ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಎಚ್ಕೆ ಬೆಂಬಲಿಗರಿಗೆ ಟಿಕೆಟ್ ದೊರೆಯದಿರಲು ಕೈವಾಡ?

Srinivasa Murthy VN
Updated On : 28 Mar 2014, 11:05 am

-ಪ್ರಕಾಶ ಎಸ್. ಶೇಟ್
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 27
ಹಾವೇರಿ ಅಥವಾ ಧಾರವಾಡ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಸಚಿವ ಎಚ್.ಕೆ. ಪಾಟೀಲ ವಿಫಲರಾಗಿದ್ದಾರೆ. ಎಚ್ಕೆ ಪ್ರಯತ್ನಕ್ಕೆ ತಣ್ಣೀರೆರಚಲು ಪಕ್ಷದಲ್ಲೇ ಮತ್ತೊಂದು ಗುಂಪು ವ್ಯವಸ್ಥಿತ ಸಂಚು ರೂಪಿಸಿತ್ತು ಎನ್ನುವ ವಿಚಾರ ಈಗ ಚರ್ಚೆಯ ವಿಷಯ.
ಉತ್ತರ ಕರ್ನಾಟಕ ಭಾಗ, ವಿಶೇಷವಾಗಿ ಹಾವೇರಿ, ಗದಗ, ಧಾರವಾಡ ಜಿಲ್ಲೆಗಳಲ್ಲಿ ಎಚ್.ಕೆ. ಪಾಟೀಲರು ಹಿಡಿತ ಸಾಧಿಸಿದ್ದಾರೆ. ಅವರ ಪ್ರಭಾವ ತಗ್ಗಿಸಬೇಕೆನ್ನುವ ಉದ್ದೇಶದಿಂದ ಅವರು ಸೂಚಿಸಿದ ಅಭ್ಯರ್ಥಿಗಳಿಗೆ ಯಾವುದೇ ಕಾರಣಕ್ಕೂ ಟಿಕೆಟ್ ಸಿಗದಂತೆ ನೋಡಿಕೊಳ್ಳುವಲ್ಲಿ ಕಾಂಗ್ರೆಸ್‌ನ ಒಂದು ಗುಂಪು ಸಫಲವಾಗಿದೆ ಎಂಬ ಮಾತುಗಳು ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಬಲವಾಗಿ ಕೇಳಿ ಬರುತ್ತಿವೆ.
ಬೆಂಬಲಿಗರಿಗೆ ಸಿಕ್ಕಿಲ್ಲ ಟಿಕೆಟ್: ಹಾವೇರಿ ಲೋಕಸಭೆ ಕ್ಷೇತ್ರದಿಂದ ಸಹೋದರ ಡಿ.ಆರ್. ಪಾಟೀಲರಿಗೆ ಟಿಕೆಟ್ ನೀಡಬೇಕೆಂದು ಎಚ್.ಕೆ. ಪಾಟೀಲರು ಪಟ್ಟು ಹಿಡಿದಿದ್ದರು. ಸಹೋದರ ಎನ್ನುವ ಕಾರಣ ಒಂದಾದರೆ, ಡಿ.ಆರ್. ಪಾಟೀಲ ತಾವು ಪ್ರತಿನಿಧಿಸಿದ್ದ ಗದಗ ಕ್ಷೇತ್ರವನ್ನು ಎಚ್ಕೆಗೆ ಬಿಟ್ಟುಕೊಟ್ಟಿದ್ದು ಮತ್ತೊಂದು ಕಾರಣ. ಇದಾದ ಬಳಿಕ ಡಿ.ಆರ್. ಪಾಟೀಲರಿಗೆ ರಾಜಕೀಯ ಸ್ಥಾನಮಾನ ಸಿಗಲಿಲ್ಲ. ಲೋಕಸಭೆ ಕ್ಷೇತ್ರಕ್ಕೆ ಟಿಕೆಟ್ ಕೊಡಿಸುವ ಮೂಲಕ ಸಹೋದರ ನಿಷ್ಠೆ ಮೆರೆಯಲು ಎಚ್ಕೆ ಮುಂದಾಗಿದ್ದರು.
ಅಲ್ಲದೆ, ಧಾರವಾಡ ಲೋಕಸಭೆ ಕ್ಷೇತ್ರದಲ್ಲೂ ತಮ್ಮ ಬೆಂಬಲಿಗರಲ್ಲಿ ಒಬ್ಬರಿಗೆ ಟಿಕೆಟ್ ಕೊಡಿಸಲು ಎಚ್ಕೆ ಪಟ್ಟು ಹಿಡಿದಿದ್ದರು. ಅದಕ್ಕಾಗಿ ಹತ್ತಾರು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿದ್ದರು. ಪಾಟೀಲರ ಕಟ್ಟಾ ಬೆಂಬಲಿಗ ಎ.ಎಂ. ಹಿಂಡಸಗೇರಿ ತಮಗೆ ಟಿಕೆಟ್ ಸಿಗಬಹುದೆಂದು ಆಸೆ ಹೊತ್ತು ಕುಳಿತಿದ್ದರು. ಆದರೆ ಅಭ್ಯರ್ಥಿಗಳ ಪಟ್ಟಿ ಪ್ರಕಟವಾದಾಗ ನಿರೀಕ್ಷೆ ತಲೆಕೆಳಗಾಯಿತು.
ಎಚ್ಕೆ ಪಾಳೆಯದಲ್ಲಿ ಅಸಮಾಧಾನ: ಹಾವೇರಿ ಹಾಗೂ ಧಾರವಾಡ ಎರಡೂ ಕ್ಷೇತ್ರದಲ್ಲಿ ಎಚ್.ಕೆ. ಪಾಟೀಲ ಸೂಚಿಸಿದ ವ್ಯಕ್ತಿಗಳಿಗೆ ಟಿಕೆಟ್ ನೀಡದಿರುವುದು ಅವರ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಸ್ವತಃ ಎಚ್.ಕೆ. ಪಾಟೀಲರಿಗೆ ಪಕ್ಷದ ತೀರ್ಮಾನ ಮುಜುಗರ ಹುಟ್ಟಿಸಿರಲಿಕ್ಕೆ ಸಾಕು. ಆದರೆ ಪಕ್ಷದ ಸಿದ್ಧಾಂತಕ್ಕೆ ಅನುಸಾರ ನಡೆಯಬೇಕೆಂಬ ಕಾರಣಕ್ಕೆ, ಎಚ್ಕೆ ಬಹಿರಂಗವಾಗಿ ಎಲ್ಲೂ ತಮ್ಮ ಅಸಂತೋಷ ವ್ಯಕ್ತಪಡಿಸದಿದ್ದರೂ, ಬೆಂಬಲಿಗರು ಮಾತ್ರ ಅಲ್ಲಲ್ಲಿ ಇದನ್ನು ಹೊರಹಾಕುತ್ತಿದ್ದಾರೆ.
ರಾಜಕೀಯವಾಗಿ ಹಣಿಯಲು...: ಎಚ್.ಕೆ. ಪಾಟೀಲ ಸೂಚಿಸಿದ ಅಭ್ಯರ್ಥಿಗೆ ಟಿಕೆಟ್ ಸಿಗದಂತೆ ಮಾಡುವಲ್ಲಿ ಅವರನ್ನು ರಾಜಕೀಯವಾಗಿ ಹಣಿಯುವ ಉದ್ದೇಶವಿದೆ ಎನ್ನುವ ಅಂಶವನ್ನು ಅಲ್ಲಗಳೆಯುವಂತಿಲ್ಲ. ಎಚ್ಕೆ ರಾಜ್ಯ ಮಟ್ಟದಲ್ಲಿ ವೈಯಕ್ತಿಕ ವರ್ಚಸ್ಸು ಬೆಳೆಸಿಕೊಂಡವರು. ಕೇಂದ್ರ ನಾಯಕರ ಜತೆಗೂ ನೇರ ನಂಟು ಹೊಂದಿದವರು. ಒಂದೊಮ್ಮೆ ಉತ್ತರ ಕರ್ನಾಟಕ ಭಾಗದಲ್ಲಿ ಎಚ್ಕೆ ಪಾಟೀಲ ಮತ್ತವರ ಬೆಂಬಲಿಗರ ಪಡೆ ರಾಜಕೀಯ ನೆಲೆ ಗಟ್ಟಿ ಮಾಡಿಕೊಂಡರೆ, ರಾಜ್ಯ ರಾಜಕೀಯದಲ್ಲಿ ಗುರುತರವಾದ ಬದಲಾವಣೆ ಆಗುವ ಸಾಧ್ಯತೆಯಿತ್ತು. ಎಚ್ಕೆ ಪಾಟೀಲ ಮುಂಚೂಣಿಗೆ ಬಂದರೆ ಅನೇಕರ ರಾಜಕೀಯ ಸ್ಥಾನಮಾನಗಳು ಕೈ ತಪ್ಪಿ ಹೋಗುತ್ತವೆ ಎನ್ನುವ ಆತಂಕ ಎಚ್ಕೆಗೆ ಅಡ್ಡಗಾಲು ಹಾಕಲು ಕಾರಣ ಎಂದು ಅವರ ಅಭಿಮಾನಿಗಳು ಆಡಿಕೊಳ್ಳುತ್ತಿದ್ದಾರೆ.
ಈ ಬೆಳವಣಿಗೆಯಿಂದಾಗಿ ಎಚ್.ಕೆ. ಪಾಟೀಲ ಚುನಾವಣೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡರೂ ಅವರ ಬೆಂಬಲಿಗರು ಮನಃಪೂರ್ವಕವಾಗಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತಾರೆಂದು ಹೇಳುವುದು ಕಷ್ಟ. ಎಚ್ಕೆ ಹಾಗೂ ಇತರ ಅತೃಪ್ತ ಮುಖಂಡರನ್ನು ಕಾಂಗ್ರೆಸ್ ಹೇಗೆ ರಮಿಸುತ್ತದೆ ಎಂಬ ಅಂಶ ಕುತೂಹಲಕ್ಕೆ ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement