್ರ ಇನ್ನೂ ಅಧಿಕೃತ ಆಹ್ವಾನ ತಲುಪಿಲ್ಲ.
ಹೌದು. ಸದಾ ಒಂದಿಲ್ಲೊಂದು ವಿವಾದದಿಂದಾಗಿ ಸುದ್ದಿಯಲ್ಲಿರುವ ಕವಿವಿ ಇದೀಗ ಘಟಿಕೋತ್ಸವಕ್ಕೆ ಆಹ್ವಾನ ನೀಡುವಲ್ಲೂ ಎಡವಿ ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ಹಿಂದೆಲ್ಲ ಘಟಿಕೋತ್ಸವ ನಡೆಯುವುದಕ್ಕೆ ಒಂದು ವಾರ ಮೊದಲೇ ವಿದ್ಯಾರ್ಥಿಗಳಿಗೆ ಆಹ್ವಾನ ಪತ್ರ ಕಳುಹಿಸುತ್ತಿದ್ದ ಕವಿವಿ, ಈ ಬಾರಿ ಘಟಿಕೋತ್ಸವ ಆಚರಿಸುವ ಹೊಸ್ತಿಲಲ್ಲಿ ನಿಂತಿದ್ದರೂ ಆಹ್ವಾನ ಪತ್ರ ಮುಟ್ಟಿಸುವ ಗೋಜಿಗೆ ಹೋಗಿಲ್ಲ.
ಏಕೆ ಆಹ್ವಾನ?: ಪಿಎಚ್ಡಿ ಪದವಿ ಪೂರ್ಣಗೊಳಿಸಿದ ಹಾಗೂ ಚಿನ್ನದ ಪದಕ ಪಡೆಯಲಿರುವ ವಿದ್ಯಾರ್ಥಿಗಳಿಗೆ ಶಿಷ್ಟಾಚಾರದ ಪ್ರಕಾರ ಕವಿವಿ ಘಟಿಕೋತ್ಸವಕ್ಕೆ ಮುನ್ನ ಅಧಿಕೃತ ಆಹ್ವಾನ ಪತ್ರಿಕೆ ಕಳುಹಿಸಿಕೊಡಬೇಕು. ಆಹ್ವಾನ ಪತ್ರಿಕೆಯೊಟ್ಟಿಗೆ ವಿದ್ಯಾರ್ಥಿ ಕುಳಿತುಕೊಳ್ಳುವ ಆಸನದ ಸಂಖ್ಯೆ ಹಾಗೂ ವಿದ್ಯಾರ್ಥಿ, ಪಾಲಕರು ಸೇರಿದಂತೆ ಮೂವರಿಗೆ ಪ್ರವೇಶ ಪತ್ರ ತಲುಪಿಸಲಾಗುತ್ತದೆ. ಈ ಹಿಂದಿನ ದಿನಗಳಲ್ಲಿ ವಾರ ಒಪ್ಪತ್ತಿನ ಮುಂಚೆ ಆಹ್ವಾನ ಪತ್ರಿಕೆ ವಿದ್ಯಾರ್ಥಿಗಳ ಕೈಸೇರುತ್ತಿತ್ತು. ಈ ಬಾರಿ ಘಟಿಕೋತ್ಸವದ ಹೊಸ್ತಿಲಲ್ಲಿ (ಶುಕ್ರವಾರ) ಅಸಾಮಾನ್ಯ ವಿದ್ಯಾವಿಷಯಕ ಪರಿಷತ್ ಸಭೆ ನಡೆಸಿದೆಯಲ್ಲದೇ, ಈ ಹೊತ್ತಿನಲ್ಲೂ ಆಹ್ವಾನ ಪತ್ರಿಕೆ ವಿದ್ಯಾರ್ಥಿಗಳ ಕೈ ಸೇರಿಲ್ಲ.
ಅವಿಸ್ಮರಣೀಯ ದಿನ: ವರ್ಷಕ್ಕೊಮ್ಮೆ ಬರುವ ಕವಿವಿ ಘಟಿಕೋತ್ಸವ ವಿದ್ಯಾರ್ಥಿಗಳ ಪಾಲಿಗೆ ಅವಿಸ್ಮರಣೀಯ ದಿನ. ಸ್ನಾತಕೋತ್ತರ ವ್ಯಾಸಂಗ ಪೂರ್ಣಗೊಳಿಸಿದ ವಿದ್ಯಾರ್ಥಿಗಳು, ಪಿಎಚ್ಡಿ ವಿದ್ಯಾರ್ಥಿಗಳಿಗೆ ಈ ದಿನ ಪದವಿ ಪ್ರದಾನ ಮಾಡಲಾಗುತ್ತದೆ. ಈ ಸಮಾರಂಭದಲ್ಲಿ ಪಾಲ್ಗೊಂಡು ಸಂಭ್ರಮಿಸಬೇಕೆಂಬ ಬಯಕೆ ವಿದ್ಯಾರ್ಥಿಗಳದ್ದಾಗಿರುತ್ತದೆ. ಆಹ್ವಾನ ಪತ್ರಿಕೆ ಕೈ ಸೇರದ ಪರಿಣಾಮ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಎಂದು ನಡೆಯುತ್ತಿದೆ ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ. ಮತ್ತೆ ಕೆಲವರು ಅಧ್ಯಯನ ಮುಗಿದ ಕಾರಣ ಪರಸ್ಥಳಕ್ಕೆ ಹೋಗಿರುತ್ತಾರೆ. ಇಂಥವರಿಗೆ ಪೂರ್ವ ಮಾಹಿತಿ ಸಿಗದಿರುವ ಪರಿಣಾಮ ಘಟಿಕೋತ್ಸವಕ್ಕೆ ಬರಲು ಸಾಧ್ಯವಾಗುವುದಿಲ್ಲ. ಏತನ್ಮಧ್ಯೆ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಎನ್ನುವಂತೆ ಕವಿವಿ ಗುರುವಾರ ರಾತ್ರಿ ವೆಬ್ಸೈಟ್ನಲ್ಲಿ ಘಟಿಕೋತ್ಸವ ನಡೆಯುತ್ತಿದೆ ಎಂದು ಪ್ರಕಟಿಸಿದೆ. ಈ ವೆಬ್ಸೈಟ್ ನೋಡಿಕೊಂಡು ಘಟಿಕೋತ್ಸವಕ್ಕೆ ಹಾಜರಾಗುವ ವಿದ್ಯಾರ್ಥಿಗಳು ಎಷ್ಟು? ಎಂಬ ಪ್ರಶ್ನೆ ವಿದ್ಯಾರ್ಥಿಗಳದ್ದಾಗಿದೆ. ಈಗ ಆಹ್ವಾನ ಪತ್ರ ರವಾನಿಸಿದರೂ ಘಟಿಕೋತ್ಸವಕ್ಕೆ ಒಂದು ದಿನ ಮುಂಚೆ ಅಥವಾ ಘಟಿಕೋತ್ಸವ ಮುಗಿದ ಬಳಿಕ ವಿದ್ಯಾರ್ಥಿಗಳ ಕೈಗೆ ಆಮಂತ್ರಣ ಸಿಕ್ಕರೂ ಆಚ್ಚರಿಯಿಲ್ಲ. ಕವಿವಿ ಆಹ್ವಾನ ನೀಡುವಲ್ಲಿ ಇಂಥ ಅವಾಂತರ ಸೃಷ್ಟಿಸಿದ್ದರೆ, ಪಕ್ಕದ ಬಿಜಾಪುರ ಮಹಿಳಾ ವಿವಿ, ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕನಿಷ್ಠ 15 ದಿನ ಮುಂಚಿತವಾಗಿ ವಿದ್ಯಾರ್ಥಿಗಳಿಗೆ ಆಹ್ವಾನ ತಲುಪಿಸಿದೆ.
'ಗೌಡಾ' ಗೊಂದಲ: ಘಟಿಕೋತ್ಸವ ಜನವರಿ ಮಾಸಾಂತ್ಯ ಅಥವಾ ಫೆಬ್ರವರಿ ತಿಂಗಳಲ್ಲಿ ನಡೆಯಬೇಕಿತ್ತು. ಈ ಬಾರಿ ವಿಳಂಬವಾಗಿದೆ. ಇದಕ್ಕೆ ಕವಿವಿ ತಾಂತ್ರಿಕ ಕಾರಣದ ಸಬೂಬು ನೀಡುತ್ತಿದೆ. ಆದರೆ, ಸಿದ್ಧತೆ, ಹೊಂದಾಣಿಕೆ ಕೊರತೆಯೇ ಪ್ರಮುಖ ಕಾರಣ. ಎಲ್ಲದಕ್ಕೂ ಮುಖ್ಯವಾಗಿ ಗೌರವ ಡಾಕ್ಟರೇಟ್ ನೀಡುವುದಕ್ಕೆ ಸಂಬಂಧಿಸಿದಂತೆ ಹಗ್ಗಜಗ್ಗಾಟ ನಡೆದಿದೆ. ಗೌರವ ಡಾಕ್ಟರೇಟ್ಗೆ ಹೆಸರು ಸೂಚಿಸಿ ಕವಿವಿ ಸಲ್ಲಿಸಿದ ಪಟ್ಟಿಗೆ ರಾಜ್ಯಪಾಲರ ಅಂಕಿತ ಇನ್ನೂ ಬಿದ್ದಿಲ್ಲ. ಶುಕ್ರವಾರ ಅಸಾಮಾನ್ಯ ವಿದ್ಯಾವಿಷಯಕ ಪರಿಷತ್ ಸಭೆ ನಡೆದಾಗಲೂ ಗೌರವ ಡಾಕ್ಟರೇಟ್ ಯಾರಿಗೆ ನೀಡಲಾಗುತ್ತಿದೆ ಎಂಬ ಸಂಗತಿ ಬಹಿರಂಗಪಡಿಸಿಲ್ಲ. ಮಾ. 24ರಂದು ಗೌರವ ಡಾಕ್ಟರೇಟ್ ಪಡೆದವರ ಹೆಸರು ಪ್ರಕಟಿಸುವುದಾಗಿ ಕುಲಪತಿ ಎಚ್.ಬಿ. ವಾಲೀಕಾರ ತಿಳಿಸಿದ್ದಾರೆ. ಈ ಗೊಂದಲವೂ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಆಹ್ವಾನ ಪತ್ರಿಕೆ ಕಳುಹಿಸಲು ವಿಳಂಬವಾಗಲು ಕಾರಣವಾಗಿದೆ.
ರಾಜ್ಯಪಾಲರ ಅಂಕಿತ ಬಳಿಕ ಗೌಡಾ ಪಟ್ಟಿ ಪ್ರಕಟ
ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 21
ಮಾ. 25ರಂದು ಕರ್ನಾಟಕ ವಿಶ್ವವಿದ್ಯಾಲಯದ 64ನೇ ಘಟಿಕೋತ್ಸವ ನಡೆಯಲಿದ್ದು, ರಾಜ್ಯಪಾಲರ ಅಂಕಿತದ ನಂತರವಷ್ಟೇ ವಿಶ್ವವಿದ್ಯಾಲಯ ನೀಡುವ ಗೌರವ ಡಾಕ್ಟರೇಟ್ ಪಡೆದವರ ಹೆಸರನ್ನು ಪ್ರಕಟಿಸಲಾಗುವುದು ಎಂದು ಕುಲಪತಿ ಡಾ. ಎಚ್.ಬಿ. ವಾಲೀಕಾರ ಹೇಳಿದ್ದಾರೆ.
ಶುಕ್ರವಾರ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ನಡೆದ ವಿಶೇಷ ವಿದ್ಯಾವಿಷಯಕ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಬಾರಿ ಈ ಸಭೆಯಲ್ಲಿಯೇ ಹೆಸರು ಪ್ರಕಟಿಸಲಾಗುತ್ತಿತ್ತು. ಆದರೆ, ಕಳೆದ ಬಾರಿ ಗೌರವ ಡಾಕ್ಟರೇಟ್ ಗಾಗಿ ಆಯ್ಕೆ ಸಮಿತಿ ಸೂಚಿಸಿದ ಆರು ಜನರ ಪಟ್ಟಿಯಲ್ಲಿ ಇಬ್ಬರನ್ನು ರಾಜ್ಯಪಾಲರು ಅನರ್ಹತೆಯ ಕಾರಣದಿಂದ ಕೈ ಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಈಗಾಗಲೇ ಆಯ್ಕೆ ಸಮಿತಿ ಹೆಸರುಗಳನ್ನು ಸೂಚಿಸಿದ್ದು, ಈ ಪಟ್ಟಿಗೆ ರಾಜ್ಯಪಾಲರಿಗೆ ಒಪ್ಪಿಗೆ ಪಡೆದ ನಂತರ ಹೆಸರು ಪ್ರಕಟಿಸಲಾಗುವುದು. ರಾಜ್ಯಪಾಲರ ಬಳಿ ಶನಿವಾರ ಹೋಗಿ ಗೌರವ ಡಾಕ್ಟರೇಟ್ ಪದವಿ ಪಡೆದವರ ಹೆಸರಿಗೆ ಅನುಮೋದನೆ ಪಡೆದು ಮಾ. 24ರಂದು ಪ್ರಕಟಿಸಲಾಗುವುದು ಎಂದು ಕುಲಪತಿ ವಾಲಿಕಾರ ಸ್ಪಷ್ಟಪಡಿಸಿದ್ದಾರೆ.
ನೀತಿ ಸಂಹಿತೆ ಜಾರಿಯಲ್ಲಿ ಇರುವ ಕಾರಣ ಈ ಬಾರಿ ರಾಜಕೀಯ ವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್ ನೀಡುತ್ತಿಲ್ಲ. ಪ್ರತಿ ಬಾರಿ ಐದರಿಂದ ಆರು ಜನರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಗುತ್ತಿದ್ದು, ಈ ಬಾರಿ ಆ ಸಂಖ್ಯೆ ಹೆಚ್ಚಾದರೂ ಆಶ್ಚರ್ಯವೇನಿಲ್ಲ ಎಂದರು.
ಇದಕ್ಕೂ ಮುಂಚೆ ನಡೆದ ವಿದ್ಯಾವಿಷಯಕ ಸಭೆಯಲ್ಲಿ ಪ್ರಸಕ್ತ ಸಾಲಿಗೆ ಕವಿವಿ ವ್ಯಾಪ್ತಿಗೆ ಬರುವ ಕಾರವಾರ ಮತ್ತು ಹಾವೇರಿ ಜಿಲ್ಲೆಯ ಸರ್ಕಾರಿ ಕಾಲೇಜುಗಳಲ್ಲಿ ಪ್ರಾರಂಭಿಸಿದ ಬಿಬಿಎ ಕೋರ್ಸಿಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದ್ದು, ವಿವಿಯ ತನಿಖಾಧಿಕಾರಿಗಳ ವರದಿಯಿಂದ ಕೋರ್ಸ್ ಮುಂದುವರೆಸಲು ಶಿಫಾರಸು ಮಾಡಿಲ್ಲ ಎಂದು ಸದಸ್ಯರು ವಿಷಯ ಪ್ರಸ್ತಾಪಿಸಿದರು. ಪ್ರವೇಶಾತಿ ಸಂದರ್ಭದಲ್ಲಿ ಅರ್ಜಿಗಳು ಬಂದು ನಂತರ ಸರ್ಕಾರದ ನಿರ್ದೇಶನದ ಮೇಲೆ ಕೋರ್ಸ್ ಆರಂಭಿಸಲೂಬಹುದು ಎಂದು ಡಾ. ಎಚ್.ಬಿ. ವಾಲೀಕಾರ ಸ್ಪಷ್ಟಪಡಿಸಿದರು.
ಕವಿವಿ ಮುಖ್ಯ ಆವರಣದಲ್ಲಿ ಎಂ.ಎ. ಸಾರ್ವಜನಿಕ ಆಡಳಿತ ಪ್ರಾರಂಭಿಸಬೇಕೆಂಬ ಪ್ರಸ್ತಾವನೆ ಕುರಿತು ಮಾತನಾಡಿದ ಡಾ. ವಾಲೀಕಾರ, ಹೊಸ ಹೊಸ ಕೋರ್ಸ್ಗಳನ್ನು ಪ್ರಾರಂಭಿಸುವುದು ಒಂದು ರೀತಿಯ ಫ್ಯಾಶನ್ ಆಗಿದೆ. ಆದರೆ, ಅವುಗಳು ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ. ವಿದ್ಯಾರ್ಥಿಗಳು ಅಂತಹ ಕೋರ್ಸ್ ಕಲಿತರೆ ಉದ್ಯೋಗ ದೊರೆಯಲಿವೆ ಎಂಬ ಭರವಸೆಯೂ ಇಲ್ಲ. ಈ ನಿಟ್ಟಿನಲ್ಲಿ ಹೊಸ ಕೋರ್ಸ್ ಕುರಿತು ಚಿಂತನೆ ನಡೆಯಬೇಕಿದೆ ಎಂದರು ಪ್ರಸ್ತಾವನೆಯನ್ನು ಸದ್ಯದ ಮಟ್ಟಿಗೆ ತಡೆದರು. ಹಾಗೆಯೇ, ಸಮಾಜ ವಿಜ್ಞಾನ ವಿಭಾಗದಿಂದ ಶಿಕ್ಷಣ ಸಂಸ್ಥೆಗಳಲ್ಲಿ ಮಿಲಿಟರಿ ಶಿಕ್ಷಣ ನೀಡುವ ಕುರಿತಾದ ಪ್ರಸ್ತಾವನೆಗೆ ಸಭೆ ಒಪ್ಪಿಗೆ ಸೂಚಿಸಿದ್ದು, ಈ ಕುರಿತು ಸೂಕ್ತ ಉಪನ್ಯಾಸಕರನ್ನು ಗುರುತಿಸಿ ಮಿಲಿಟರಿ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಯೋಚಿಸಲಾಗುವುದು ಎಂದರು. ಕುಲಸಚಿವರಾದ ಪ್ರೊ. ಚಂದ್ರಮಾ ಕಣಗಲಿ, ಮೌಲ್ಯಮಾಪನ ಕುಲಸಚಿವ ಡಾ.ಎಚ್.ಟಿ. ಪೋತೆ ಇದ್ದರು.
ಪ್ರತಿ ಬಾರಿ ಈ ಸಭೆಯಲ್ಲಿಯೇ ಹೆಸರು ಪ್ರಕಟಿಸಲಾಗುತ್ತಿತ್ತು. ಆದರೆ, ಕಳೆದ ಬಾರಿ ಗೌರವ ಡಾಕ್ಟರೇಟ್ಗಾಗಿ ಆಯ್ಕೆ ಸಮಿತಿ ಸೂಚಿಸಿದ ಆರು ಜನರ ಪಟ್ಟಿಯಲ್ಲಿ ಇಬ್ಬರನ್ನು ರಾಜ್ಯಪಾಲರು ಅನರ್ಹತೆ ಕಾರಣದಿಂದ ಕೈ ಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಈಗಾಗಲೇ ಆಯ್ಕೆ ಸಮಿತಿ ಹೆಸರು ಸೂಚಿಸಿದ್ದು, ಈ ಪಟ್ಟಿಗೆ ರಾಜ್ಯಪಾಲರ ಒಪ್ಪಿಗೆ ಪಡೆದ ಅನಂತರ ಹೆಸರು ಪ್ರಕಟಿಸಲಾಗುವುದು. ರಾಜ್ಯಪಾಲರ ಬಳಿ ಶನಿವಾರ ಹೋಗಿ ಗೌರವ ಡಾಕ್ಟರೇಟ್ ಪದವಿ ಪಡೆದವರ ಹೆಸರಿಗೆ ಅನುಮೋದನೆ ಪಡೆದು ಮಾ. 24ರಂದು ಪ್ರಕಟಿಸಲಾಗುವುದು.
- ಎಚ್.ಬಿ. ವಾಲೀಕಾರ, ಕುಲಪತಿ