ಸಿಬಿಟಿಯೋ, ಆಟೋ ನಿಲ್ದಾಣವೋ!
-ಹೊನ್ನಪ್ಪ ಲಕ್ಕಮ್ಮನವರ
ಧಾರವಾಡ: ನಗರ ಬಸ್ ನಿಲ್ದಾಣ ಸಿಬಿಟಿಯೋ...ಆಟೋ ರಿಕ್ಷಾ ನಿಲ್ದಾಣವೋ..!?
ಹೌದು. ಇಲ್ಲಿಯ ನಗರ ಬಸ್ ನಿಲ್ದಾಣ (ಸಿಬಿಟಿ)ಕ್ಕೆ ಒಳಹೊಕ್ಕಾಗ ಇಂತಹದೊಂದು ಪ್ರಶ್ನೆ ತಲೆಯಲ್ಲಿ ಸುಳಿದಾಡದೆ ಇರಲಾರದು. ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಆಟೋಗಳದ್ದೇ ಕಾರುಬಾರು.
ಮೊದಲೇ ಚಿಕ್ಕದಾದ ಬಸ್ ನಿಲ್ದಾಣವಿದ್ದು, ನಗರದ ಹತ್ತಾರು ಬಡಾವಣೆಗಳಿಗೆ ಬಸ್ ಮೂಲಕ ಪ್ರಯಾಣಿಸುವ ಪ್ರಯಾಣಿಕರಿಗೆ ನಿಂತುಕೊಳ್ಳಲು ಜಾಗವಿಲ್ಲದೆ ಪರದಾಡುವುದು ಸಾಮಾನ್ಯವಾಗಿ ಕಂಡು ಬರುತ್ತದೆ.
ಸಿಬಿಟಿಯಲ್ಲಿ ನಾಲ್ಕೈದು ಬಸ್‌ಗಳಿದ್ದರೆ ಹತ್ತಾರು ಆಟೋ ರಿಕ್ಷಾಗಳು ಪ್ರಯಾಣಿಕರನ್ನು ಕೈ ಬೀಸಿ ಕರೆಯುತ್ತಿರುತ್ತವೆ. ಹೀಗಾಗಿ ಬಸ್‌ಗಳು ಖಾಲಿ-ಖಾಲಿ ಓಡಾಡುತ್ತಿದ್ದು ಸಂಸ್ಥೆಗೆ ನಷ್ಟವೂ ಆಗುತ್ತಿದೆ.
ಆಟೋಗಳ ಈ ದರ್ಬಾರ್ ಟ್ರಾಫಿಕ್ ಪೊಲೀಸರಿಗೆ ಗೊತ್ತಿದ್ದರೂ ಸಹ ತಮಗೇನೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
ಇಲ್ಲಿಯ ಮಾಳಾಪುರ, ಮದಿಹಾಳ ಹಾಗೂ ಮೆಹಬೂಬ ನಗರಗಳಿಗೆ ಹೋಗುವ ಬಸ್ ನಿಲ್ದಾಣಗಳಲ್ಲಂತೂ ರಿಕ್ಷಾಗಳೇ ತುಂಬಿರುತ್ತವೆ. ಈ ನಗರಗಳು ಬಸ್ ನಿಲ್ದಾಣಕ್ಕೆ ಸಮೀಪವಿರುವುದರ ಅಲ್ಲಿಯ ಬಸ್ಸಿನ ದರ ಕಡಿಮೆ ಇದೆ. ಮಾಳಾಪುರ ಹಾಗೂ ಮದಿಹಾಳ ನಗರಗಳಿಗೆ ರು. 4 ಇದ್ದರೆ, ಮೆಹಬೂಬ ನಗರಕ್ಕೆ ರು. 6 ಇದೆ.
ಹೀಗಾಗಿ ಒಂದೇ ಆಟೋದಲ್ಲಿ ನಾಲ್ಕೈದು ಜನ ಪ್ರಯಾಣಿಕರನ್ನು ಹತ್ತಿಸಿಕೊಂಡು ಒಬ್ಬರಿಗೆ ರು. 5 ಹಣವನ್ನು ತೆಗೆದುಕೊಳ್ಳುವುದರಿಂದ ರು. 20 ರಿಂದ ರು. 30ರ ವರೆಗೆ ಬಾಡಿಗೆ ದರ ಲಭಿಸುತ್ತದೆ. ಆದ್ದರಿಂದ ಆಟೋದವರು ಒಬ್ಬರಗಿಂತ ಒಬ್ಬರು ಮುಂಚೆ ಬಂದು ಬಸ್ ನಿಲ್ದಾಣದಲ್ಲಿ ಠಿಕಾಣಿ ಹೂಡುತ್ತಿದ್ದಾರೆ. ಟ್ರಾಫಿಕ್ ಪೊಲೀಸರ ಬೇಜವಾಬ್ದಾರಿತನ ಧೋರಣೆ ರಿಕ್ಷಾ ಚಾಲಕರಿಗೆ ಇನ್ನಷ್ಟು ಧೈರ್ಯ ತಂದಿದೆ.
