ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ವಿಜೃಂಭಣೆಯ ಚಾಂಗದೇವರ ಜಾತ್ರೋತ್ಸವ

Srinivasa Murthy VN
Updated On : 22 Mar 2014, 11:59 am

ನವಲಗುಂದ: ತಾಲೂಕಿನ ಯಮನೂರು ಶ್ರೀ ಚಾಂಗದೇವರ ಮಹಾರಾಜ ಕ್ಷೇತ್ರದಲ್ಲಿ ಶುಕ್ರವಾರ ನಡೆದ ಉರೂಸ್ (ಜಾತ್ರೆ)ನಲ್ಲಿ ಸಾವಿರಾರು ಭಕ್ತರು ಶ್ರೀ ಚಾಂಗದೇವರ ದರ್ಶನ ಪಡೆದರು.
ಜಾತ್ರೆಯಲ್ಲಿ ರಾಜ್ಯ ಸೇರಿದಂತೆ ಹೊರರಾಜ್ಯಗಳಿಂದ ಆಗಮಿಸಿದ್ದ ಸಹಸ್ರಾರು ಸಂಖ್ಯೆಯ ಭಕ್ತರು ಬೆಣ್ಣೆ ಹಳ್ಳದಲ್ಲಿ ಸ್ನಾನ ಮಾಡಿದರು. ಹಳ್ಳದಲ್ಲಿ ಸಾಕಷ್ಟು ನೀರಿನ ಲಭ್ಯತೆ ಇಲ್ಲದಿದ್ದರಿಂದ ಸ್ನಾನಕ್ಕೆ ಭಕ್ತರು ಪರದಾಡುವಂತಾಯಿತು. ಹಳ್ಳದ ಅಕ್ಕಪಕ್ಕದಲ್ಲಿ ಗುಂಡಿ ತೋಡಿ ಬಾಟಲಿಗಳಲ್ಲಿ ನೀರನ್ನು ತೀರ್ಥ ಸ್ವರೂಪದಲ್ಲಿ ಸಂಗ್ರಹಿಸಿಕೊಂಡು ದೇವಸ್ಥಾನದತ್ತ ತೆರಳುತ್ತಿರುವುದು ಸಾಮಾನ್ಯವಾಗಿತ್ತು. ಜಾತ್ರಾ ಮಹೋತ್ಸವದ ಅಂಗವಾಗಿ ಸಂತರು ಬೆಣ್ಣೆಹಳ್ಳದ ನೀರನ್ನು ತೆಗೆದುಕೊಂಡು ದೀಪ ಬೆಳಗಿಸಲು ಹೋಗುವಾಗ ಸಂತರು ರಸ್ತೆ ಮಧ್ಯದಲ್ಲಿ ಮಲಗಿಕೊಂಡು ನಮ್ಮ ಮೇಲೆ ಕಾಲಿಟ್ಟರೆಂದರೆ ಪಾಪ ಪರಿಹಾರವಾಗುವುದು ಎಂಬ ನಂಬಿಕೆ ಭಕ್ತರಲ್ಲಿ ಇದೆ. ಜಾತ್ರೆಯಲ್ಲಿ ಬಳೆಗಳ ವ್ಯಾಪಾರ ಜೋರಾಗಿತ್ತು. ಗೃಹೋಪಯೋಗಿ ವಸ್ತು, ಸುಂದರ ಕೆತ್ತನೆ ಬಾಗಿಲು ಚೌಕಟ್ಟುಮಾರಾಟ ಮಳಿಗೆಗಳು ಗಮನ ಸೆಳೆದರು.
ದುರ್ವಾಸನೆ: ಪ್ರತಿ ವರ್ಷವೂ ಶ್ರೀ ಚಾಂಗದೇವ ಮಹಾರಾಜರ ಉರೂಸ್ ಕಾರ್ಯಕ್ರಮದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ.
ಆದರೆ, ಆಗಮಿಸುವ ಭಕ್ತರಿಗೆ ಅಗತ್ಯ ಶೌಚಾಲಯವಿಲ್ಲದೇ ಪಕ್ಕದ ಜಮೀನುಗಳನ್ನೇ ಶೌಚಕ್ಕೆ ಉಪಯೋಗಿಸಿಕೊಂಡಿದ್ದರಿಂದ ಕ್ಷೇತ್ರಾದ್ಯಂತ ದುರ್ವಾಸನೆ ಬೀರುವಂತಾಯಿತು.
ಮರಳಿ ಮಾರಾಟಕ್ಕೆ: ಚಾಂಗದೇವರ ದರ್ಶನಕ್ಕೆ ತೆರಳುವಾಗ ಸಕ್ಕರೆ (ಓದಿಕೆ) ನೈವೇದ್ಯವಾಗಿ ತೆಗೆದುಕೊಂಡು ಹೋಗುವುದು ವಾಡಿಕೆ. ಭಕ್ತರು ಕಾಣಿಕೆ ರೂಪದಲ್ಲಿ ದೇವರಿಗೆ ಅರ್ಪಿಸಿದ ಸಾವಿರಾರು ಕ್ವಿಂಟಲ್ ಸಕ್ಕರೆಯನ್ನು ಮರಳಿ ವ್ಯಾಪಾರಸ್ಥರ ಕೈ ಸೇರುತ್ತಿರುವುದು ಕಂಡು ಬಂದಿತು.
ರಸ್ತೆ ದುಸ್ಥಿತಿ: ಶ್ರೀ ಕ್ಷೇತ್ರ ಯಮನೂರಿಗೆ ಬೈಪಾಸ್ ಮೂಲಕ ಆಗಮಿಸಿದ್ದ ಭಕ್ತರ ಪಡಿಪಾಟಲು ಹೇಳತೀರದಾಗಿತ್ತು. ಸಂಪೂರ್ಣ ರಸ್ತೆ ಹದಗೆಟ್ಟು ಹೋಗಿದ್ದರಿಂದ ವಾಹನಗಳು ಮುಂದಕ್ಕೆ ಚಲಿಸಲು ಸಾಧ್ಯವಾಗದೆ ನಿಂತುಕೊಂಡಿದ್ದು ಕಂಡು ಬಂದಿತು. ಸಾವಿರಾರು ಸಂಖ್ಯೆಯಲ್ಲಿ ಏಕಕಾಲಕ್ಕೆ ವಾಹನಗಳ ಭರಾಟೆ ಕಂಡು ಬಂದ ಪರಿಣಾಮ, ಭಕ್ತರು ಶ್ರೀ ಕ್ಷೇತ್ರಕ್ಕೆ ತೆರಳು ತೀರ ಪ್ರಯಾಸಪಡುವಂತಾಯಿತು.

