ಧಾರವಾಡದಿಂದ ಸ್ಪರ್ಧೆ: ಮುತಾಲಿಕ್ ನಿರ್ಧಾರ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 25
ಬಿಜೆಪಿ ಸೇರಿದ ಕ್ಷಣ ಮಾತ್ರದಲ್ಲಿಯೇ ಹೊರದಬ್ಬಿಸಿಕೊಂಡ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ್ ಧಾರವಾಡ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದು, ಮಾ. 26ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದಲೂ ಸ್ಪರ್ಧಿಸಲು ಚಿಂತನೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು, ಶ್ರೀರಾಮ ಸೇನೆಯ ಕಾರ್ಯಕರ್ತರ, ಅಭಿಮಾನಿಗಳ ಒತ್ತಾಸೆ ಮೇರೆಗೆ ಸ್ಪರ್ಧಿಸುತ್ತಿರುವೆ. ನನ್ನನ್ನು ಬಿಜೆಪಿಗೆ ಸೇರಿಸಿಕೊಂಡು ಪುನಃ ಹೊರದಬ್ಬುವಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್, ಪ್ರಹ್ಲಾದ ಜೋಶಿ ಹಾಗೂ ತಂಡದ ಕೈವಾಡವಿದೆ ಎಂದು ದೂರಿದರು. ನಾನು ಬಿಜೆಪಿ ಸೇರಿ, ಅಧಿಕಾರ ಕೈಗೆ ಸಿಕ್ಕರೆ ತಮ್ಮ ಆಟ ನಡೆಯುವುದಿಲ್ಲ ಎಂದು ಲೆಕ್ಕಿಸಿ, ಬಿಜೆಪಿ ಸೇರಿಸಿಕೊಂಡವರಂತೆ ನಾಟಕವಾಡಿ ನನಗೆ ಅವಮಾನ ಮಾಡಿದರು ಎಂದು ಮುತಾಲಿಕ್ ತಿಳಿಸಿದರು. ಬಿಜೆಪಿ ಮುಸ್ಲಿಮರ ಮತಕ್ಕಾಗಿ ಜೊಲ್ಲು ಸುರಿಸುತ್ತಿದೆ. ಆದರೆ ನನಗೆ ಮುಸ್ಲಿಮರ ಮತ ಬೇಕಾಗಿಲ್ಲ. ಹಿಂದುತ್ವದ ಹಾದಿಯಲ್ಲಿ ಹೊರಟಿರುವ ನನಗೆ ಹಿಂದೂಗಳು ಮತ ನೀಡಿ ಗೆಲ್ಲಿಸುತ್ತಾರೆ. ಶ್ರೀರಾಮ ಸೇನೆಯ ಅಭ್ಯರ್ಥಿಯಾಗಿ ಬೆಳಗಾವಿ ಕ್ಷೇತ್ರದಿಂದ ರಮಾಕಾಂತ ಕೊಂಡುಸ್ಕರ್ ಕಣಕ್ಕಿಳಿಯಲಿದ್ದಾರೆಂದರು. ಮಂಗಳೂರಿನ ಪಬ್ ಮೇಲೆ ದಾಳಿ ಕುರಿತಾಗಿ ನಾನು ಆಗಲೇ ಕ್ಷಮೆ ಯಾಚಿಸಿದ್ದೇನೆ. ಈಗಲೂ ಕ್ಷಮೆ ಯಾಚಿಸುತ್ತಿದ್ದೇನೆ. ಆದರೆ ರಾಜಕೀಯವಾಗಿ ನನ್ನನ್ನು ತುಳಿಯಲು ಪಬ್ ದಾಳಿಯ ಸೋಗು ಹಾಕಲಾಗುತ್ತಿದೆ. ಪಬ್ ಮೇಲೆ ದಾಳಿ ನಡೆಸಿದ್ದು ತಪ್ಪು ಎಂದು ರಾಜನಾಥ್ಸಿಂಗ್ ತಮ್ಮ ವಿರುದ್ಧ ಕ್ರಮ ಕೈಗೊಂಡಿದ್ದೇ ಆದಲ್ಲಿ, ಬಿಜೆಪಿ ಪಬ್, ಕ್ಲಬ್, ಮಹಿಳೆಯರ ಅರೆಬೆತ್ತಲೆ ನೃತ್ಯ ಸಂಸ್ಕೃತಿಗೆ ಬೆಂಬಲ ನೀಡುತ್ತದೆ ಎಂದಾಯಿತು. ಸುಷ್ಮಾ ಸ್ವರಾಜ್ ಹಣೆ ತುಂಬ ಕುಂಕುಮ ಇಟ್ಟುಕೊಂಡರೆ ಸಾಲದು, ಸಂಸ್ಕೃತಿಗೆ ತಕ್ಕಂತೆ ನಡೆಯಬೇಕು. ಲಂಡನ್ನಲ್ಲಿರುವ ಸುಷ್ಮಾ ಮಗಳು ಪಬ್ಗೆ ಹೋಗಿ ಕುಡಿಯುವುದಿಲ್ಲ ಎನ್ನುವುದು ಏನು ಗ್ಯಾರಂಟಿ? ಒಂದೊಮ್ಮೆ ಕುಡಿದರೆ ಸುಷ್ಮಾ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದಾಯಿತು ಎಂದು ಮುತಾಲಿಕ್ ಕುಟುಕಿದರು.
ಈಗ ಸ್ಪರ್ಧೆ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸಂಧಾನಕ್ಕೆ ಬರುವ ಬಿಜೆಪಿಗರಿಗೆ ಶ್ರೀರಾಮ ಸೇನೆಯ ಬಾಗಿಲು ಮುಚ್ಚಿದೆ. ಯಾವುದೇ ಕಾರಣಕ್ಕೂ ಮೋದಿಯನ್ನು ಬೆಂಬಲಿಸಿ ಎನ್ನುವುದಿಲ್ಲ, ಮೋದಿ ಹೆಸರು ಹೇಳಿಕೊಂಡು ಮತ ಪಡೆಯುವುದೂ ಇಲ್ಲ ಎಂದು ಮುತಾಲಿಕ್ ಸ್ಪಷ್ಟಪಡಿಸಿದರು.
ಬಿಜೆಪಿ ಕೆಲ ಮುಖಂಡರು ಎಸಗಿರುವ ಭ್ರಷ್ಟಾಚಾರದ ದಾಖಲೆಗಳು ಸಿಕ್ಕಿವೆ. ಚುನಾವಣೆಯ ಕಾಲಕ್ಕೆ ಹಂತಹಂತವಾಗಿ ಬಿಡುಗಡೆ ಮಾಡಲಾಗುವುದು. ಬಿಜೆಪಿಗರು ಮಾಡಿದ ದ್ರೋಹದಿಂದಾಗಿ ಮತದಾರರ ವಲಯದಲ್ಲಿ ತಮ್ಮ ಬಗ್ಗೆ ಅನುಕಂಪ ಸೃಷ್ಟಿಯಾಗಿದ್ದು ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.