ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಹಿರಿಯ ರಂಗಕರ್ಮಿಗಳ ಸಮಾಧಿ ಅನಾಥ

Srinivasa Murthy VN
Updated On : 27 Mar 2014, 10:38 am

-ಶೀತಲ ಎಸ್.ಮುರಗಿ
ಕನ್ನಡಪ್ರಭ ವಾರ್ತೆ, ಕುಂದಗೋಳ, ಮಾ. 26
ರಂಗಭೂಮಿ ಮೇರು ನಟರಾದ ಯಲಿವಾಳದ ಸಿದ್ದಯ್ಯನವರು ಹಾಗೂ ಗುಡಗೇರಿಯ ಎನ್. ಬಸವರಾಜ ಅವರು ರಂಗಭೂಮಿಗೆ ಸಾಕಷ್ಟು ಸೇವೆ ಸಲ್ಲಿಸಿದರೂ ಅವರ ಸಮಾಧಿಗಳು ಮಾತ್ರ ಇನ್ನೂ ಅನಾಥವಾಗಿ ನಿಂತಿವೆ.
ಕುಂದಗೋಳ ತಾಲೂಕಿನ ಯಲಿವಾಳ ಗ್ರಾಮದಲ್ಲಿ ಜನಿಸಿದ ಸಿದ್ದಯ್ಯನವರು ರಂಗಭೂಮಿಯಲ್ಲಿ ಅಭಿನಯಿಸಿಬೇಕೆಂಬ ಮಹಾದಾಸೆಯಿಂದ 7ನೇ ವಯಸ್ಸಿನಲ್ಲಿಯೆ ರಂಗಭೂಮಿ ಸೇವೆಗೆ ಅಣಿಯಾದರು.  ಕೆಂಗಲ್ ಹನುಮಂತರಾಯ್ ರಚಿಸಿದ ರಕ್ತ ರಾತ್ರಿ ನಾಟಕದಲ್ಲಿ ಯಲಿವಾಳ ಸಿದ್ದಯ್ಯನವರು ಅಶ್ವತ್ಥಾಮನ ಪಾತ್ರದಲ್ಲಿ ಅಭಿನಯಿಸಿ ಎಲ್ಲರ ಚಿತ್ತ ತಮ್ಮತ್ತ ಸೆಳೆದಿದ್ದರು. ಅವರು ಏರು ಧ್ವನಿಯ ಕಂಠದ ಸಿರಿಗೆ ತಲೆದೂಗದ ಕಲಾಭಿಮಾನಿಗಳೇ ಇಲ್ಲ.
ರಕ್ತರಾತ್ರಿ ನಾಟಕವು ಗುಲ್ಬಗದಲ್ಲಿ ಪ್ರದರ್ಶನಗೊಂಡಾಗ, ಸಿದ್ದಯ್ಯನವರ ಕಂಠ ಪ್ರದರ್ಶನ ನೋಡಲು ಬಂದಿದ್ದ ಗರ್ಭಿಣಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಳಂತೆ. ಅಂತಹ ಧ್ವನಿಯಿಂದ ಸಿದ್ದಯ್ಯನವರು ರಕ್ತರಾತ್ರಿಯ ಅಶ್ವತ್ಥಾಮನ ಪಾತ್ರಕ್ಕೆ ಅದ್ಬುತ ಜೀವತುಂಬಿದ್ದರು.
ಅವರು 4ನೇ ತರಗತಿಯಾದರೂ ಹಲವು ನಾಟಕಗಳನ್ನು ರಚಿಸಿ ರಂಗಭೂಮಿಯ ಮೇಲೆ ಪ್ರಯೋಗಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವರನೋಡಿ ಹೆಣ್ಣು ಕೊಡು, ದುಡ್ಡಿನ ದರ್ಪ, ನೀ ಉಟ್ಟಿದ್ದು ಯಾರಿಗೆ, ಸೂಳಿಯ ಮಗ, ರಾಜಾ ವಿಕ್ರಮ್, ಸತ್ಯ ಸತ್ತಿತು ಹೀಗೆ ಅನೇಕ ನಾಟಕಗಳು ಜನಪ್ರಿಯವಾಗಿವೆ.
ದುಡ್ಡಿನ ದರ್ಪದಲ್ಲಿ ಮೈಮೇಲೆ ಸರಪಳಿಯೊಂದಿಗೆ ರಂಗವನ್ನು ಪ್ರವೇಶಿಸಿದರೆ ಕಲಾಭಿಮಾನಿಗಳು ಹುಚ್ಚೆದ್ದು, ಕೇಕೇ ಹಾಕುತ್ತಿದ್ದರು. ನೀ ಹುಟ್ಟಿದ್ದು ಯಾರಿಗೆ ನಾಟಕದಲ್ಲಿ ತಂದೆ ಪಾತ್ರಧಾರಿಯಾಗಿ ಬಸವರಾಜ ನಾಟಕದುದ್ದಕ್ಕೂ ತಂದೆ ಮಕ್ಕಳ ಸಂಬಂಧ ಇಂದಿನ ಯುಗದಲ್ಲಿ ಹೇಗಿದೆ ಎಂಬುದನ್ನು ನಟಿಸಿದರೆ ಜನರಲ್ಲಿ ಜಾಗೃತಿ ಮೂಡಿಸುವ ಕೌಟುಂಬಿಕ ನಾಟಕವನ್ನು ಮಾಡಿ ಕಲಾಭಿಮಾನಿಗಳ ಬಾಯಿಯಲ್ಲಿ ಇನ್ನೂ ಉಳಿದುಕೊಂಡಿದ್ದಾರೆ.
ಇದೀಗ ಗುಡಗೇರಿಯಲ್ಲಿ ಅವರ ಸಮಾಧಿ ಅನಾಥವಾಗಿದೆ. ಜನಪ್ರತಿನಿಧಿಗಳು ಈಗಲಾದರೂ ಇತ್ತ ಗಮನಹರಿಸುವರೇ ಎಂಬುದು ಕಾದುನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement