ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ರೈತರಿಗೆ ತಲುಪದ ಆರ್ಥಿಕ ಸುಧಾರಣೆಗಳು

Srinivasa Murthy VN
Updated On : 22 Mar 2014, 11:58 am

ಧಾರವಾಡ: ಅನೇಕ ಕಾರಣಗಳಿಂದಾಗಿ ಇವತ್ತಿಗೂ ಆರ್ಥಿಕತೆ ಅನುಕೂಲತೆಗಳು ಸರಿಯಾದ ರೀತಿಯಲ್ಲಿ ಮತ್ತು ಸಮಯದಲ್ಲಿ ಕೃಷಿಕರಿಗೆ, ಫಲಾನುಭವಿಗಳಿಗೆ ತಲುಪುತ್ತಿಲ್ಲವೆಂದು ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಆರ್.ಎಸ್. ದೇಶಪಾಂಡೆ ವಿಷಾದ ವ್ಯಕ್ತಪಡಿಸಿದರು.
ಕರ್ನಾಟಕ ವಿವಿ ಮಾನಸೋಲ್ಲಾಸ ಸಭಾಂಗಣದಲ್ಲಿ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗವು ಹಮ್ಮಿಕೊಂಡಿದ್ದ ಎರಡು ದಿನಗಳ ಪ್ರಾದೇಶಿಕ ಅಭಿವೃದ್ಧಿಯ ರಾಜಕೀಯ ಆರ್ಥಿಕತೆ ವಾರ್ಷಿಕ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಾದೇಶಿಕ ಅಭಿವೃದ್ಧಿಗೆ ಇರುವ ಎಲ್ಲ ಅಡತಡೆಗಳನ್ನು ಮೀರಿ ರಾಜಕೀಯ ಆರ್ಥಿಕತೆಯನ್ನು ಸಾಧಿಸುವ ಅಗತ್ಯ ಹಿಂದಿನಕ್ಕಿಂತಲೂ ಇಂದು ಹೆಚ್ಚಾಗಿದೆ ಎಂದರು.
ಪ್ರಾದೇಶಿಕ ಅಭಿವೃದ್ಧಿಯ ಅಸಮತೋಲವನ್ನು ಗುರುತಿಸಿ ಸಂಪನ್ಮೂಲಗಳ ಪೂರೈಕೆ ಹಾಗೂ ವೆಚ್ಚವನ್ನು ಸ್ಥಳೀಯವಾಗಿಯೇ ಭರಿಸಲು ಅನೇಕ ಸಮಿತಿಗಳು ತಮ್ಮ ವರದಿಯಲ್ಲಿ ಶಿಫಾರಸು ಮಾಡಿದವು. ಕಾಲಾಂತರದಲ್ಲಿ ಜನರ ಬೇಡಿಕೆಯಂತೆ ಹುಟ್ಟಿಕೊಂಡ ವಿವಿಧ ಅಭಿವೃದ್ಧಿ ಮಂಡಳಿ, ನಿಗಮಗಳು ನಿರೀಕ್ಷಿತ ಕಾರ್ಯ ಮಾಡುವಲ್ಲಿ ವಿಫಲಗೊಂಡವು ಎಂದು ಡಾ. ದೇಶಪಾಂಡೆ ಹೇಳಿದರು.
ಕರ್ನಾಟಕದಲ್ಲಿ ಆರಂಭದಿಂದಲೂ ಅನೇಕ ಕೃಷಿ, ಭೂಸುಧಾರಣೆ ಕ್ರಮಗಳನ್ನು ಕೈಗೊಂಡರೂ ಅಭಿವೃದ್ಧಿಯ ಗುರಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಆಡಳಿತಗಾರರು ಮತ್ತು ಕಾರ್ಯನಿರ್ವಾಹಕರಲ್ಲಿ ಇಚ್ಛಾಶಕ್ತಿಯ ಕೊರತೆ ಕಾರಣ. ಪ್ರಾದೇಶಿಕ ಅಭಿವೃದ್ಧಿ ಪೂರ್ಣಗೊಳ್ಳಬೇಕಾದರೆ ರಾಜಕೀಯ ಆರ್ಥಿಕತೆಯಲ್ಲಿ ವಿವಿಧ ನೂತನ ಕಾರ್ಯತಂತ್ರಗಳನ್ನು ಪ್ರಯೋಗ ಮಾಡುವ ಕಾಲ ಇದಾಗಿದೆ ಎಂದೂ ಅವರು ಪ್ರತಿಪಾದಿಸಿದರು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ವಿವಿ ಕುಲಪತಿ ಪ್ರೊ. ಎಚ್.ಬಿ. ವಾಲೀಕಾರ, ಕವಿವಿ ಅರ್ಥಶಾಸ್ತ್ರ ವಿಭಾಗ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿದ್ವಾಂಸರಿಂದ ಪ್ರಶಂಸೆ ಪಡೆದಿದೆ. ಆರ್ಥಿಕ ನಿರ್ವಹಣೆ ಮತ್ತು ಹಣಕಾಸು ಕುರಿತಾದ ಅಂತಾರಾಷ್ಟ್ರೀಯ ಸಮ್ಮೇಳನವನ್ನು ವಿಭಾಗವು ಸದ್ಯದಲ್ಲಿಯೇ ಆಯೋಜಿಸಬೇಕು. ಇದಕ್ಕೆ ಅಗತ್ಯ ನೆರವನ್ನು ವಿವಿ ನೀಡುತ್ತದೆ ಎಂದರು.
