ಅದ್ಧೂರಿ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆ
ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 24
ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಹುರಿಯಾಳು ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಸೋಮವಾರ ಸಾವಿರಾರು ಬೆಂಬಲಿಗರೊಂದಿಗೆ ಆಗಮಿಸಿ ಜಿಲ್ಲಾಧಿಕಾರಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.
ನಾಮಪತ್ರ ಸಲ್ಲಿಸುವುದಕ್ಕೂ ಮುಂಚೆ ನಗರದ ಕರ್ನಾಟಕ ಕಾಲೇಜ್ ವೃತ್ತದಲ್ಲಿನ ಗಣೇಶ ದೇವಸ್ಧಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ನಂತರ ಮುರುಘಾಮಠಕ್ಕೆ ಭೇಟಿ ನೀಡಿ ಮೃತ್ಯುಂಜಯ ಸ್ವಾಮಿಗಳ ಆಶೀರ್ವಾದ ಪಡೆದರು.
ಅಲ್ಲಿಂದ ನಗರದ ಪಕ್ಷದ ಕಚೇರಿಗೆ ತೆರಳಿ ಅಲ್ಲಿದ್ದ ಸಾವಿರಾರು ಪಕ್ಷದ ಕಾರ್ಯಕರ್ತರು, ಜಿಲ್ಲಾ ನಾಯಕರು, ರಾಜ್ಯ ನಾಯಕರನ್ನು ಸೇರಿ ತೆರೆದ ವಾಹನದಲ್ಲಿ ಪಕ್ಷದ ಕಚೇರಿಯಿಂದ ಪ್ರಮುಖ ಬೀದಿಗಳಲ್ಲಿ ಮೂಲಕ ಡಿಸಿ ಕಚೇರಿಗೆ ತರೆಳಿದರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಬಿಜಿಪಿ ಸರ್ಕಾರದ ಆಡಳಿತದಲ್ಲಿ ಜಾರಿಗೆ ತಂದ ಯೋಜನೆಗಳು ಈ ಚುನಾವಣೆಯಲ್ಲಿ ಕೈ ಹಿಡಿಯಲಿವೆ. ಆದರೆ, ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಬದುಕನ್ನು ದುಸ್ತರವಾಗಿಸಿದೆ ಎಂದು ಆರೋಪಿಸಿದರು. ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲ, ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಶಾಸಕ ಅರವಿಂದ ಬೆಲ್ಲದ, ರಾಜಶೇಖರ ಸಿಂಧೂರ, ಸೋಮಣ್ಣ ಬೇವಿನಮರದ, ಶಂಕರ ಮುನೇನಕೊಪ್ಪ, ಸೀಮಾ ಮಸೂತಿ, ಜ್ಯೋತಿ ಜೋಶಿ, ಬಸನಗೌಡ ಪಾಟೀಲ ಯತ್ನಾಳ, ವೀರಭದ್ರಪ್ಪ ಹಾಲಹರವಿ, ಮೇಯರ್ ಶಿವು ಹಿರೇಮಠ, ಮೋಹನ ಲಿಂಬಿಕಾಯಿ, ಶಿವಾನಂದ ಅಂಬಡಗಟ್ಟಿ, ಅಶೋಕ ಕಾಟವೆ, ಲಿಂಗರಾಜ ಪಾಟೀಲ, ಮಹೇಶ ಟೆಂಗಿನಕಾಯಿ, ಮಲ್ಲನಗೌಡ ಪಾಟೀಲ, ಮೋಹನ ರಾಮದುರ್ಗ, ಸಿದ್ದಣ್ಣ ಕಂಬಾರ, ಕಲಂದರ ಮುಲ್ಲಾ ಇದ್ದರು.
3 ಗಂಟೆ ತಡ: ಬಿಜೆಪಿ ಅಭ್ಯರ್ಥಿ ಜೋಶಿ ಬೆಳಗ್ಗೆ 11ಕ್ಕೆ ನಾಮಪತ್ರ ಸಲ್ಲಿಸುವರಿದ್ದರು. ಆದರೆ, ವಿವಿಧ ಕಾರಣಗಳಿಂದ ನಾಮಪತ್ರ ಸಲ್ಲಿಕೆ ಮಾಧ್ಯಾಹ್ನ 2.30ರ ನಂತರ ಆರಂಭಗೊಂಡಿತು.