ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 26,364 ಮಕ್ಕಳು
ಧಾರವಾಡ: ಮಾ.28 ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಪ್ರಾರಂಭವಾಗಲಿದ್ದು, ಜಿಲ್ಲೆಯಲ್ಲಿ ಒಟ್ಟು 93 ಪರೀಕ್ಷಾ ಕೇಂದ್ರಗಳಲ್ಲಿ. 26,364 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ 12,836 ಗಂಡುಮಕ್ಕಳು ಮತ್ತು 12,400 ಹೆಣ್ಣು ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. 1,128 ವಿದ್ಯಾರ್ಥಿಗಳು ಎರಡನೇ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲೆಯ 93 ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರ ಸಭೆ ನಡೆಸಿ, ಜಿಲ್ಲೆಯಲ್ಲಿ ಪರೀಕ್ಷೆಗಳು ವ್ಯವಸ್ಥಿತವಾಗಿ ನಡೆಯುವಂತೆ ಸೂಚನೆ ನೀಡಿದ್ದಾರೆ. ಪರೀಕ್ಷಾ ಕೇಂದ್ರದ ಸುತ್ತಲೂ ಯಾವುದೇ ಅವ್ಯವಹಾರ ನಡೆಯದಂತೆ 144 ರ ಕಲಮಿನಂತೆ 200 ಮೀಟರ್ ವರೆಗಿನ ಪ್ರದೇಶದವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸಮೀಪದ ಝರಾಕ್ಸ್ ಅಂಗಡಿಗಳನ್ನು ಪರೀಕ್ಷಾ ದಿನದಂದು ತೆರೆಯದಂತೆ ಆದೇಶಿಸಲಾಗಿದೆ. ಪರೀಕ್ಷೆಗಳು ಸುವ್ಯವಸ್ಥಿತವಾಗಿ ನಡೆಯಲು ಜಿಲ್ಲಾ ಹಾಗೂ ತಾಲೂಕು ಮಟ್ಟದ ಜಾಗೃತ ದಳಗಳನ್ನು ರಚಿಸಿದ್ದಾರೆ. ಜಿಲ್ಲೆಯಲ್ಲಿ ನಡೆಯುವ ಪರೀಕ್ಷೆಗಳ ವೇಳಾ ಪಟ್ಟಿ ಹೀಗಿದೆ - ಮಾ. 28 ರಂದು ಪ್ರಥಮ ಭಾಷೆ ಬೆಳಗ್ಗೆ 9.30 ರಿಂದ 12.45. 29 ರಂದು ಕೋರ್ ವಿಷಯ (ಜೆ.ಟಿ.ಎಸ್. ಹಾಗೂ ಅಂಧ ವಿದ್ಯಾರ್ಥಿಗಳಿಗೆ) ಬೆಳಗ್ಗೆ 9.30 ರಿಂದ 12.15. ಏ. 1 ರಂದು ಗಣಿತ, ಬೆಳಗ್ಗೆ 9.30 ರಿಂದ 12.45 ವರೆಗೆ. ಏ.3 ವಿಜ್ಞಾನ, ಭಾರತೀಯ ರಾಜ್ಯಶಾಸ್ತ್ರ, ಪೌರನೀತಿ, ಸಂಗೀತ ವಿಷಯಗಳು ಬೆಳಗ್ಗೆ 9.30ರಿಂದ 12.45 ಹಾಗೂ ಮಧ್ಯಾಹ್ನ 2ರಿಂದ 5.05 ವರೆಗೆ, ಏ. 4 ರಂದು ತೃತೀಯ ಭಾಷೆ ಬೆಳಗ್ಗೆ 9.30 ರಿಂದ 12.15 ವರೆಗೆ, ಏ. 7 ರಂದು ಸಮಾಜ ವಿಜ್ಞಾನ ಬೆಳಗ್ಗೆ 9.30 ರಿಂದ 12.45 ವರೆಗೆ, 9 ರಂದು ದ್ವಿತೀಯ ಭಾಷೆ ಬೆಳಗ್ಗೆ 9.30 ರಿಂದ 12.15 ರವರೆಗೆ ನಡೆಯುತ್ತವೆ ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ಎಸ್.ವರ್ಧನ್ ತಿಳಿಸಿದ್ದಾರೆ.
ಕುಂದಗೋಳ: 7 ಕೇಂದ್ರಗಳಲ್ಲಿ ಪರೀಕ್ಷೆ
ಕುಂದಗೋಳ: ತಾಲೂಕಿನಲ್ಲಿ 2,058 ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಪರೀಕ್ಷೆ ಬರೆಯಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ಪಾಟೀಲ ಹೇಳಿದರು. ತಾಲೂಕಿನ 7 ಕೇಂದ್ರಗಳಾದ ಕುಂದಗೋಳದ ಹರಭಟ್ಟ ಹಾಗೂ ಶಿವಾನಂದ ಬಾಲಿಕಾ ಶಾಲೆ, ಸಂಶಿ ಫಕ್ಕೀರೇಶ್ವರ ಶಾಲೆ, ಗುಡಗೇರಿಯ ಸ.ಪ.ಪೂ ಕಾಲೇಜು, ಕೂಬಿಹಾಳದ ಎಸ್ ಯುಎಸ್ ಜೆ ಶಾಲೆ, ಕಮಡೊಳ್ಳಿಯ ಕಾಲೇಜು, ಯಲಿವಾಳದ ಜಿಎಸ್ಸೆಸ್ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು ಇಲಾಖೆಯಿಂದ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಕುರಿತಂತೆ ಎಲ್ಲ ಸೌಲಭ್ಯ ವಿದ್ಯಾರ್ಥಿಗಳಿಗೆ ಕಲ್ಪಿಸಲಾಗಿದೆ ಎಂದು ಶಿಕ್ಷಣಾಧಿಕಾರಿ ಮಂಗಳಾ ಪಾಟೀಲ ತಿಳಿಸಿದ್ದಾರೆ.