ನಾಳೆಯಿಂದ ಇನ್ ಸಿಗ್ನಿಯಾ ಮೇಳ
ಧಾರವಾಡ: ಇಲ್ಲಿಯ ಎಸ್ಡಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇನ್ ಸಿಗ್ನಿಯಾ ರಾಷ್ಟ್ರಮಟ್ಟದ ಸಾಂಸ್ಕೃತಿಕ ಹಾಗೂ ತಾಂತ್ರಿಕ ಮೇಳ ಮಾ.27 ರಿಂದ 29 ರವರೆಗೆ ನಡೆಯಲಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ.ಎಸ್. ಮೋಹನ ಕುಮಾರ ಹೇಳಿದರು.
ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇಳದಲ್ಲಿ ಸುಮಾರು 100 ತಾಂತ್ರಿಕ ಕಾಲೇಜುಗಳಿಂದ ಸುಮಾರು 4 ಸಾವಿರ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. 82ಕ್ಕೂ ಹೆಚ್ಚು ಸ್ಪರ್ಧೆಗಳು ನಡೆಯಲಿವೆ. ಮಾ.27ರಂದು ಬೆಳಗ್ಗೆ 10ಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸುವರು. ಅತಿಥಿಗಳಾಗಿ ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಡಿ.ಪಿ. ಬಿರಾದಾರ ಹಾಗೂ ಮುಂಬೈನ ಮುಂಗಿ ಎಂಜಿನಿಯರಿಂಗ್ ಕಂಪನಿಯ ಅಧ್ಯಕ್ಷ ವಿವೇಕ ಮುಂಗಿ ಆಗಮಿಸಲಿದ್ದಾರೆ. 11 ಕ್ಕೆ ಕಾಲೇಜಿನ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಬಿಲ್ವಾರ್ ಏರಫೋರ್ಸ್ನಿಂದ ಏರ್ ಶೋ ಹಾಗೂ ಬಿಲ್ವಾರ್ ಸಂಸ್ಥೆಯಲ್ಲಿ ತರಬೇತಿ ಪಡೆದ ಕಾಲೇಜಿನ ವಿದ್ಯಾರ್ಥಿಗಳಿಂದ 5 ಏರ್ ಶೋ ನಡೆಯಲಿವೆ. ನಂತರ ಕರಕುಶಲ ಸ್ಪರ್ಧೆ, ರೋಬೋಟಿಕ್ಸ್, ಅಮೇಜಿಂಗ್ ರೇಸ್, ಸ್ಪಿಲ್ಟ್ ವಿಲ್ಲಾ, ಸ್ಲೋ ಬೈಕ್ ರೇಸ್, ಬೀಟ್ ಬಾಕ್ಸ್ ಪೇಂಟ್ ಬಾಲ್, ಕುರುಕ್ಷೇತ್ರ, ಚಕ್ರವ್ಯೂಹ, ಫೋಟೊಗ್ರಾಫಿ ಸೇರಿದಂತೆ ಹಲವು ಸ್ಪರ್ಧೆಗಳು ನಡೆಯಲಿವೆ ಎಂದರು.
ಅಂದು ಸಂಜೆ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ. 28ಕ್ಕೆ ತಾಂತ್ರಿಕ ವಿಭಾಗದ ತಾಂತ್ರಿಕ ಸ್ಪರ್ಧೆಗಳು ನಡೆಯಲಿದ್ದು, ಸಂಜೆ 7ಕ್ಕೆ ಗಾಯಕ ರೇಮೋ ಫರ್ನಾಂಡಿಸ್ ಹಾಗೂ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ನಂತರ ಸುನಿಲ ಪಾಲ್ರಿಂದ ಹಾಸ್ಯ ಸಂಜೆ ನಡೆಯುವುದು. ವಿದ್ಯಾರ್ಥಿಗಳಿಂದ ನಡೆಯುವ ಕರಕುಶಲ ಮೇಳದಿಂದ ಬಂದ ಹಣವನ್ನು ಅಂಧ ಮಕ್ಕಳ ಶಾಲೆಗೆ ಹಾಗೂ ಬಡ ವಿದ್ಯಾರ್ಥಿಗಳಿಗೆ ನೀಡಲಿದ್ದಾರೆ. ಗಾಂಧಿನಗರದ ಸಮರ್ಥನಂ ಶಾಲೆಗೆ ಈ ಸಂಗ್ರಹಿಸಿದ ಹಣವನ್ನು ದಾನ ನೀಡಲಾಗುವುದು ಎಂದು ಮೋಹನ ಕುಮಾರ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಡಾ.ಕೆ. ಗೋಪಿನಾಥ, ಪ್ರೊ. ವಿ.ಕೆ. ಪರ್ವತಿ, ಪ್ರೊ.ಕೆ.ಎ. ಸತೀಶ, ಪ್ರೊ. ಮಹೇಂದ್ರ ದೀಕ್ಷಿತ, ಪ್ರೊ. ಕೆ.ಸಿ. ಶಿಂಧೆ ಇದ್ದರು.