ಲೈಂಗಿಕ ಕಿರುಕುಳ ಆರೋಪ ನಿರಾಧಾರ: ಎಸ್‌ಡಿಎಂಸಿ ಅಧ್ಯಕ್ಷ ವಾಲಿಕಾರ
ಹುಬ್ಬಳ್ಳಿ: ಗ್ರಾಪಂ ಸದಸ್ಯ ಶಿವಾಜಿ ವಾಲಿಕಾರ, ಶಿಕ್ಷಕ ಎಂ.ಎಸ್. ಬಂಡಿವಡ್ಡರ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಹಿಂದೆ ದಾಯಾದಿ ಕಲಹ ಕಾರಣವಾಗಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ರಾಮಪ್ಪ ವಾಲಿಕಾರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಸ್.ಬಿ. ಪಾಟೀಲ ತಿಳಿಸಿದ್ದಾರೆ.
ಶನಿವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಕ ಬಂಡಿವಡ್ಡರ ಪ್ರಾಮಾಣಿಕ ಹಾಗೂ ನಿಷ್ಠಾವಂತ ಶಿಕ್ಷಕರಾಗಿದ್ದು, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಿಂದ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವೈಯಕ್ತಿಕ ದ್ವೇಷದಿಂದ ಗ್ರಾಪಂ ಸದಸ್ಯ ವಾಲಿಕಾರ, ಶಿಕ್ಷಕರ ಮೇಲೆ ಆರೋಪ ಮಾಡಿದ್ದು ನಿರಾಧಾರವಾಗಿದೆ ಎಂದರು. ತಾಲೂಕಿನ ಗಿರಿಯಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಂಡಿವಡ್ಡರ 17 ವರ್ಷಗಳಿಂದ ಸೇವೆ ಸಲ್ಲಿಸುತ್ತ ಬಂದಿದ್ದು, ವಿದ್ಯಾರ್ಥಿಗಳನ್ನು ಹದ್ದುಬಸ್ತನಲ್ಲಿಟ್ಟುಕೊಂಡು ಜ್ಞಾನಾರ್ಜನೆ ಮಾಡುತ್ತಿರುವ ಶಿಕ್ಷಕರ ವರ್ತನೆ ಗ್ರಾಪಂ ಸದಸ್ಯ ವಾಲಿಕಾರಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಂಡಿವಡ್ಡರ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಿರುವ ಗ್ರಾಪಂ ಸದಸ್ಯ ವಾಲಿಕಾರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದಲ್ಲದೆ, ಮಾನನಷ್ಟ ಮೊಕದ್ದಮೆಯನ್ನೂ ಹೂಡಲಾಗುವುದೆಂದರು. ಶಿಕ್ಷಕರ ಮೇಲೆ ಇಂತಹ ಆರೋಪ ಕೇಳಿ ಬಂದಾಗ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಉಷಾ, ತಕ್ಷಣ ವಿಷಯವನ್ನು ಎಸ್‌ಡಿಎಂಸಿ ಸದಸ್ಯರಿಗೆ ಹಾಗೂ ಶಾಲೆಯ ಪ್ರಧಾನ ಗುರುಗಳ ಗಮನಕ್ಕೆ ತರದೆ ಠಾಣೆಗೆ ದೂರು ನೀಡಿದ್ದು ಏಕಪಕ್ಷೀಯ ನಿರ್ಣಯವಾಗಿದೆ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದರು.
ಆದ್ದರಿಂದ ಅಧಿಕಾರಿ ಉಷಾ ವಿರುದ್ಧವೂ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸುವ ಮೂಲಕ ಮತ್ತೊಮ್ಮೆ ಈ ರೀತಿಯ ಅಚಾರ್ತು ನಡೆಯದಂತೆ ಆಗ್ರಹಿಸಲಾಗುವುದೆಂದರು. ಅಶೋಕ ಕಬ್ಬೇರ, ಎಚ್.ಎಂ. ಕುಂದರಗಿ, ವೈ.ಎಸ್. ಶರೇವಾಡ, ಜಿ.ಎನ್. ತೋಟದ, ಸಂಜು ಅಣ್ಣಿಗೇರಿ, ಜಿ.ಐ. ರಾಮಾಪುರ ಇದ್ದರು.