ಪರಿಸರ ನಾಶದ ಅಭಿವೃದ್ಧಿ ಬೇಕೆ?
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 22
ಅಭಿವೃದ್ಧಿ ಯೋಜನೆಗಳಿಂದಾಗಿ ಕೃಷಿಭೂಮಿ ಕ್ಷೀಣಿಸುವಿಕೆ, ರಸ್ತೆಗಳ ಡಾಂಬರೀಕರಣ, ನೀರಿನ ಮೂಲಗಳ ನಶಿಸುವಿಕೆಯಂತಹ ಸಮಸ್ಯೆಗಳು ಇಂದು ನಮ್ಮನ್ನು ಕಾಡುತ್ತಿವೆ. ಮನುಷ್ಯನು ತನ್ನ್ನ ಸ್ವಾರ್ಥಕ್ಕಾಗಿ ಸಮಾಜಕ್ಕೆ ಕೆಡುಕನ್ನ್ನು ತಂದೊಡ್ಡುವ ಸಾಧ್ಯತೆಗಳ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ ಎಂದು ಪರಿಸರವಾದಿ ಸುರೇಶ ಹೆಬ್ಳಿಕರ್ ಹೇಳಿದರು.
ಶನಿವಾರ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಂತರ ವಲಯ ಯುವಜನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಹುಬ್ಬಳ್ಳಿ-ಅಂಕೋಲಾ ರೇಲ್ವೆ ಯೋಜನೆಯ ಅನುಷ್ಠಾನಕ್ಕೆ 50 ಲಕ್ಷಕ್ಕೂ ಹೆಚ್ಚು ಮರಗಳನ್ನು ಕಡಿಯಬೇಕಾಗುತ್ತದೆ. ಪರಿಸರ ನಾಶ ಮಾಡಿ ಇಂತಹ ಯೋಜನೆಯ ಅಗತ್ಯ ನಮಗೆ ಇದೆಯೇ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಮುಖ್ಯ ಅತಿಥಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಆರ್. ಅನಂತನ್, ಯುವಜನೋತ್ಸವ ಕಾರ್ಯಕ್ರಮ ಒಂದು ಸಾಂಸ್ಕೃತಿಕ ಕಾರ್ಯಕ್ರಮವಾಗಿದ್ದು ವಿಭಿನ್ನ್ನ ಪ್ರತಿಭೆಗಳ ಅನಾವರಣಕ್ಕೆ ಇದೊಂದು ಮಹತ್ವದ ವೇದಿಕೆಯಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕುಲಪತಿ ಡಾ. ಟಿ.ಆರ್. ಸುಬ್ರಹ್ಮಣ್ಯ, ಭಾರತದ ಸಂಸ್ಕೃತಿ ಅತ್ಯಂತ ಪುರಾತನವಾಗಿದ್ದು, ಧಾರ್ಮಿಕ ಲಕ್ಷಣಗಳಿಂದ ಕೂಡಿದೆ ಹಾಗೂ ಈ ಸಂಸ್ಕೃತಿಯು ಸ್ಫೂರ್ತಿದಾಯಕವಾಗಿದೆ. ಮನುಷ್ಯನ ಜೀವನ ಶೈಲಿ ಮತ್ತು ಅವನ ನಡವಳಿಕೆ ರೂಪಿಸುವಲ್ಲಿ ಸಂಸ್ಕೃತಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ, ವಿಶ್ವವಿದ್ಯಾಲಯದ ಕುಲಸಚಿವ ಟಿ. ವಿ. ಮಂಜುನಾಥ, ಮೌಲ್ಯಮಾಪನ ವಿಭಾಗದ ಕುಲಸಚಿವ ಡಾ. ಬಿ.ಎಸ್. ರೆಡ್ಡಿ, ಡೀನ್ ಮತ್ತು ಕಾನೂನು ಶಾಲೆಯ ನಿರ್ದೇಶಕ ಡಾ. ಸಿ.ಎಸ್. ಪಾಟೀಲ ಇದ್ದರು.