ಮಹಿಳೆಗೂ ರಾಜಕೀಯ ಸ್ಥಾನಮಾನ ಅವಶ್ಯ
ಧಾರವಾಡ: ಇಲ್ಲಿಯ ಡಿ.ಸಿ.ಕಾಂಪೌಂಡಿನಲ್ಲಿ ಇತ್ತೀಚೆಗೆ ಮಹಿಳಾ ದಿನ ಕಾರ್ಯಕ್ರಮ ಜರುಗಿತು. ಉದ್ಘಾಟಿಸಿ ಮಾತನಾಡಿದ ಮನಃಶಾಸ್ತ್ರಜ್ಞ ಡಾ. ಅನುಪಮಾ ಪಾಂಡುರಂಗಿ, ಇಂದಿನ ಪುರುಷ ಸಮಾಜ ಮಹಿಳೆಯನ್ನು ಸಮಯಕ್ಕೆ ತಕ್ಕಂತೆ ಉಪಯೋಗಿಸಿಕೊಳ್ಳುತ್ತಿದ್ದಾನೆ. ರಾಜಕೀಯದಲ್ಲಿ ಪುರುಷನ ಸರಿಸಮನಾಗಿ ಮಹಿಳೆಯರಿಗೆ ಸ್ಥಾನಮಾನ ಸಿಗುತ್ತಿಲ್ಲ ಎಂದು ಆಂತಕ ವ್ಯಕ್ತಪಡಿಸಿದರು. ಮಹಿಳೆ ತನ್ನ ಹಕ್ಕು, ಕರ್ತವ್ಯಗಳನ್ನು ಪಡೆದುಕೊಳ್ಳಲು ಹೋರಾಡಬೇಕು ಎಂದರು. ಮಹಿಳಾ ಮಂಡಳದ ಅಧ್ಯಕ್ಷೆ ಅಕ್ಕಮಹಾದೇವಿ ನಾಗಶೆಟ್ಟಿ, ಮಹಿಳೆ ಮನೆಯೊಳಗಿನ ಕೆಲಸಗಳನ್ನು ಶ್ರದ್ಧೆಯಿಂದ ಮಾಡಿದಷ್ಟೆ, ಸಮಾಜದಲ್ಲಿನ ಕೆಲಸಗಳನ್ನು ಮಾಡಲು ಸಮರ್ಥಳಿದ್ದಾಳೆ ಎಂಬುದಕ್ಕೆ ಇತಿಹಾಸದಲ್ಲಿನ ಘಟನೆಗಳೇ ಸಾಕ್ಷಿ. ಅದಕ್ಕಾಗಿ ಮಹಿಳೆಗೆ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಅವಕಾಶ ಲಭಿಸಬೇಕೆಂದರು. ಪರಿಮಳಾ ಜಕಾತಿ, ಚಂದ್ರಭಾಗಾ ಮೋರೆ, ಶೈಲಾ ಪಾಟೀಲ, ಆಶಾ ಬೆಣ್ಣಿ ಇದ್ದರು.
ಇನ್‌ಸ್ಪೆಕ್ಟರ್ ಚಲವಾದಿಗೆ ಪಿಎಚ್‌ಡಿ ಪದವಿ
ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಶಿವಾನಂದ ಚಲವಾದಿ ಅವರು ಅರ್ಥಶಾಸ್ತ್ರದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ನೀಡಿದೆ. ಅರ್ಥಶಾಸ್ತ್ರದಲ್ಲಿ ಅಗ್ರಿಕಲ್ಚರಲ್ ಎಕ್ಸಪೋರ್ಟ್ ಆಫ್ ಇಂಡಿಯಾ ಆ್ಯನ್ ಎಕನಾಮಿಕ್ ಅನಲೈಸಸ್ ಕುರಿತು ಶಿವನಂದ ಚಲವಾದಿ ಅವರು ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ. ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಎಲ್.ಡಿ. ವೈಕುಂಠೆ ಮಾರ್ಗದರ್ಶನ ನೀಡಿದ್ದಾರೆ.
ಅರ್ಥಶಾಸ್ತ್ರ ಸಮ್ಮೇಳನಕ್ಕೆ ಡಾ. ಶ್ರೀನಿವಾಸಗೌಡ ಆಯ್ಕೆ
ಧಾರವಾಡ: ಇಲ್ಲಿಯ ಕರ್ನಾಟಕ ಆರ್ಥಿಕ ಸಂಘದಲ್ಲಿ 2015ರಲ್ಲಿ ಆಯೋಜಿಸುವ 12ನೇ ವಾರ್ಷಿಕ ಅರ್ಥಶಾಸ್ತ್ರ ಸಮ್ಮೇಳನದ ಅಧ್ಯಕ್ಷರಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ಅರ್ಥಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಶ್ರೀನಿವಾಸಗೌಡ ಆಯ್ಕೆಯಾಗಿದ್ದಾರೆ. 11 ನೇ ಅರ್ಥಶಾಸ್ತ್ರ ವಾರ್ಷಿಕ ಸಮ್ಮೇಳನದ ಅಧ್ಯಕ್ಷ ಪ್ರೊ. ಆರ್.ಎಸ್. ದೇಶಪಾಂಡೆ ಶನಿವಾರ ಕವಿವಿ ಮಾನಸೊಲ್ಲಾಸ ಸಭಾಂಗಣದಲ್ಲಿ ಜರುಗಿದ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಈ ಆಯ್ಕೆಯನ್ನು ಪ್ರಕಟಿಸಿದರು. 12 ನೇ ಸಮ್ಮೇಳನ ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಮುಂದಿನ ವರ್ಷ ಮಾರ್ಚ್‌ನಲ್ಲಿ ಜರುಗಲಿದೆ ಎಂದೂ ಅವರು ತಿಳಿಸಿದರು. ಕುಲಸಚಿವ ಪ್ರೊ. ಎಚ್.ಟಿ. ಪೊತೆ, ರಾಷ್ಟ್ರದಲ್ಲಿ ಇಂದಿಗೂ ಶೇ.30 ರಷ್ಟು ಅಲೆಮಾರಿ ಜನರಿದ್ದು ಅವರ ಕುರಿತ ಆರ್ಥಿಕ ಚಿಂತನೆ ಅಗತ್ಯವಿದೆ. ಅರ್ಥಶಾಸ್ತ್ರಜ್ಞರು ಮತ್ತು ಅರ್ಥಶಾಸ್ತ್ರದ ಕಾರ್ಯಕರ್ತರು ಕಾರ್ಪೋರೇಟ್ ವಲಯಬಿಟ್ಟು ಗ್ರಾಮೀಣ ಜನ ಜೀವನದ ಮಧ್ಯೆ, ಕೃಷಿಕರ ನಡುವೆ ಬಂದು ನಿಲ್ಲುವ ಅವಶ್ಯಕತೆ ಇದೆ ಎಂದರು. ಡಾ. ಎಸ್.ಕೆ. ಹೆಗಡೆ, ಪ್ರೊ. ಎನ್.ಸಿ. ಪಾಟೀಲ, ಡಾ. ನಾಗಭೂಷಣ, ಡಾ. ಕೆ. ಎಂ. ವೀರಯ್ಯ, ಮಮತಾ ನಾಯ್ಕ, ಪ್ರೊ. ಪಿ.ಎಮ್. ಹೊನಕೇರಿ, ಪ್ರೊ. ಎಲ್.ಡಿ. ವೈಕುಂಠೆ, ಡಾ. ಎಸ್.ಟಿ. ಬಾಗಲಕೋಟಿ, ಅಶ್ವಿನಿ ಇದ್ದರು.
ಕ್ಷುಲ್ಲಕ ಕಾರಣಕ್ಕೆ ಜಗಳ
ಧಾರವಾಡ: ಕ್ಷುಲ್ಲಕ ಕಾರಣಕ್ಕಾಗಿ ನಡೆದ ಹೊಡೆದಾಟದಲ್ಲಿ ವ್ಯಕ್ತಿಯೊಬ್ಬ ಗಾಯಗೊಂಡ ಘಟನೆ ನಗರದ ಲೈನ್ ಬಜಾರ್‌ನಲ್ಲಿ ನಡೆದಿದೆ. ಅಷ್ಪಾಕ್ ಯಕ್ಕುಂಡಿ ಎಂಬುವನ ಮೇಲೆ ಸಹೋದರರಾದ ಸೋಮೇಶ ರಾಯಚೂರ ಮತ್ತು ಓಂಕಾರ ರಾಯಚೂರ ಎಂಬುವರು ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಕುರಿತಂತೆ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂವರ ಬಂಧನ
ಧಾರವಾಡ: ಇಲ್ಲಿಯ ಹರಭಟ್ಟ ಹೈಸ್ಕೂಲ್ ಹತ್ತಿರದ ಬೆಟದೂರ ಕ್ರಾಸ್ ಬಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕುಂದಗೋಳ ನಿವಾಸಿಗಳಾದ ದುಳಪ್ಪ ಈರಪ್ಪಾ ಹಾದಿಮನಿ, ಬಸಪ್ಪ ತಿಪ್ಪಣ್ಣ ಶೇರವಾಡ ಹಾಗೂ ಮೌನೇಶ್ವರ ಗುಡಜಿ ಕಲಾಲ ಬಂಧಿತರು. ಈ ಕುರಿತು ಪ್ರಕರಣ ದಾಖಲಾಗಿದೆ.