ಜೆಡಿಎಸ್ ಅಭ್ಯರ್ಥಿ ಘೋಷಣೆ ಇಂದು?
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 24
ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಕಾದು ನೋಡುವ ತಂತ್ರ ಅನುಸರಿಸುತ್ತಿರುವ ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿ ಅಂತಿಮಗೊಂಡ ಮೇಲಷ್ಟೇ ತನ್ನ ಅಭ್ಯರ್ಥಿ ಆಯ್ಕೆಗೊಳಿಸಲು ನಿರ್ಧರಿಸಿದೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾ ಜೆಡಿಎಸ್ ಗ್ರಾಮೀಣ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಘಟಕದ ಆಶ್ರಯದಲ್ಲಿ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಅಭ್ಯರ್ಥಿ ಯಾರೇ ಆದರೂ ಒಗ್ಗಟ್ಟಾಗಿ ಗೆಲುವಿಗೆ ಶ್ರಮಿಸಬೇಕು. ಇತರ ಪಕ್ಷಗಳೊಂದಿಗೆ ಒಳ ಒಪ್ಪಂದ ಅಥವಾ ಹೊಂದಾಣಿಕೆ ಮಾಡಿಕೊಳ್ಳಬಾರದು. ಪಕ್ಷದ ಹೈ ಕಮಾಂಡ್ ಧಾರವಾಡ ಕ್ಷೇತ್ರದ ಅಭ್ಯರ್ಥಿಗೆ ಆರ್ಥಿಕ ನೆರವು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ನೆರವಿನ ಅಗತ್ಯದ ಬಗ್ಗೆ ವರಿಷ್ಠರಿಗೆ ಮನವರಿಕೆ ಮಾಡಲಾಗುವುದು ಎಂದರು. ಧಾರವಾಡ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಜವಾಬ್ದಾರಿಯನ್ನು ಹೈಕಮಾಂಡ್ ತಮಗೆ ವಹಿಸಿದ್ದು, ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಸೇರಿ, ಆಯ್ಕೆ ಮಾಡೋಣ. ಆದರೆ, ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ವರೆಗೂ ಕಾಯಬೇಕಾಗುತ್ತದೆ ಎಂದು ತಿಳಿಸಿದರು.
ಜೆಡಿಎಸ್ ಧಾರವಾಡ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಮುಜಾಹಿದ್ ಕಾಂಟ್ರಾಕ್ಟರ್ ಮಾತನಾಡಿ, ಕ್ರಿಮಿನಲ್ ಆಪಾದನೆ ಇಲ್ಲದಿರುವ ಯೋಗ್ಯ ಅಭ್ಯರ್ಥಿ ಆಯ್ಕೆ ಮಾಡುವಂತೆ ಪಕ್ಷದ ಹೈಕಮಾಂಡ್ ಸೂಚನೆ ನೀಡಿದೆ. ಸದ್ಯ 10 ಆಕಾಂಕ್ಷಿಗಳಿದ್ದಾರೆ. ಪಕ್ಷ ಯಾರಿಗೇ ಟಿಕೆಟ್ ಕೊಟ್ಟರೂ ಗೊಂದಲ, ಗದ್ದಲಗಳಿಗೆ ಅವಕಾಶ ನೀಡದೆ ಗೆಲುವಿಗೆ ದುಡಿಯೋಣ. ಮಾ. 25ರಂದು ಮತ್ತೊಮ್ಮೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆ ನಡೆಸಿ, ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗುವುದು ಎಂದರು. ಮಹಾನಗರ ಜಿಲ್ಲಾಧ್ಯಕ್ಷ ರಾಜಣ್ಣ ಕೊರವಿ ಹಾಗೂ ಜಿಪಂ ಸದಸ್ಯ ಅಮೃತ ದೇಸಾಯಿ ಮಾತನಾಡಿ, ಪಕ್ಷಕ್ಕೆ ಅಲ್ಪಸಂಖ್ಯಾತರ ಮತಗಳು ಆಧಾರ. ಆದರೆ ಪಕ್ಷ ಆರ್ಥಿಕವಾಗಿ ಸದೃಢವಾಗಿಲ್ಲ ಎಂದರು. ಶ್ರೀಕಾಂತ ಜಮುನಾಳ, ಈಶ್ವರ ಸಾಣಿಕೊಪ್ಪ, ರಾಜು ಅಂಬುರೆ ಹಾಜರಿದ್ದರು.
ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳು: ಮಾಜಿ ಶಾಸಕ ಎಂ.ಎಸ್. ಅಕ್ಕಿ, ಜಿಪಂ ಮಾಜಿ ಸದಸ್ಯ ಬಿ.ಬಿ. ಗಂಗಧಾರಮಠ, ರೈತ ಮೋರ್ಚಾ ನಾಯಕ ಗಂಗಾಧರ ಪಾಟೀಲ ಕುಲಕರ್ಣಿ, ಪಾಲಿಕೆ ಸದಸ್ಯರಾದ ಅಲ್ತಾಫ್ ಕಿತ್ತೂರ, ಫೆಮೀದಾ ಕಿಲ್ಲೇದಾರ, ನ್ಯಾಯವಾದಿ ಎಚ್.ಎಲ್. ನದಾಫ, ಮುಖಂಡರಾದ ಹನುಮಂತಪ್ಪ ಬಂಕಾಪುರ, ನಾಸೀರ ಭಾಗವಾನ, ಶಿವಣ್ಣ ಬೆಲ್ಲದ, ಗುರುಪಾದಗೌಡ ಪಾಟೀಲ.
ಇಂದು ಕುಮಾರಸ್ವಾಮಿ ಭೇಟಿ
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾ. 25ರಂದು ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಆಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸುವಂತೆ ಕುಮಾರಸ್ವಾಮಿ ಸೂಚಿಸಿದ್ದು, ಅವರೊಂದಿಗೆ ಚರ್ಚಿಸಿ ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸಲಾಗುವುದು.
-ಬಸವರಾಜ ಹೊರಟ್ಟಿ,
ವಿಧಾನ ಪರಿಷತ್ ಸದಸ್ಯ