ಕರ್ನಾಟಕ ಅರ್ಥಶಾಸ್ತ್ರ ಸಂಘದ ಅಧ್ಯಕ್ಷರಾದ ಪ್ರೊ. ಎಸ್. ಇಂದುಮತಿ, ಯುವಕರು, ಸಂಶೋಧಕರು ಸ್ಪರ್ಧಾ ಜಗತ್ತಿಗೆ ತಕ್ಕಂತೆ ಬದಲಾಗಬೇಕಿದೆ. ಇಲ್ಲಿನ ಉದ್ಯೋಗವಕಾಶಗಳು ಬೇರೆ ರಾಜ್ಯದವರ ಪಾಲಾಗುತ್ತಿವೆ. ಈ ನಿಟ್ಟಿನಲ್ಲಿ ಮುಂಜಾಗ್ರತೆ ವಹಿಸಬೇಕಿದೆ. ಜಾಗತೀಕರಣದ ಪರಿಕಲ್ಪನೆಯಿಂದ ಆರ್ಥಿಕ ಮತ್ತು ಉದ್ಯೋಗ ಅಭಿವೃದ್ಧಿ ಕಾಣುತ್ತಿದ್ದರೂ ಸಾಮಾಜಿಕ ನೋವಿಗೆ ಕಾರಣವಾಗುತ್ತಿದೆ. ಕುಟುಂಬ ಮೌಲ್ಯಗಳು ಕಡಿಮೆಯಾಗುತ್ತಿವೆ. ದುಡಿಮೆ ಮತ್ತು ಗಳಿಕೆಯ ಆತುರದಲ್ಲಿ ಕುಟುಂಬ ಸದಸ್ಯರು ಪರಸ್ಪರ ದೂರಾಗಿ ವೃದ್ಧಾಶ್ರಮದಂತೆ ವ್ಯವಸ್ಥೆ ಬೆಳೆಯುತ್ತಿದೆ. ಆರ್ಥಿಕ ಸ್ವಾತಂತ್ರ್ಯ ಗಳಿಸುವ ನೆಪದಲ್ಲಿ ಯಾರೂ ಮಾನವೀಯ ಮೌಲ್ಯಗಳನ್ನು ಮರೆಯಬಾರದು ಎಂದರು.
ಕರ್ನಾಟಕ ಅರ್ಥಶಾಸ್ತ್ರ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ವೀರಯ್ಯ, ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ. ಎಸ್.ಟಿ. ಬಾಗಲಕೋಟಿ, ಪ್ರೊ. ಮಂಜುನಾಥ, ಪ್ರೊ. ಪಿ.ಎಂ. ಹೊನಕೇರಿ, ಪ್ರೊ. ಎಲ್.ಡಿ. ವೈಕುಂಠೆ, ಪ್ರೊ. ಜಿ.ಆರ್. ಪಾಟೀಲ, ಪ್ರೊ. ಎನ್.ಎಸ್. ಹಿರೇಮಠ, ಪ್ರೊ. ಪಿ.ಎಸ್. ಮುಂದಿನಮನಿ, ಪ್ರೊ. ಆರ್.ವಿ. ದಾಡಿಭಾವಿ, ಪ್ರೊ. ವಿ.ಬಿ. ಅಣ್ಣಿಗೇರಿ ಇದ್ದರು. 300ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳಿದ್ದರು.

ಕರ್ನಾಟಕದಲ್ಲಿ ಆರಂಭದಿಂದಲೂ ಕೃಷಿ, ಭೂಸುಧಾರಣೆ ಕ್ರಮಗಳನ್ನು ಕೈಗೊಂಡರೂ ಅಭಿವೃದ್ಧಿ ಗುರಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಆಡಳಿತಗಾರರು ಮತ್ತು ಕಾರ್ಯನಿರ್ವಾಹಕರಲ್ಲಿ ಇಚ್ಛಾಶಕ್ತಿ ಕೊರತೆ ಕಾರಣ. ಪ್ರಾದೇಶಿಕ ಅಭಿವೃದ್ಧಿ ಪೂರ್ಣಗೊಳ್ಳಬೇಕಾದರೆ ರಾಜಕೀಯ ಆರ್ಥಿಕತೆಯಲ್ಲಿ ನೂತನ ಕಾರ್ಯತಂತ್ರಗಳನ್ನು ಪ್ರಯೋಗ ಮಾಡುವ ಕಾಲ ಇದಾಗಿದೆ.
- ಡಾ. ಆರ್.ಎಸ್. ದೇಶಪಾಂಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement