ಪ್ರಹ್ಲಾದ ಜೋಶಿ ನಾಮಪತ್ರ ಸಲ್ಲಿಕೆ
ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 24
ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಸೋಮವಾರ ಅಪಾರ ಬೆಂಬಲಿಗರೊಡನೆ ಇಲ್ಲಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು.
ಸುಭಾಸ ರಸ್ತೆಯಲ್ಲಿರುವ ಪಕ್ಷದ ಕಚೇರಿಯಿಂದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮಾಜಿ ಸಚಿವರಾದ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ ಅವರೊಂದಿಗೆ ಮೆರವಣಿಗೆಯಲ್ಲಿ ಬಂದ ಜೋಶಿ, ಮಧ್ಯಾಹ್ನ 2ರ ಸುಮಾರಿಗೆ ಜಿಲ್ಲಾ ಚುನಾವಣಾಧಿಕಾರಿ ಸಮೀರ್ ಶುಕ್ಲಾ ಅವರಿಗೆ ನಾಲ್ಕು ಸೆಟ್ ನಾಮಪತ್ರ ಸಲ್ಲಿಸಿದರು.
ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ, 2009ಕ್ಕೆ ಹೋಲಿಸಿದರೆ ಈ ಬಾರಿ ಭರದ ಪ್ರಚಾರ ಸಾಗಿದ್ದು, ಕ್ಷೇತ್ರದ ಎಲ್ಲ ಮತದಾರರಿಗೆ ಬಿಜೆಪಿ ತಲುಪಿದೆ. ಚುನಾವಣೆಯಲ್ಲಿ ಜಯ ಸಾಧಿಸುವ ವಿಶ್ವಾಸವೂ ಇದೆ. ಮೋದಿಯನ್ನು ಪ್ರಧಾನಿಯಾಗಿಸಲು ಯುವ ಪಡೆ ಸನ್ನದ್ಧವಾಗಿದ್ದು, ಮೋದಿ ಅಲೆ, ಪಕ್ಷದ ಅಭೂತಪೂರ್ವ ಪ್ರಚಾರ, ಹತ್ತು ವರ್ಷಗಳ ಕಾಲ ಕ್ಷೇತ್ರದಲ್ಲಿ ಮಾಡಿದ ಸಾಧನೆ ಎಲ್ಲವೂ ನನಗೆ ಜಯ ತಂದುಕೊಡಲಿವೆ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್, ಜೆಡಿಎಸ್ನಿಂದ ಯಾರು ಸ್ಪರ್ಧಿಸಿದರೂ ನಮ್ಮ ಗೆಲುವಿಗೆ ಅಡ್ಡಿಯಾಗಲ್ಲ. ಕೆಜೆಪಿ ಹಾಗೂ ಬಿಎಸ್ಆರ್ ಕಾಂಗ್ರೆಸ್ ವಿಲೀನದಿಂದ ರಾಜ್ಯದಲ್ಲಿ ಬಿಜೆಪಿಗೆ ಇನ್ನಷ್ಟು ಬಲ ಬಂದಿದೆ. ಶ್ರೀರಾಮಸೇನೆ ಬಿಜೆಪಿ ಸೇರುವ ಕುರಿತೂ ಚಿಂತಿಸಲಾಗಿತ್ತು. ಮತ ವಿಭಜನೆ ಆಗಬಾರದು, ಮೋದಿ ಪ್ರಧಾನಿಯಾಗಬೇಕು ಎಂಬ ಬಯಕೆಯಿಂದ ಮುತಾಲಿಕ್ ಅವರನ್ನು ರಾಜ್ಯ ಮುಖಂಡರು ಬಿಜೆಪಿಯಲ್ಲಿ ಸೇರಿಸಿಕೊಂಡಿದ್ದರು. ವರಿಷ್ಠರು ಬೇಡ ಎಂದಿದ್ದಾರೆ. ಆದರೆ, ಅವರಿಗೂ ಮನವರಿಕೆ ಮಾಡಿಕೊಡುತ್ತೇವೆ ಎಂದರು. ಜ್ಯೋತಿ ಜೋಶಿ, ಶಾಸಕ ಅರವಿಂದ ಬೆಲ್ಲದ, ರಾಜಶೇಖರ ಸಿಂಧೂರ, ಸೋಮಣ್ಣ ಬೇವಿನಮರದ, ಮಾಜಿ ಶಾಸಕ ಶಂಕರ ಮುನೇನಕೊಪ್ಪ, ಸೀಮಾ ಮಸೂತಿ ಇದ್ದರು.
ಮುಂದೆಯೂ ಪ್ರಾಮಾಣಿಕ: ಸೋಮವಾರ ಎಸ್.ಆರ್. ಹಿರೇಮಠ ಬಿಡುಗಡೆ ಮಾಡಿರುವ ಭ್ರಷ್ಟಾಚಾರಿಗಳ ಪಟ್ಟಿಯಲ್ಲಿ ಪ್ರಹ್ಲಾದ ಜೋಶಿ ಹೆಸರಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಜೋಶಿ, ರಾಜಕೀಯ ಇತಿಹಾಸದಲ್ಲಿ ನನ್ನ ಮೇಲೆ ಒಂದೂ ಆರೋಪವಿಲ್ಲ. ಎಸ್.ಆರ್. ಹಿರೇಮಠ ಹಿರಿಯರಿದ್ದು ಚುನಾವಣೆ ವೇಳೆ ಈ ರೀತಿ ಸುಮ್ಮನೆ ಆರೋಪಿಸಬಾರದು. ನನ್ನ ಪ್ರತಿಯೊಂದು ಲೆಕ್ಕ ಸ್ವಚ್ಛವಾಗಿದ್ದು, ಹಿಂದಿನಂತೆ ಮುಂದೆಯೂ ಪ್ರಾಮಾಣಿಕವಾಗಿಯೇ ಕೆಲಸ ಮಾಡುತ್ತೇನೆ ಎಂದರು.
ಶೂ ಪ್ರಸಂಗ: ಪ್ರಹ್ಲಾದ ಜೋಶಿ ಸೋಮವಾರ ಪಕ್ಷದ ಕಚೇರಿಯಿಂದ ಕಲಾಭವನ ಮಾರ್ಗವಾಗಿ ತೆರದ ವಾಹನದಲ್ಲಿ ನಾಮಪತ್ರ ಸಲ್ಲಿಸಲು ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬರುತ್ತಿರುವಾಗ ಮೆರವಣಿಗೆ ಮೇಲೆ ಕಿಡಿಗೇಡಿಗಳು ಎರಡು ಬೂಟು ಎಸೆದಿದ್ದಾರೆ. ಅದೃಷ್ಟವಶಾತ್ ಅವು ಜೋಶಿ ಅಥವಾ ಇತರ ಮುಖಂಡರಿಗೆ ತಗುಲಲಿಲ್ಲ. ಈ ಕುರಿತು ಜೋಶಿ ಅವರನ್ನು ಪ್ರಶ್ನಿಸಿದಾಗ, ಮೆರವಣಿಗೆ ಗದ್ದಲದಲ್ಲಿ ಈ ಪ್ರಸಂಗ ನನ್ನ ಗಮನಕ್ಕೆ ಬಂದಿಲ್ಲ. ಶೂಗಳು ನನಗೆ ಕಂಡೂ ಇಲ್ಲ ಎಂದು ಪ್ರತಿಕ್ರಿಯಿಸಿದರು.