ಧಾರವಾಡ: ಇಂದು ವಿವಿಧ ಗ್ರಂಥಗಳ ಲೋಕಾರ್ಪಣೆ
ಧಾರವಾಡ: ಇಲ್ಲಿನ ವಿಕಾಸ ಪರಿಷತ್ತಿನ ಶಾಲ್ಮಲಾ, ಮಲಪ್ರಭಾ ಶಾಖೆಗಳ ವತಿಯಿಂದ ಬೆಳಗಾವಿ ರಸ್ತೆಯ ನಡಕಟ್ಟಿ ಫಾರ್ಮ್ಸ್‌ನಲ್ಲಿ ಮಾ. 22ರಂದು ಸಂಜೆ 5ಕ್ಕೆ ಮಸಣ ಕಾಣದ ಅಲೆಗಳು, ಎಂಥಾ ಲೋಕವಯ್ಯಾ  ಗ್ರಂಥಗಳ ಲೋಕಾರ್ಪಣೆ, ಗಣ್ಯರಿಗೆ ಸನ್ಮಾನ, ಪರಿವಾರ ಮಿಲನ ಹಾಗೂ ಸಹಭೋಜನ ಸಮಾರಂಭ ನಡೆಯಲಿದೆ. ಅತಿಥಿಗಳಾಗಿ ನರಸೀಪುರದ ಶಾಂತಮುನಿ ಸ್ವಾಮಿಗಳು, ಸಾಹಿತಿ ಗಿರಡ್ಡಿ ಗೋವಿಂದರಾಜ, ಬಸವರಾಜ ನಡಕಟ್ಟಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement