ಪ್ರಜೆಗಳ ಕಲ್ಯಾಣಕ್ಕೆ ಮತದಾನ ಅಗತ್ಯ: ಹುಲಮನಿ
ಹುಬ್ಬಳ್ಳಿ: ಎಲ್ಲರೂ ದೇಶದ ಅಭಿವೃದ್ಧಿ, ಏಕತೆ ಮತ್ತು ಪ್ರಜೆಗಳ ಕಲ್ಯಾಣಕ್ಕಾಗಿ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಬೇಕು ಎಂದು ಸಮಾಜಶಾಸ್ತ್ರದ ಪ್ರಾಧ್ಯಾಪಕ ಡಾ. ಬಿ.ಬಿ. ಹುಲಮನಿ ಹೇಳಿದರು.
ಕೆಎಲ್‌ಇ ಸಂಸ್ಥೆಯ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಹಾಗೂ ಎಚ್.ಎಸ್.ಕೋತಂಬ್ರಿ ವಿಜ್ಞಾನ ಸಂಸ್ಥೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆ ಮತ್ತು ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಭಾಗವಹಿಸುವಿಕೆ (ಸ್ವೀಪ್ ಯೋಜನೆ) ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ 2014ರ ಲೋಕಸಭೆ ಚುನಾವಣಾ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮತದಾನ ಪ್ರತಿಯೊಬ್ಬನ ಮೂಲ ಹಕ್ಕಿನ ಜೊತೆಗೆ ಕರ್ತವ್ಯವೂ ಆಗಿದೆ. ಸಾರ್ವಜನಿಕರು ನಿರ್ಭೀತಿಯಿಂದ ಮತ ಚಲಾವಣೆ ಮಾಡಲು ಇತರರಿಗೂ ಮನವರಿಕೆ ಮಾಡಬೇಕು. ತ್ಯಾಗ ಮತ್ತು ಬಲಿದಾನದಿಂದ ಪಡೆದ ಸ್ವಾತಂತ್ರ್ಯವನ್ನು ಪ್ರತಿಯೊಬ್ಬರೂ ರಕ್ಷಿಸಬೇಕು ಎಂದು ತಿಳಿಸಿದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಜೆ.ಸಿ. ನಾಯ್ಕರ ಮಾತನಾಡಿ, ಬೇಧ, ಭಾವವಿಲ್ಲದೆ ಪ್ರತಿಯೊಬ್ಬರೂ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಮಾಡಬೇಕು ಎಂದರು.
ಪ್ರೊ. ಎಸ್.ಎಸ್. ಹನಗವಾಡಿಮಠ, ಡಾ. ಎಸ್.ಕೆ. ಪಾಟೀಲ ಮಾತನಾಡಿ, ಈವರೆಗಿನ ಸಾರ್ವತ್ರಿಕ ಚುನಾವಣೆಗಳ ಅಂಕಿ ಅಂಶಗಳನ್ನು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಉಪ ಪ್ರಾಚಾರ್ಯ ಪ್ರೊ. ಎಂ.ಬಿ. ಪಾಟೀಲ, ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ದೇಶದಲ್ಲಿ ಉತ್ತಮ ಸರ್ಕಾರ ರಚನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು.
ಪ್ರೊ. ಪಿ.ಜಿ. ಪಾಟೀಲ, ಡಾ. ವಿಜಯಶ್ರೀ ಹಿರೇಮಠ, ಡಾ. ಆರ್.ಎಫ್. ಇಂಚಲ, ಬಿ.ಎಸ್. ಮಾಳವಾಡ, ಪ್ರೊ. ಎಂ.ಜೆ. ಹಡಗಲಿ ಇತರರಿದ್ದರು.