28ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ: ಮುಂಜಾಗ್ರತಾ ಕ್ರಮ
ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 25
ಮಾ. 28ರಿಂದ ಏ. 9ರ ವರೆಗೆ ವಿವಿಧ ಪರೀಕ್ಷಾಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿವೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆಲ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ಆವರಣವನ್ನು ನಿರ್ಬಂಧಿತ ಪ್ರದೇಶ ಎಂದು ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ಅನಧಿಕೃತ ವ್ಯಕ್ತಿ ಮತ್ತು ವ್ಯಕ್ತಿಗಳ ಗುಂಪುಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಪರೀಕ್ಷೆಗಳ ವೇಳಾಪಟ್ಟಿಯಂತೆ ಪರೀಕ್ಷೆಗಳು ನಡೆಯುವ ದಿನದಂದು ಬೆಳಗ್ಗೆ 9.30ರಿಂದ ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ವ್ಯಾಪ್ತಿಯೊಳಗಿನ ಎಲ್ಲ ಝರಾಕ್ಸ ಕೇಂದ್ರಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ.
ಪರೀಕ್ಷೆ ಸಮಯದಲ್ಲಿ ಅವ್ಯವಹಾರ ನಡೆಯದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ತಾಲೂಕುವಾರು ವೀಕ್ಷಕರನ್ನು ನೇಮಿಸಲಾಗಿದೆ. ಎಲ್ಲ ವೀಕ್ಷಕರು ಪರೀಕ್ಷಾ ಅವಧಿಯಲ್ಲಿ ಅವರಿಗೆ ನಿಗದಿಪಡಿಸಿದ ತಾಲೂಕಿನಾದ್ಯಂತ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಪ್ರತಿ ದಿನ ಆಕಸ್ಮಿಕ ಭೇಟಿ ನೀಡಿ, ಪರೀಕ್ಷೆಗಳು ಸುಗಮವಾಗಿ ಮತ್ತು ನ್ಯಾಯಸಮ್ಮತವಾಗಿ ನಡೆಯುವಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿ ಸಮೀರ ಶುಕ್ಲ ಸೂಚಿಸಿದ್ದಾರೆ.
ಧಾರವಾಡ ಶಹರದ ವೀಕ್ಷಕರಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು, ಹುಬ್ಬಳ್ಳಿ ಶಹರ ವೀಕ್ಷಕರಾಗಿ ಪಾಲಿಕೆ ಜಂಟಿ ಆಯುಕ್ತರು, ನವಲಗುಂದ ವೀಕ್ಷಕರಾಗಿ ಜಿಲ್ಲಾ ಅಧಿಕಾರಿಗಳು ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಅಭಿವೃದ್ಧಿ ಇಲಾಖೆ ಅಧಿಕಾರಿ, ಕಲಘಟಗಿ ವೀಕ್ಷಕರಾಗಿ ಪಶು ಪಾಲನೆ ಮತ್ತು ಪಶುವೈದ್ಯ ಸೇವೆ ಇಲಾಖೆ ಉಪ ನಿರ್ದೇಶಕರು, ಕುಂದಗೋಳ ವೀಕ್ಷಕರಾಗಿ ಧಾರವಾಡ ಜಂಟಿ ಕೃಷಿ ನಿರ್ದೇಶಕರನ್ನು ನೇಮಕ ಮಾಡಲಾಗಿದೆ.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿನ ಪರೀಕ್ಷಾ ಕೇಂದ್ರಗಳಿಗೆ ವಿಶೇಷ ವೀಕ್ಷಕರನ್ನು ನೇಮಿಸಿ ವೀಕ್ಷಣಾ ಜಾಗೃತ ದಳ ರಚಿಸಲಾಗಿದೆ. ವೀಕ್ಷಕ ಜಾಗೃತ ದಳದ ಅಧಿಕಾರಿಗಳು ಮಾ. 28ರಿಂದ 9ರವರೆಗೆ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಮುಗಿಯುವವರೆಗೂ ಹಾಜರಿದ್ದು, ಯಾವುದೇ ಅವ್ಯವಹಾರಗಳು ಜರುಗದಂತೆ ಕಟ್ಟುನಿಟ್ಟಾಗಿ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶುಕ್ಲಾ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಧಾರವಾಡ: ನವ್ಯ-ದಿವ್ಯ ಸಂಗಮ ಕಾರ್ಯಕ್ರಮ
ಧಾರವಾಡ: ಇಲ್ಲಿನ ಸತ್ಯಸಾಯಿ ಮಹಿಳಾ ಕಾಲೇಜಿನಲ್ಲಿ ಜರುಗಿದ ನವ್ಯ-ದಿವ್ಯ ಸಂಗಮ ಕಾರ್ಯಕ್ರಮವನ್ನು ಪ್ರಾದೇಶಿಕ ಜಂಟಿ ನಿರ್ದೇಶಕ ಡಾ. ದೇವಾನಂದ ಗಾಂವಕರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತದ ಸಂಸ್ಕೃತಿ ಮತ್ತು ಪರಂಪರೆ ಉಳಿಸಿ ಬೆಳೆಸುವಲ್ಲಿ ಯುವಕರ ಪಾತ್ರ ಮಹತ್ತರವಾದದ್ದು. ಸಮಯದ ಉಪಯೋಗ ಮಾಡಿಕೊಳ್ಳುವುದರ ಜೊತೆಗೆ ಪ್ರತಿಭೆ ಮತ್ತು ಜ್ಞಾನ ಬೆಳೆಸಿಕೊಳ್ಳಬೇಕು. ಪರಿವರ್ತನೆ ಜಗತ್ತಿನ ನಿಯಮ ಎಂದು ತಿಳಿದು ನಮ್ಮ ಜೀವನದ ಗತಿ ಕೂಡ ಧನಾತ್ಮಕವಾಗಿ ಬದಲಾವಣೆಯಾಗುವಂತೆ ನೋಡಿಕೊಳ್ಳಬೇಕು ಎಂದರು.
ಶ್ರಾವಣಿ ಪವಾರ ಮಾತನಾಡಿ, ಜೀವನದ ಅನುಭವಗಳೇ ನಮಗೆ ಪಾಠ ಹೇಳಿಕೊಡುತ್ತವೆ. ನಾವು ಪ್ರಗತಿ ಹೊಂದಲು ಸಕಾರಾತ್ಮಕ ಆಲೋಚನೆಗಳಿರಬೇಕು. ನಮ್ಮ ಗುರಿ ನಮ್ಮ ಜೀವನದ ಮುಖ್ಯ ಧ್ಯೇಯವಾಗಿರಬೇಕು ಎಂದರು. ಇದೆ ಸಂದರ್ಭದಲ್ಲಿ ಶ್ವೇತಾ ಭಟ್ ವರ್ಷದ ಅತ್ಯತ್ತಮ ವಿದ್ಯಾರ್ಥಿನಿ ಪ್ರಶಸ್ತಿ ಪಡೆದರು. ಶ್ರೀ ಸತ್ಯಸಾಯಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ವಿನೋದಿನಿ ಮಹಿಷಿ, ಪ್ರಾಂಶುಪಾಲ ಡಾ.ರೇಣುಕಾ ಮೇಟಿ, ಲೀನಾ ಪಾಟೀಲ, ಅನುರಾಧಾ ದೇಶಪಾಂಡೆ, ರೇಣುಕಾ ಹತ್ತಿಕಾಳ, ಬಿ.ಎಸ್. ಗೋಣಿ, ಮಂಜುನಾಥಗೌಡ ಪಾಟೀಲ, ಇಂದಿರಾ ಮೇಲಮಾಳ ಇದ್ದರು.