ಆಟೋ ರಿಕ್ಷಾಗೆಂದು ಸಿಬಿಟಿ ಬಳಿಯೇ ಪ್ರತ್ಯೇಕ ನಿಲ್ದಾಣ ಕಲ್ಪಿಸಲಾಗಿದೆ. ಅಲ್ಲಿಗೆ ಬಂದ ಪ್ರಯಾಣಿಕರನ್ನು ಕರೆದೊಯ್ಯುವ ಬದಲು ಈ ರೀತಿ ಬಸ್ ನಿಲ್ದಾಣಕ್ಕೆ ನುಗ್ಗುವುದು ಎಷ್ಟರ ಮಟ್ಟಿಗೆ ಸರಿ. ಬಸ್ ಒಳ-ಹೊರಗೆ ಹೋಗುವಾಗ ಮಧ್ಯೆ ನಿಂತಿರುವ ಆಟೋ ದಾಟಿ ಹೋಗುವುದು ತುಂಬ ಕಷ್ಟವಾಗುತ್ತದೆ.
ಇದರಿಂದ ಬಸ್ಸಿನ ಚಾಲಕರಿಗೆ ಹಾಗೂ ಪ್ರಯಾಣಿಕರಿಗೂ ತುಂಬಾ ತೊಂದರೆಯಾಗುತ್ತಿದೆ ಎಂದು ಬಸ್ ಚಾಲಕರೊಬ್ಬರು 'ಕನ್ನಡಪ್ರಭ' ದೊಂದಿಗೆ ಮಾತನಾಡಿ ಆತಂಕ ವ್ಯಕ್ತಪಡಿಸಿದ್ದಾರೆ.
ಆಟೋಗಳ ತೊಂದರೆ ಜತೆಗೆ ಬೀದಿ ಬದಿ ವ್ಯಾಪಾರಸ್ಥರು ಬಸ್ ನಿಲ್ದಾಣದ ಬಳಿಯೇ ವ್ಯಾಪಾರ ಶುರು ಹಚ್ಚಿಕೊಂಡಿದ್ದು ಬಸ್ ತಿರುಗಿಸಲು ಸಾಧ್ಯವಾಗದ ಸ್ಥಿತಿ ಸಿಬಿಟಿಯಲ್ಲಿದೆ. ಸಾರಿಗೆ ಇಲಾಖೆ ಆಟೋದವರ ಕಾಟದಿಂದಾಗಿ ಬೇಸತ್ತು ಸಿಬಿಟಿಯಲ್ಲಿ ಸಿಸಿ ಟಿವಿ ಅಳವಡಿಸಿದ್ದರೂ ಸಹ ಯಾರೊಬ್ಬರೂ ತಲೆ ಕೆಡಿಸಿಕೊಳ್ಳದೆ ನಿತ್ಯವೂ ಬಸ್ ನಿಲ್ದಾಣದಲ್ಲಿಯೇ ಆಟೋ ನಿಲ್ಲಿಸುತ್ತಾರೆ. ಸುಲಭ ಹಾಗೂ ಬೇಗ ಮನೆ ತಲುಪುವ ದೃಷ್ಟಿಯಂದ ಕೆಲ ಪ್ರಯಾಣಿಕರು ಆಟೋಗಳ ಮೊರೆ ಹೋಗುವುದಂತೂ ನಿಜ. ಇದು ಸಾರಿಗೆ ಇಲಾಖೆಯ ಆರ್ಥಿಕ ನಷ್ಟಕ್ಕೂ ಕಾರಣವಾಗಿದೆ. ಆಟೋ ರಿಕ್ಷಾಗಳ ಹಾವಳಿಯಿಂದ ಕೆಲ ನಗರಗಳ ಬಸ್‌ನ್ನು ಸ್ಥಗಿತಗೊಳಿಸುವ ಹಂತಕ್ಕೂ ಇಲಾಖೆ ಬಂದಿದ್ದು, ಇದರಿಂದ ಸಾಮಾನ್ಯರು ಹಾಗೂ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಗಲಿದೆ.
ಆಟೋ ರಿಕ್ಷಾಗಳಿಂದ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಟ್ರಾಫಿಕ್ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕ ಸಚಿನ ನರಗುಂದಆಗ್ರಹಿಸಿದ್ದಾರೆ.